ಕಾರ್ತಿಕ ಮಾಸದ ಪುಣ್ಯಸ್ನಾನಕ್ಕೆ ಆಲಮಟ್ಟಿಯಲ್ಲಿ ಭಕ್ತಸಾಗರ: ಸುರಕ್ಷತಾ ಕ್ರಮಗಳಿಲ್ಲದೆ ನದಿಗಿಳಿದ ಭಕ್ತರು, ಸಂಚಾರ ದಟ್ಟಣೆಯಿಂದ ಪರದಾಟ
ವಿಜಯಪುರ, 17 ನವೆಂಬರ್ (ಹಿ.ಸ.): ಪವಿತ್ರ ಕಾರ್ತಿಕ ಮಾಸದ ಹಿನ್ನೆಲೆಯಲ್ಲಿ ಪುಣ್ಯಸ್ನಾನ ಮಾಡಲು ಆಲಮಟ್ಟಿ ಜಲಾಶಯದ ಹಿನ್ನೀರಿಗೆ ಲಕ್ಷಾಂತರ ಭಕ್ತರು ಆಗಮಿಸಿದ್ದು, ನದಿ ತೀರದಲ್ಲಿ ಭಕ್ತಸಾಗರವೇ ನಿರ್ಮಾಣವಾಗಿದೆ. ಆದರೆ, ಭಕ್ತರ ಸಂಖ್ಯೆಗೆ ಅನುಗುಣವಾಗಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿರುವುದು
ಕಾರ್ತಿಕ ಮಾಸದ ನಡಿ ಸ್ನಾನ


ವಿಜಯಪುರ, 17 ನವೆಂಬರ್ (ಹಿ.ಸ.):

ಪವಿತ್ರ ಕಾರ್ತಿಕ ಮಾಸದ ಹಿನ್ನೆಲೆಯಲ್ಲಿ ಪುಣ್ಯಸ್ನಾನ ಮಾಡಲು ಆಲಮಟ್ಟಿ ಜಲಾಶಯದ ಹಿನ್ನೀರಿಗೆ ಲಕ್ಷಾಂತರ ಭಕ್ತರು ಆಗಮಿಸಿದ್ದು, ನದಿ ತೀರದಲ್ಲಿ ಭಕ್ತಸಾಗರವೇ ನಿರ್ಮಾಣವಾಗಿದೆ. ಆದರೆ, ಭಕ್ತರ ಸಂಖ್ಯೆಗೆ ಅನುಗುಣವಾಗಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿರುವುದು ಹಾಗೂ ಗದ್ದನಕೇರಿ–ಆಲಮಟ್ಟಿ ಮುಖ್ಯ ರಸ್ತೆಯಲ್ಲಿ ಉಂಟಾದ ತೀವ್ರ ಸಂಚಾರ ದಟ್ಟಣೆಯಿಂದಾಗಿ ಸಾರ್ವಜನಿಕರು ಮತ್ತು ವಾಹನ ಸವಾರರು ಪರದಾಡುವಂತಾಗಿದೆ.

ಸುರಕ್ಷತಾ ಕ್ರಮಗಳಿಲ್ಲದೆ ನದಿಗಿಳಿದ ಭಕ್ತರು

ಕಾರ್ತಿಕ ಮಾಸದಲ್ಲಿ ಪವಿತ್ರ ನದಿಗಳಲ್ಲಿ ಪುಣ್ಯಸ್ನಾನ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿಂದ ವಿಜಯಪುರ, ಬಾಗಲಕೋಟೆ, ಬೆಳಗಾವಿ ಸೇರಿದಂತೆ ನೆರೆಯ ಜಿಲ್ಲೆಗಳಿಂದ ಸಾವಿರಾರು ಭಕ್ತರು ಕುಟುಂಬ ಸಮೇತರಾಗಿ ಆಲಮಟ್ಟಿ ಹಿನ್ನೀರಿಗೆ ಆಗಮಿಸಿದ್ದರು. ಬೆಳಗಿನ ಜಾವದಿಂದಲೇ ನದಿ ತೀರದಲ್ಲಿ ಜನಜಂಗುಳಿ ಕಂಡುಬಂದಿತು.

ಆದರೆ, ನದಿ ತೀರದಲ್ಲಿ ಮುನ್ನೆಚ್ಚರಿಕಾ ಫಲಕಗಳು, ತಡೆಗೋಡೆಗಳು, ನುರಿತ ಈಜುಗಾರರು ಅಥವಾ ರಕ್ಷಣಾ ದಳದ ಸಿಬ್ಬಂದಿಯನ್ನು ನಿಯೋಜಿಸದಿರುವುದು ಕಂಡುಬಂದಿದೆ. ನೀರಿನ ಆಳದ ಅರಿವಿಲ್ಲದೆ ಮಕ್ಕಳು, ಮಹಿಳೆಯರು ಹಾಗೂ ವೃದ್ಧರು ಸೇರಿದಂತೆ ನೂರಾರು ಭಕ್ತರು ನದಿಗಿಳಿದು ಪುಣ್ಯಸ್ನಾನ ಮಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಯಾವುದೇ ಅಹಿತಕರ ಘಟನೆ ಸಂಭವಿಸುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸ್ಥಳೀಯರು ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಗದ್ದನಕೇರಿ–ಆಲಮಟ್ಟಿ ಮಾರ್ಗದಲ್ಲಿ ವಾಹನ ಸವಾರರ ಪರದಾಟ

ನದಿ ತೀರದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದ್ದರೆ, ಮತ್ತೊಂದೆಡೆ ಗದ್ದನಕೇರಿ ವೃತ್ತದಿಂದ ಆಲಮಟ್ಟಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ಕಿಲೋಮೀಟರ್‌ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಖಾಸಗಿ ವಾಹನಗಳು, ಟ್ರ್ಯಾಕ್ಟರ್‌ಗಳು, ಟಂಟಂಗಳು ಹಾಗೂ ಬಸ್‌ಗಳ ಸಂಖ್ಯೆ ದಿಢೀರ್ ಹೆಚ್ಚಾದ ಪರಿಣಾಮ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು.

ಕಾರ್ತಿಕ ಮಾಸದ ಪುಣ್ಯಸ್ನಾನಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿರುವುದರಿಂದ ಗದ್ದನಕೇರಿ–ಆಲಮಟ್ಟಿ ಮಾರ್ಗದಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗಿದೆ. ವಾಹನಗಳು ಗಂಟೆಗಟ್ಟಲೆ ರಸ್ತೆಯಲ್ಲೇ ನಿಲ್ಲುವಂತಾಗಿದ್ದು, ಚಾಲಕರು ಮತ್ತು ಪ್ರಯಾಣಿಕರು ಮುಂದೆ ಸಾಗಲಾಗದೆ ಪರದಾಡುವಂತಾಗಿದೆ ಎಂದು ವಾಹನ ಚಾಲಕ ನರೇಂದ್ರ ಗಣಗೀರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಮುಖ ವೃತ್ತಗಳಲ್ಲಿ ಸಂಚಾರ ಪೊಲೀಸರ ಕೊರತೆ ಎದ್ದು ಕಾಣುತ್ತಿದ್ದು, ವಾಹನಗಳ ಸಂಚಾರ ನಿಯಂತ್ರಿಸಲು ಸಿಬ್ಬಂದಿ ಹರಸಾಹಸ ಪಡುವಂತಾಗಿದೆ.

ಮುಂದಿನ ದಿನಗಳಲ್ಲಿಯೂ ಕಾರ್ತಿಕ ಮಾಸದ ವಿಶೇಷ ದಿನಗಳಲ್ಲಿ ಭಕ್ತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ವಹಿಸಿ ಸೂಕ್ತ ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸುವುದು, ಸುಗಮ ಸಂಚಾರಕ್ಕೆ ಅಗತ್ಯ ಮಾರ್ಗಸೂಚಿಗಳನ್ನು ರೂಪಿಸುವುದು ಹಾಗೂ ನದಿ ತೀರದಲ್ಲಿ ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande