
ಗದಗ, 17 ನವೆಂಬರ್ (ಹಿ.ಸ.)
ಗದಗ ನಗರದ ಕರಿಯಮ್ಮನಕಲ್ಲು ಬಡಾವಣೆಯಲ್ಲಿರುವ ಶ್ರೀ ಮುಕ್ಕಣ್ಣೇಶ್ವರ ಮಠದ ಸದ್ಗುರು ಮುಕ್ಕಣ್ಣೇಶ್ವರ ಸ್ವಾಮಿಗಳ 102ನೇ ಪುಣ್ಯಾರಾಧನೆ ಮಹೋತ್ಸವವನ್ನು ನ.21ರಂದು ಶ್ರದ್ಧಾಭಕ್ತಿ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುವುದು ಎಂದು ಶ್ರೀ ಮುಕ್ಕಣ್ಣೇಶ್ವರ ಸೇವಾ ಸಮಿತಿ ಅಧ್ಯಕ್ಷ ಶಂಕರ ಹಾನಗಲ್ಲ ತಿಳಿಸಿದರು.
ಗದಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುಣ್ಯಾರಾಧನೆ ಅಂಗವಾಗಿ 20 ರವರೆಗೆ ಪ್ರತಿದಿನ ಸಂಜೆ 6.30ಕ್ಕೆ ಶಿವಾನಂದ ಮಠದ ಪೂಜ್ಯ ಶ್ರೀ ಶಿವಶರಣೆ ಮುಕ್ತಾ ತಾಯಿಯವರಿಂದ ಶ್ರೀ ಮುಕ್ಕಣ್ಣೇಶ್ವರ ಸ್ವಾಮಿಗಳ ಚರಿತ್ರಾಮೃತ ಪ್ರವಚನ ನಡೆಯಲಿದೆ. ಪ್ರವಚನದ ಬಳಿಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಪ್ರತಿದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತರಿಗೆ ಪ್ರತಿದಿನ ಪ್ರಸಾದ ಸೇವೆಯ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ನ.21ರಂದು ಶನಿವಾರ ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ಗುರು ಮುಕ್ಕಣ್ಣೇಶ್ವರ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ಹಾಗೂ ಶಿವನಾಮಸ್ಮರಣೆ ನಡೆಯಲಿದೆ. ಬೆಳಿಗ್ಗೆ 9 ಗಂಟೆಗೆ ಮಹಿಳೆಯರಿಂದ ಲಲಿತಾ ಸಹಸ್ರನಾಮ ಪಠಣ, ಕುಂಕುಮಾರ್ಚನೆ ಹಾಗೂ ಉಡಿ ತುಂಬುವ ಕಾರ್ಯಕ್ರಮ ಜರುಗಲಿವೆ. ಬಳಿಕ ಧರ್ಮಸಭೆ ಹಾಗೂ ಪಾಲಕಿ ಉತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ವಿವರಿಸಿದರು.
ಧರ್ಮಸಭೆಯ ಸಾನ್ನಿಧ್ಯವನ್ನು ತಂಗಡಗಿಯ ಅಪ್ಪಣ ಸಂಸ್ಥಾನ ಮಠದ ಶ್ರೀ ಅನ್ನದಾನ ಭಾರತಿ ಅಪ್ಪಣ ಮಹಾಸ್ವಾಮಿಗಳು, ಕೊಪ್ಪಳ ರಾಮಕೃಷ್ಣ ಆಶ್ರಮದ ಪೂಜ್ಯ ಚೈತ್ರಾನಂದ ಸ್ವಾಮಿಗಳು ಹಾಗೂ ದದೇಗಲ್ಲಿನ ಸಿದ್ಧಾರೂಢ ಮಠದ ಪೂಜ್ಯ ಆತ್ಮಾನಂದ ಭಾರತಿ ಸ್ವಾಮಿಗಳು ವಹಿಸಲಿದ್ದಾರೆ. ಶಿವಾನಂದ ಮಠದ ಪೂಜ್ಯ ಶ್ರೀ ಶಿವಶರಣೆ ಮುಕ್ತಾ ತಾಯಿಯವರು ಪ್ರವಚನ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ನಾಗರಾಳದ ಕೃಷ್ಣಾಜಿ ಬಾಬುರಾವ ದೇಶಪಾಂಡೆ ಭಾಗವಹಿಸಲಿದ್ದು, ಅತಿಥಿಗಳಾಗಿ ಗದಗ-ಬೆಟಗೇರಿ ನಗರಸಭೆ ಸದಸ್ಯರಾದ ವಿಜಯಲಕ್ಷ್ಮಿ ಎಸ್. ದಿಂಡೂರ, ರಾಘವೇಂದ್ರ ಬಿ. ಯಳವತ್ತಿ, ಪ್ರಥಮ ದರ್ಜೆ ಗುತ್ತಿಗೆದಾರ ಕರಬಸಪ್ಪ ಹಂಚಿನಾಳ ಹಾಗೂ ಕುರ್ತಕೋಟಿಯ ಜಮೀನ್ದಾರ ಅಪ್ಪಣ್ಣ ಇನಾಮತಿ ಆಗಮಿಸಲಿದ್ದಾರೆ.
ನ.20ರಂದು ರಂಗೋಲಿ ಸ್ಪರ್ಧೆ
ಪುಣ್ಯಾರಾಧನೆ ಅಂಗವಾಗಿ ಮಹಿಳೆಯರಿಗಾಗಿ ನ.20ರಂದು ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿದೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ಪರ್ಧೆಯನ್ನು ಯಶಸ್ವಿಗೊಳಿಸಬೇಕು ಎಂದು ಸಮಿತಿ ಮನವಿ ಮಾಡಿದೆ.
ಸುದ್ದಿಗೋಷ್ಠಿಯಲ್ಲಿ ಸೇವಾ ಸಮಿತಿ ಉಪಾಧ್ಯಕ್ಷ ಎಸ್.ಎಸ್. ಪಾಟೀಲ, ಕಾರ್ಯದರ್ಶಿ ಎಸ್.ಕೆ. ಮಾಗೊಂಡ, ಎಚ್.ಕೆ. ಚಲವಾದಿ, ಸಮಿತಿಯ ಆರ್.ಬಿ. ಒಡೆಯರ, ಪರಶುರಾಮ ಶಿಂಧೆ ಸೇರಿದಂತೆ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / lalita MP