ಕಬ್ಬಿನ ದರ ನಿಗದಿಯಲ್ಲಿ ತಾರತಮ್ಯ ಆರೋಪ: ಮಂಡ್ಯ ರೈತರ ಆಕ್ರೋಶ
ಟನ್ ಕಬ್ಬಿಗೆ 3,800 ರೂ. ಮುಂಗಡ ದರ ನಿಗದಿಗೆ ಆಗ್ರಹ; ಇಲ್ಲದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ
Mandya-Sugarcane-Farmers-Demand-Rs-3800-Per-Tonne


ಮಂಡ್ಯ, 17 ನವೆಂಬರ್ (ಹಿ.ಸ.):

ಕಬ್ಬಿನ ದರ ನಿಗದಿಯಲ್ಲಿ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದ ರೈತರ ನಡುವೆ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಮಂಡ್ಯ ಜಿಲ್ಲೆಯ ಕಬ್ಬು ಬೆಳೆಗಾರರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉತ್ತರ ಕರ್ನಾಟಕದ ಮಾದರಿಯಲ್ಲೇ ಮಂಡ್ಯ ಜಿಲ್ಲೆಯ ರೈತರಿಗೂ ಪ್ರತಿ ಟನ್ ಕಬ್ಬಿಗೆ 3,800 ರೂ. ಮುಂಗಡ ದರ ನಿಗದಿಪಡಿಸಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಪ್ರತಿ ಟನ್ ಕಬ್ಬಿಗೆ 3,800 ರೂ. ದರ ನಿಗದಿಪಡಿಸಲಾಗಿದ್ದು, ಕಟಾವು ಮತ್ತು ಸಾಗಣೆ ವೆಚ್ಚವನ್ನು ಕಾರ್ಖಾನೆಗಳೇ ಭರಿಸುತ್ತಿವೆ. ಆದರೆ ಮಂಡ್ಯ ಜಿಲ್ಲೆಯ ರೈತರ ಮೇಲೆ ಈ ವೆಚ್ಚದ ಹೊರೆಯನ್ನು ಹಾಕಲಾಗುತ್ತಿದೆ.

ಒಂದೇ ರಾಜ್ಯದಲ್ಲಿ ಕಬ್ಬಿಗೆ ಎರಡು ರೀತಿಯ ದರ ನಿಗದಿಪಡಿಸಿರುವುದು ರೈತರಿಗೆ ಅನ್ಯಾಯ ಮಾಡಿದಂತಾಗಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿದ ರೈತರು, ಉತ್ತರ ಕರ್ನಾಟಕದ ರೈತರಿಗೆ ಒಂದು ದರ, ದಕ್ಷಿಣ ಕರ್ನಾಟಕದ ರೈತರಿಗೆ ಮತ್ತೊಂದು ದರ ನೀಡಲಾಗುತ್ತಿದೆ. ನಮ್ಮ ಜಿಲ್ಲೆಯಲ್ಲೂ ಕಬ್ಬಿನ ಇಳುವರಿ ಉತ್ತಮವಾಗಿದೆ.

ಆದರೂ ಕಾರ್ಖಾನೆಗಳು ಜ್ಯೂಸ್ ಅನ್ನು ಮೊಲಾಸಿಸ್ ಆಗಿ ಪರಿವರ್ತಿಸಿ, ಇಳುವರಿ ಕಡಿಮೆ ತೋರಿಸುವ ಮೂಲಕ ರೈತರಿಗೆ ಅನ್ಯಾಯ ಮಾಡುತ್ತಿವೆ ಎಂಬ ಅನುಮಾನವಿದೆ.

ಈ ಮೂಲಕ ಕಾರ್ಖಾನೆಗಳು ಲಾಭ ಮಾಡಿಕೊಳ್ಳುತ್ತಿದ್ದು, ರೈತರನ್ನು ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು.

ಕಬ್ಬು ಬೆಳೆಯಲು ರೈತರು ಎಷ್ಟು ಶ್ರಮಪಡುತ್ತಾರೆ ಎಂಬುದು ಕಾರ್ಖಾನೆ ಮಾಲೀಕರಿಗೆ ತಿಳಿದಿಲ್ಲ. ರೈತರ ಹೋರಾಟಕ್ಕೆ ಮಣಿದು ಉತ್ತರ ಕರ್ನಾಟಕದಲ್ಲಿ ದರ ನಿಗದಿಪಡಿಸಲಾಗಿದೆ.

ಅದೇ ಮಾದರಿಯನ್ನು ಮಂಡ್ಯ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳೂ ಅನುಸರಿಸಬೇಕು. ಮಂಡ್ಯ ಸಕ್ಕರೆ ಕಾರ್ಖಾನೆಗೆ ಐತಿಹಾಸಿಕ ಹಿನ್ನೆಲೆಯಿದ್ದು, ಇಲ್ಲಿನ ರೈತರ ಹಿತ ಕಾಪಾಡುವುದು ಅಗತ್ಯ ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಮಂಡ್ಯ ಜಿಲ್ಲೆಯ ರೈತರಿಗೂ ಪ್ರತಿ ಟನ್ ಕಬ್ಬಿಗೆ 3,800 ರೂ. ದರ ನಿಗದಿಪಡಿಸಬೇಕು. ಬಾಕಿ ಉಳಿದಿರುವ ರೈತರ ಪ್ರತಿ ಟನ್ಗೆ 50 ರೂ. ಹಣವನ್ನೂ ಕೂಡಲೇ ಪಾವತಿಸಬೇಕು.

ಕಾರ್ಖಾನೆ ಮಾಲೀಕರ ಒತ್ತಡಕ್ಕೆ ಮಣಿಯದೆ ಸರ್ಕಾರ ರೈತರ ಹಿತ ಕಾಪಾಡಬೇಕು. ನಮ್ಮ ಬೇಡಿಕೆಗಳನ್ನು ನಿರ್ಲಕ್ಷಿಸಿದರೆ ಮಂಡ್ಯದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದರು.

ಕಬ್ಬು ಬೆಳೆಗಾರರ ಸಮಸ್ಯೆಗೆ ಸರ್ಕಾರ ತಕ್ಷಣ ಸ್ಪಂದಿಸಿ ನ್ಯಾಯಯುತ ದರ ನಿಗದಿಪಡಿಸಬೇಕು. ರೈತರ ಶ್ರಮಕ್ಕೆ ತಕ್ಕ ಬೆಲೆ ನೀಡಿ ಕೃಷಿಯನ್ನು ಉಳಿಸಬೇಕು ಎಂಬುದು ಪ್ರತಿಭಟನಾಕಾರರ ಪ್ರಮುಖ ಆಗ್ರಹವಾಗಿದೆ.

--------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande