
ಬೆಂಗಳೂರು, 17 ನವೆಂಬರ್ (ಹಿ.ಸ.):
ಗ್ಯಾರಂಟಿ ಸೇರಿದಂತೆ ವಿವಿಧ ಕಲ್ಯಾಣ ಯೋಜನೆಗಳ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತ್ವರಿತವಾಗಿ ತಲುಪಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರವು 'ಪ್ರಜಾ ಸೇವಾ ಇಲಾಖೆ'ಯನ್ನು ಸ್ಥಾಪಿಸಿದೆ.
ಮುಖ್ಯಮಂತ್ರಿ ಅವರ ನೇರ ಉಸ್ತುವಾರಿಯಲ್ಲಿ ಕಾರ್ಯನಿರ್ವಹಿಸಲಿರುವ ಈ ಇಲಾಖೆಯು ಸರ್ಕಾರಿ ಸೇವೆಗಳ ವಿತರಣೆಯಲ್ಲಿ ವಿಳಂಬ ತಡೆಯುವುದು, ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಸರಳೀಕರಿಸುವುದು ಹಾಗೂ ಸಾರ್ವಜನಿಕರ ಕುಂದುಕೊರತೆಗಳಿಗೆ ತ್ವರಿತ ಪರಿಹಾರ ಕಲ್ಪಿಸುವ ಗುರಿ ಹೊಂದಿದೆ.
ಕರ್ನಾಟಕ ಆಡಳಿತ ಸುಧಾರಣಾ ಆಯೋಗ-II ನೀಡಿರುವ ಶಿಫಾರಸುಗಳನ್ನು ಆಧರಿಸಿ, ಸರ್ಕಾರಿ ಇಲಾಖೆಗಳ ಕಾರ್ಯನಿರ್ವಹಣೆಯಲ್ಲಿ ಬದಲಾವಣೆ ತರಲು 15 ಅಂಶಗಳ ಸುಧಾರಣಾ ಚೌಕಟ್ಟನ್ನು ರೂಪಿಸಲಾಗಿದೆ.
ಇದರ ಮೂಲಕ ಸಾರ್ವಜನಿಕರು ಸಣ್ಣಪುಟ್ಟ ಸರ್ಕಾರಿ ಕೆಲಸಗಳಿಗಾಗಿ ಕಚೇರಿಗಳಿಗೆ ಪದೇ ಪದೇ ಅಲೆಯುವುದನ್ನು ತಪ್ಪಿಸುವುದರ ಜತೆಗೆ, ಹೆಚ್ಚುವರಿ ದಾಖಲೆಗಳ ಸಲ್ಲಿಕೆ ಮತ್ತು ಅನಗತ್ಯ ವಿಚಾರಣೆಗಳಿಂದ ಉಂಟಾಗುವ ವಿಳಂಬವನ್ನು ಕಡಿಮೆ ಮಾಡಲು ಉದ್ದೇಶಿಸಲಾಗಿದೆ.
₹2 ಸಾವಿರದವರೆಗೆ ತಕ್ಷಣದ ನೆರವು
ಈ ಸುಧಾರಣೆಯ ಪ್ರಮುಖ ಅಂಶವೆಂದರೆ, ಕಾನೂನುಬದ್ಧವಾಗಿ ಅವಕಾಶವಿರುವ ಕಡೆಗಳಲ್ಲಿ ಸಾಮಾನ್ಯ ಅರ್ಹತಾ ಪರಿಶೀಲನೆ ಪೂರ್ಣಗೊಳ್ಳುವವರೆಗೆ ಕಾಯದೆ, ಅರ್ಹ ಫಲಾನುಭವಿಗಳಿಗೆ ಪ್ರತಿ ವ್ಯಕ್ತಿಗೆ ₹2,000ದವರೆಗಿನ ಸೇವೆ ಅಥವಾ ಆರ್ಥಿಕ ನೆರವನ್ನು ತಾತ್ಕಾಲಿಕವಾಗಿ ಒದಗಿಸಬಹುದಾಗಿದೆ.
ಆಧಾರ್ ಆಧಾರಿತ ಗುರುತಿನ ಪರಿಶೀಲನೆ ನಡೆಸಿದ ಬಳಿಕ ಸೌಲಭ್ಯ ವಿತರಿಸಲು ಅವಕಾಶ ಕಲ್ಪಿಸಲಾಗಿದೆ. ಉಳಿದ ಅರ್ಹತಾ ಪರಿಶೀಲನೆಯನ್ನು ಮುಂದಿನ 30 ದಿನಗಳೊಳಗೆ ಪೂರ್ಣಗೊಳಿಸಬೇಕಾಗುತ್ತದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R