
ದಾವಣಗೆರೆ, 17 ನವೆಂಬರ್ (ಹಿ.ಸ.):
ಭದ್ರಾ ಜಲಾಶಯದಿಂದ 1 ಟಿ.ಎಂ.ಸಿ ನೀರನ್ನು 10 ದಿನಗಳ ಕಾಲ ನಾಲೆಗೆ ಹರಿಸುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಹೊನ್ನಾಳಿ ಶಾಸಕ ಶಾಂತನಗೌಡ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ನೀರು ಬಿಡುಗಡೆ ನಿಲ್ಲಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಹಿತದೃಷ್ಟಿಯಿಂದ ಇನ್ರಿಗೇಷನ್ ಕನ್ಸಲ್ಟೇಟಿವ್ ಕಮಿಟಿ (ಐಸಿಸಿ) ಸಭೆ ಕರೆಯದೆ ಸರ್ಕಾರ ಏಕಪಕ್ಷೀಯವಾಗಿ ನೀರು ಹರಿಸಲು ಆದೇಶಿಸಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
1 ಟಿ.ಎಂ.ಸಿ ನೀರನ್ನು 10 ದಿನಗಳ ಕಾಲ ಹರಿಸಬೇಕಾದರೆ ಪ್ರತಿದಿನ 1,000 ಕ್ಯೂಸೆಕ್ಸ್ ನೀರನ್ನು ನಾಲೆಗೆ ಬಿಡಬೇಕಾಗುತ್ತದೆ. ಇದು ಅವೈಜ್ಞಾನಿಕ ನಿರ್ಧಾರವಾಗಿದೆ. ಇದರಿಂದ ಅಣೆಕಟ್ಟಿನಿಂದ 15 ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ರೈತರಿಗೆ ಮಾತ್ರ ನೀರು ತಲುಪಲಿದೆ.
ಅಚ್ಚುಕಟ್ಟು ಪ್ರದೇಶದ ಶೇ.5ರಷ್ಟು ರೈತರ ಜಮೀನುಗಳಿಗೂ ಸಮರ್ಪಕವಾಗಿ ನೀರು ಸಿಗುವುದಿಲ್ಲ ಎಂದು ಶಾಂತನಗೌಡ ಹೇಳಿದರು.
ಕೂಡಲೇ ಭದ್ರಾ ಜಲಾಶಯದಿಂದ ನೀರು ಹರಿಸುವುದನ್ನು ಸ್ಥಗಿತಗೊಳಿಸಿ, ಐಸಿಸಿ ಸಭೆ ಕರೆದು ರೈತರ ಹಿತದೃಷ್ಟಿಯಿಂದ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ನಾನು ಮತ್ತು ನಮ್ಮ ಭಾಗದ ರೈತರು ರೈತರ ಹಿತದೃಷ್ಟಿಯಿಂದ ಹೋರಾಟಕ್ಕೆ ನಿರ್ಧರಿಸಿದ್ದೇವೆ. ಈ ಸಂಬಂಧ ರಾಜೀನಾಮೆ ಪತ್ರವನ್ನು ಸಿದ್ಧಪಡಿಸಿಕೊಂಡಿದ್ದೇನೆ. ನೀರು ಬಿಡುಗಡೆ ನಿಲ್ಲಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ.
ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ನಮ್ಮ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಡುತ್ತೇನೆ ಎಂದು ತಿಳಿಸಿದರು.
ಅಲ್ಲದೆ, ರೈತರ ಬೇಡಿಕೆ ಈಡೇರದಿದ್ದರೆ ಭದ್ರಾ ಅಣೆಕಟ್ಟಿನ ಮುಂಭಾಗ ಅಹೋರಾತ್ರಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿಯೂ ಎಚ್ಚರಿಕೆ ನೀಡಿದರು.
ಭದ್ರಾ ಅಣೆಕಟ್ಟು ಭದ್ರಾವತಿ ತಾಲೂಕಿನ ಆಸ್ತಿಯಲ್ಲ. ನೀರು ಹಂಚಿಕೆ ವಿಚಾರದಲ್ಲಿ ಎಲ್ಲ ರೈತರ ಹಿತವನ್ನು ಗಮನದಲ್ಲಿಟ್ಟುಕೊಳ್ಳಬೇಕು. ನಮ್ಮ ಬೇಡಿಕೆ ಇಷ್ಟೇ, ಭದ್ರಾ ಜಲಾಶಯದಿಂದ ನೀರು ಹರಿಸುವುದನ್ನು ತಕ್ಷಣ ನಿಲ್ಲಿಸಬೇಕು. ಇಲ್ಲದಿದ್ದರೆ ರಾಜೀನಾಮೆ ನೀಡುವುದು ಅನಿವಾರ್ಯವಾಗಲಿದೆ ಎಂದು ಶಾಂತನಗೌಡ ಸ್ಪಷ್ಟಪಡಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R