
ಮಳವಳ್ಳಿ, 17 ನವೆಂಬರ್ (ಹಿ.ಸ.):
ಸರ್ಕಾರದ ಖಜಾನೆ ಖಾಲಿಯಾಗಿದ್ದು, ಅದನ್ನು ತುಂಬಿಸಿಕೊಳ್ಳಲು ಜನರಿಂದ ಹಣ ವಸೂಲಿ ಮಾಡುವ ಕೆಲಸಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.
ಇದೇ ರೀತಿ ಮುಂದುವರಿದರೆ ಇನ್ನು ಕೆಲವೇ ದಿನಗಳಲ್ಲಿ ಉಸಿರಾಡುವ ಗಾಳಿಗೂ ದರ ನಿಗದಿಪಡಿಸುವ ಪರಿಸ್ಥಿತಿ ಬರಬಹುದು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಮಳವಳ್ಳಿ ತಾಲೂಕಿನ ಗುಂಡಾಪುರ ಗ್ರಾಮದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ನಿರ್ಧಾರಗಳು ಸಮಾಜದ ಬದಲಾವಣೆಗಾಗಿ ಕೈಗೊಂಡ ಕ್ರಮಗಳಲ್ಲ. ಖಜಾನೆ ಖಾಲಿಯಾಗಿರುವುದರಿಂದ ಜನರಿಂದ ಹಣ ಪಡೆಯುವ ಪ್ರಯತ್ನ ನಡೆಯುತ್ತಿದೆ ಎಂದು ಟೀಕಿಸಿದರು.
ರಾಜಕೀಯ ವಿಚಾರಗಳ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಯಾವಾಗ ಮಾತನಾಡಬೇಕೋ ಆಗ ಮಾತನಾಡುತ್ತೇನೆ. ಮೇಕೆದಾಟು ಯೋಜನೆ ಪ್ರಾರಂಭಿಸಲು ಸರ್ಕಾರ ಬಹಳ ವೇಗದಲ್ಲಿ ಮುಂದಾಗಿದೆ. ನೋಡೋಣ ಏನಾಗುತ್ತದೆ ಎಂದು ಹೇಳಿದರು.
ಮಂಡ್ಯ ಜಿಲ್ಲೆಯಲ್ಲಿ ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ ಘಟಕ ಸ್ಥಾಪನೆ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ, ಘಟಕ ಸ್ಥಾಪನೆಗೆ ಅಗತ್ಯವಾದ ಭೂಮಿಯನ್ನೇ ಇನ್ನೂ ನೀಡಿಲ್ಲ. ಭೂಮಿ ಕೊಡದೆ ಎಲ್ಲಿ ಘಟಕ ಸ್ಥಾಪನೆ ಮಾಡಲಿ? ಮೊದಲು ಜಾಗ ತೋರಿಸಲಿ. ಎಲ್ಲಿ ಬೇಕಾದರೂ ಜಾಗ ನೀಡಲಿ. ಕೆಎಡಿಬಿಗೆ ಜಾಗ ನೀಡಿ ಅನುಮೋದನೆ ಆಗಿದೆಯೇ? ಎಂದು ಪ್ರಶ್ನಿಸಿದರು.
ಜಿಲ್ಲಾಧಿಕಾರಿಗಳು ಪತ್ರ ಬರೆದ ಮಾತ್ರಕ್ಕೆ ಕೆಲಸ ಪೂರ್ಣವಾಗುವುದಿಲ್ಲ. ಸರ್ಕಾರದ ಮಟ್ಟದಲ್ಲಿ ಅಗತ್ಯ ಕ್ರಮಗಳು ನಡೆಯಬೇಕು. ಯೋಜನೆಯನ್ನು ಕಾನೂನುಬದ್ಧವಾಗಿ ಜಾರಿಗೊಳಿಸಲು ಸರ್ಕಾರ ಯಾವ ದಾಖಲೆಗಳನ್ನು ಮುಂದಿಟ್ಟಿದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಯಾವುದೇ ಅಭಿವೃದ್ಧಿ ಕೆಲಸಗಳು ಅವರಿಗೆ ಬೇಕಿಲ್ಲ. ಬಸ್ ನಿಲ್ದಾಣ ನಿರ್ಮಿಸುತ್ತೇನೆ ಎಂದರೂ ನಿರ್ಮಿಸಬೇಡಿ ಎನ್ನುತ್ತಾರೆ. ಸಿಎಸ್ಆರ್ ನಿಧಿಯ ಮೂಲಕ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುವ ನಿರೀಕ್ಷೆಯಿದೆ. ಆದರೆ ಇದಕ್ಕೆ ಸಂಪೂರ್ಣ ಬೆಂಬಲ ನೀಡಿದವರು ಯಾರು? ಎಂದು ಪ್ರಶ್ನಿಸಿದರು.
ARAI ಘಟಕ ಸ್ಥಾಪನೆಗೆ ತಮ್ಮ ಬದ್ಧತೆ ಇದೆ ಎಂದು ಸ್ಪಷ್ಟಪಡಿಸಿದ ಅವರು, ಘಟಕ ಸ್ಥಾಪನೆಗೆ ನಾನು ನಿರ್ದೇಶನ ನೀಡಿದ್ದೇನೆ. ರೈತರನ್ನು ಎತ್ತಿಕಟ್ಟುವ ಅಗತ್ಯ ನನಗೇನಿದೆ? ಈ ಸಮಸ್ಯೆಯನ್ನು ಪರಿಹರಿಸುವ ಜವಾಬ್ದಾರಿ ಸರ್ಕಾರದ್ದಾಗಿದೆ. ನನ್ನಿಂದ ಯಾವುದೇ ತಪ್ಪಾಗಲು ಅವಕಾಶ ನೀಡುವುದಿಲ್ಲ. ಕೈಗಾರಿಕೆಗಳನ್ನು ಸ್ಥಾಪಿಸುವುದು ರಾಜ್ಯ ಸರ್ಕಾರದ ಕರ್ತವ್ಯ ಎಂದರು.
ಹಿಂದಿನ ಯೋಜನೆಗಳ ಕೊಡುಗೆಯಿಂದ ಕರ್ನಾಟಕ ಅಭಿವೃದ್ಧಿ
ಕರ್ನಾಟಕದ ಅಭಿವೃದ್ಧಿಗೆ ಹಿಂದಿನ ತಲೆಮಾರಿನ ನಾಯಕರು ರೂಪಿಸಿದ ಯೋಜನೆಗಳ ಕೊಡುಗೆ ಮಹತ್ವದ್ದಾಗಿದೆ ಎಂದು ಹೇಳಿದ ಕುಮಾರಸ್ವಾಮಿ, ಕರ್ನಾಟಕ ಇವರಿಂದಲೇ ಬೆಳೆದಿಲ್ಲ.
ಹಿಂದಿನವರು ದೂರದೃಷ್ಟಿಯಿಂದ ನೀಡಿದ ಯೋಜನೆಗಳಿಂದ ರಾಜ್ಯ ಅಭಿವೃದ್ಧಿಯಾಗಿದೆ. ಆದರೆ ಆ ಯೋಜನೆಗಳ ಫಲವನ್ನು ಅನುಭವಿಸುತ್ತಾ ಇಂದಿನವರು ಕುಳಿತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಟೀಕಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R