ನ.22ರಂದು ವಿಜಯಪುರದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಿಜಯೋತ್ಸವದ ಭವ್ಯ ಮೆರವಣಿಗೆ
ವಿಜಯಪುರ, 17 ನವೆಂಬರ್ (ಹಿ.ಸ.) ವೀರರಾಣಿ ಕಿತ್ತೂರು ಚೆನ್ನಮ್ಮ ಅವರ 202ನೇ ವಿಜಯೋತ್ಸವ ಹಾಗೂ 248ನೇ ಜಯಂತ್ಯುತ್ಸವದ ಅಂಗವಾಗಿ ನವೆಂಬರ್ 22ರಂದು ಗುಮ್ಮಟನಗರಿ ವಿಜಯಪುರದಲ್ಲಿ ಕಲೆ, ಸಂಸ್ಕೃತಿ ಮತ್ತು ದೇಶಾಭಿಮಾನದ ಪ್ರತೀಕವಾಗಿ ಭವ್ಯ ಮೆರವಣಿಗೆ ಆಯೋಜಿಸಲಾಗಿದೆ ಎಂದು ಕಿತ್ತೂರು ರಾಣಿ ಚೆನ್ನಮ್ಮ ಉತ್ಸವ
ಕಿತ್ತೂರು ರಾಣಿ ಚೆನ್ನಮ್ಮನ ಜಯಂತಿ


ವಿಜಯಪುರ, 17 ನವೆಂಬರ್ (ಹಿ.ಸ.)

ವೀರರಾಣಿ ಕಿತ್ತೂರು ಚೆನ್ನಮ್ಮ ಅವರ 202ನೇ ವಿಜಯೋತ್ಸವ ಹಾಗೂ 248ನೇ ಜಯಂತ್ಯುತ್ಸವದ ಅಂಗವಾಗಿ ನವೆಂಬರ್ 22ರಂದು ಗುಮ್ಮಟನಗರಿ ವಿಜಯಪುರದಲ್ಲಿ ಕಲೆ, ಸಂಸ್ಕೃತಿ ಮತ್ತು ದೇಶಾಭಿಮಾನದ ಪ್ರತೀಕವಾಗಿ ಭವ್ಯ ಮೆರವಣಿಗೆ ಆಯೋಜಿಸಲಾಗಿದೆ ಎಂದು ಕಿತ್ತೂರು ರಾಣಿ ಚೆನ್ನಮ್ಮ ಉತ್ಸವ ಸಮಿತಿಯ ಡಾ. ಸುರೇಶ ಬಿರಾದಾರ ತಿಳಿಸಿದ್ದಾರೆ.

ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯೋತ್ಸವದ ಅಂಗವಾಗಿ ನಡೆಯಲಿರುವ ಮೆರವಣಿಗೆಯ ರೂಪುರೇಷೆ ಹಾಗೂ ವಿಶೇಷ ಆಕರ್ಷಣೆಗಳ ಕುರಿತು ಮಾಹಿತಿ ನೀಡಿದರು.

ನವೆಂಬರ್ 22ರಂದು ಬೆಳಿಗ್ಗೆ 10 ಗಂಟೆಗೆ ನಗರದ ಶ್ರೀ ಸಿದ್ದೇಶ್ವರ ದೇವಾಲಯದ ಮುಂಭಾಗದಿಂದ ಮೆರವಣಿಗೆ ಆರಂಭವಾಗಲಿದೆ. ಪಂಚಮಸಾಲಿ ಜಗದ್ಗುರು ಶ್ರೀ ಡಾ. ಮಹಾದೇವ ಶಿವಾಚಾರ್ಯರು, ಮಾತೋಶ್ರೀ ಯೋಗೇಶ್ವರಿ ತಾಯಿ ಹಾಗೂ ಮನಗೂಳಿಯ ಶ್ರೀ ಅಭಿನವ ಸಂಗನಬಸವ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಮೆರವಣಿಗೆಗೆ ಚಾಲನೆ ದೊರೆಯಲಿದೆ.

ಮೆರವಣಿಗೆಯಲ್ಲಿ ರಾಣಿ ಚೆನ್ನಮ್ಮ ಅವರ ವೇಷಧಾರಿ ಮಕ್ಕಳು, 11 ಕುದುರೆಗಳ ರಾಜಗಾಂಭೀರ್ಯದ ಮೆರವಣಿಗೆ, ಮಹಿಳಾ ಕಲಾವಿದರಿಂದ ಆಕರ್ಷಕ ಡೊಳ್ಳು ಕುಣಿತ, ರಾಣಿ ಚೆನ್ನಮ್ಮ ಅವರ ಸಾಹಸಗಾಥೆಯನ್ನು ಸಾರುವ ದೇಶಭಕ್ತಿ ಗೀತೆಗಳು ಹಾಗೂ ವಿವಿಧ ಜಾನಪದ ವಾದ್ಯಗಳ ಪ್ರದರ್ಶನ ಪ್ರಮುಖ ಆಕರ್ಷಣೆಗಳಾಗಿರಲಿವೆ.

ಶ್ರೀ ಸಿದ್ದೇಶ್ವರ ದೇವಾಲಯದಿಂದ ಆರಂಭವಾಗುವ ಮೆರವಣಿಗೆಯು ಗಾಂಧಿ ವೃತ್ತ, ಬಸವೇಶ್ವರ ವೃತ್ತ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ರಾಣಿ ಚೆನ್ನಮ್ಮ ವೃತ್ತದಲ್ಲಿ ಸಂಪನ್ನಗೊಳ್ಳಲಿದೆ.

ಮಹಿಳೆಯರ ನೇತೃತ್ವದಲ್ಲಿ ಜೀಪ್, ಬೈಕ್ ಜಾಥಾ

ಈ ಬಾರಿಯ ಉತ್ಸವದ ವಿಶೇಷ ಆಕರ್ಷಣೆಯಾಗಿ ಇದೇ ಮೊದಲ ಬಾರಿಗೆ ತೆರೆದ ಜೀಪ್ ಹಾಗೂ ದ್ವಿಚಕ್ರ ವಾಹನಗಳ ಜಾಥಾ ಆಯೋಜಿಸಲಾಗಿದೆ. ಈ ಜಾಥಾದ ಸಂಪೂರ್ಣ ನೇತೃತ್ವವನ್ನು ಮಹಿಳೆಯರೇ ವಹಿಸಿಕೊಳ್ಳಲಿರುವುದು ವಿಶೇಷವಾಗಿದೆ. ರಾಣಿ ಚೆನ್ನಮ್ಮ ವೃತ್ತದಿಂದ ಆರಂಭವಾಗುವ ಜಾಥಾವು ಬಸವೇಶ್ವರ ವೃತ್ತ, ಗಾಂಧಿ ವೃತ್ತ ಹಾಗೂ ಇಂಡಿ ರಸ್ತೆಯ ಮೂಲಕ ಸಂಚರಿಸಿ ಮರಳಿ ಶ್ರೀ ಸಿದ್ದೇಶ್ವರ ದೇವಾಲಯಕ್ಕೆ ತಲುಪಿ ಮುಕ್ತಾಯಗೊಳ್ಳಲಿದೆ.

ಮುಂದಿನ ದಿನಗಳಲ್ಲಿ ಎರಡು ದಿನಗಳ ಕಾಲ ಅದ್ದೂರಿಯಾಗಿ ಕಿತ್ತೂರು ರಾಣಿ ಚೆನ್ನಮ್ಮ ಸಾಂಸ್ಕೃತಿಕ ಉತ್ಸವ ಆಯೋಜಿಸುವ ಬಗ್ಗೆಯೂ ಸಮಿತಿ ಗಂಭೀರ ಚಿಂತನೆ ನಡೆಸುತ್ತಿದೆ ಎಂದು ಡಾ. ಸುರೇಶ ಬಿರಾದಾರ ತಿಳಿಸಿದರು.

ಸರ್ವ ಸಮಾಜದವರ ಒಗ್ಗಟ್ಟಿನ ಉತ್ಸವ

ಸಮಿತಿಯ ಪ್ರಧಾನ ಕಾರ್ಯದರ್ಶಿ ಹೊನಮಲ್ಲ ಸಾರವಾಡ ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮ ಅವರು ದೇಶಭಕ್ತಿ, ಸ್ವಾಭಿಮಾನ ಮತ್ತು ಅಪ್ರತಿಮ ಧೈರ್ಯದ ಪ್ರತೀಕವಾಗಿದ್ದಾರೆ. ಈ ಉತ್ಸವವನ್ನು ಯಾವುದೇ ಒಂದು ಸಮುದಾಯಕ್ಕೆ ಸೀಮಿತಗೊಳಿಸದೆ ಎಲ್ಲ ಸಮಾಜದವರ ಸಹಭಾಗಿತ್ವದಲ್ಲಿ ಸಾಮರಸ್ಯದಿಂದ ಆಚರಿಸಲಾಗುತ್ತಿದೆ. ನಗರದ ಸಮಸ್ತ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಉತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಅಶೋಕ ಪಾಟೀಲ, ಬಿ.ಎಂ. ಬಿರಾದಾರ, ಬಸವರಾಜ ಕಳಸಗೊಂಡ, ಅಶೋಕ ಬಿರಾದಾರ, ಶಂಕರ ಸೋಮಪುರ ಸೇರಿದಂತೆ ಸಮಿತಿಯ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande