ಕೆಲಸದ ಬೇಡಿಕೆ ಅರ್ಜಿ ಸಲ್ಲಿಸಿದ 15 ದಿನದೊಳಗೆ ಉದ್ಯೋಗ: ಇಒ ಚಿನಗುಂಡಿ
ಗದಗ, 17 ನವೆಂಬರ್ (ಹಿ.ಸ.) ಗ್ರಾಮೀಣ ಕುಟುಂಬಗಳಿಗೆ ಸ್ವಗ್ರಾಮದಲ್ಲಿಯೇ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ವಿಕಸಿತ ಭಾರತ–ವ್ಹಿಬಿಜಿರಾಮ್ ಜಿ ಯೋಜನೆಯಡಿ ತಾಲೂಕಿನ 13 ಗ್ರಾಮ ಪಂಚಾಯಿತಿಗಳಲ್ಲಿ ಎರಡನೇ ಹಂತದ ನಮೂನೆ–6 ಅಭಿಯಾನ ಆರಂಭಿಸಲಾಗಿದೆ. ಈ ಮೂಲಕ ಕೂಲಿಕಾರ್ಮಿಕರಿಂದ ಕೆಲಸದ ಬೇಡಿಕೆ ಅರ್ಜಿಗಳನ್ನ
ಫೋಟೋ


ಗದಗ, 17 ನವೆಂಬರ್ (ಹಿ.ಸ.)

ಗ್ರಾಮೀಣ ಕುಟುಂಬಗಳಿಗೆ ಸ್ವಗ್ರಾಮದಲ್ಲಿಯೇ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ವಿಕಸಿತ ಭಾರತ–ವ್ಹಿಬಿಜಿರಾಮ್ ಜಿ ಯೋಜನೆಯಡಿ ತಾಲೂಕಿನ 13 ಗ್ರಾಮ ಪಂಚಾಯಿತಿಗಳಲ್ಲಿ ಎರಡನೇ ಹಂತದ ನಮೂನೆ–6 ಅಭಿಯಾನ ಆರಂಭಿಸಲಾಗಿದೆ. ಈ ಮೂಲಕ ಕೂಲಿಕಾರ್ಮಿಕರಿಂದ ಕೆಲಸದ ಬೇಡಿಕೆ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಧರ್ ಚಿನಗುಂಡಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹೆಚ್ಚಿನ ಸಂಖ್ಯೆಯ ಕೂಲಿಕಾರ್ಮಿಕರಿಗೆ ಉದ್ಯೋಗ ಒದಗಿಸುವಂತೆ ಸರ್ಕಾರ ನಿರ್ದೇಶನ ನೀಡಿದೆ. ಅದರಂತೆ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ನಮೂನೆ–6ರ ಮೂಲಕ ಕೆಲಸದ ಬೇಡಿಕೆ ಅರ್ಜಿಗಳನ್ನು ಸ್ವೀಕರಿಸಿ, ಉದ್ಯೋಗ ಕಲ್ಪಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಗ್ರಾಪಂ ಹಾಗೂ ವ್ಹಿಬಿಜಿರಾಮ್ ಸಿಬ್ಬಂದಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಜಾಬ್ ಕಾರ್ಡ್ ಹೊಂದಿರುವ ಕುಟುಂಬಗಳ ಮಾಹಿತಿಯನ್ನು ಪರಿಶೀಲಿಸಿ ಅರ್ಹರಿಗೆ ಹೊಸ ಜಾಬ್ ಕಾರ್ಡ್ ವಿತರಿಸುವುದು, ಹಳೆಯ ಕಾರ್ಡ್ಗಳ ನವೀಕರಣ, ಇ–ಕೆವೈಸಿ ಪೂರ್ಣಗೊಳಿಸುವುದು ಹಾಗೂ ಉದ್ಯೋಗದ ಬೇಡಿಕೆ ಅರ್ಜಿಗಳನ್ನು ಸ್ವೀಕರಿಸುವ ಕಾರ್ಯಕ್ಕೆ ಆದ್ಯತೆ ನೀಡಬೇಕು. ಅರ್ಜಿ ಸಲ್ಲಿಸುವ ಕುಟುಂಬಗಳಿಗೆ ನಿಯಮಾನುಸಾರ ಸ್ವೀಕೃತಿ ನೀಡಬೇಕು ಎಂದು ಸೂಚಿಸಿದ್ದಾರೆ.

ಗದಗ ಜಿಲ್ಲೆ ನರಗುಂದ ತಾಲೂಕಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆಮನೆಗೆ ಭೇಟಿ ನೀಡಿ ಯೋಜನೆಯ ಕುರಿತು ಮಾಹಿತಿ ನೀಡಬೇಕು. ಗ್ರಾಮಸಭೆ, ಜಾಗೃತಿ ಸಭೆಗಳನ್ನು ನಡೆಸುವುದರ ಜತೆಗೆ ಪೋಸ್ಟರ್, ಬ್ಯಾನರ್ಗಳ ಮೂಲಕ ಪ್ರಚಾರ ಕೈಗೊಂಡು ಹೆಚ್ಚಿನ ಸಂಖ್ಯೆಯಲ್ಲಿ ಕೂಲಿಕಾರ್ಮಿಕರಿಂದ ಕೆಲಸದ ಬೇಡಿಕೆ ಅರ್ಜಿಗಳನ್ನು ಪಡೆಯಬೇಕು ಎಂದು ತಿಳಿಸಿದ್ದಾರೆ.

15 ದಿನದಲ್ಲಿ ಕೆಲಸ ನೀಡದಿದ್ದರೆ ನಿರುದ್ಯೋಗ ಭತ್ಯೆಗೆ ಕ್ರಮ

ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಆಗದಿರುವುದರಿಂದ ಕೃಷಿ ಚಟುವಟಿಕೆಗಳಲ್ಲಿ ಕೂಲಿಕಾರ್ಮಿಕರಿಗೆ ಕೆಲಸದ ಕೊರತೆ ಎದುರಾಗಿದೆ. ಹೀಗಾಗಿ ಕೆಲಸಕ್ಕಾಗಿ ಬೇರೆ ಊರುಗಳಿಗೆ ವಲಸೆ ಹೋಗುವುದನ್ನು ತಪ್ಪಿಸಿ, ಸ್ವಗ್ರಾಮದಲ್ಲಿಯೇ ವ್ಹಿಬಿಜಿರಾಮ್ ಜಿ ಯೋಜನೆಯಡಿ ಉದ್ಯೋಗ ಕಲ್ಪಿಸುವುದು ಉದ್ದೇಶವಾಗಿದೆ ಎಂದು ಶ್ರೀಧರ್ ಚಿನಗುಂಡಿ ಹೇಳಿದ್ದಾರೆ.

ಕೂಲಿಕಾರ್ಮಿಕರು ತಮ್ಮ ಗ್ರಾಮ ಪಂಚಾಯಿತಿಗೆ ಕೆಲಸದ ಬೇಡಿಕೆ ಅರ್ಜಿ ಸಲ್ಲಿಸಿದ 15 ದಿನದೊಳಗೆ ಉದ್ಯೋಗ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ನಿಗದಿತ ಅವಧಿಯಲ್ಲಿ ಕೆಲಸ ನೀಡದಿದ್ದಲ್ಲಿ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದರ ಜತೆಗೆ ಅರ್ಹ ಕೂಲಿಕಾರ್ಮಿಕರಿಗೆ ನಿರುದ್ಯೋಗ ಭತ್ಯೆ ಒದಗಿಸಲು ಶಿಫಾರಸು ಮಾಡಲಾಗುವುದು ಎಂದು ತಿಳಿಸಿದ್ದಾರೆ.

ತಾಲೂಕಿನ ಎಲ್ಲ 13 ಗ್ರಾಮ ಪಂಚಾಯಿತಿಗಳ ಕೂಲಿಕಾರ್ಮಿಕರು ನಮೂನೆ–6ರಲ್ಲಿ ಕೆಲಸದ ಬೇಡಿಕೆ ಅರ್ಜಿಯನ್ನು ಗ್ರಾಪಂ ಕಚೇರಿಗೆ ಸಲ್ಲಿಸಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ವ್ಹಿಬಿಜಿರಾಮ್ ಜಿ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande