
ಗದಗ, 17 ನವೆಂಬರ್ (ಹಿ.ಸ.)
ಸಂಗೀತ, ಸಾಹಿತ್ಯ ಹಾಗೂ ಸಮಾಜಸೇವೆಯ ಮೂಲಕ ನಾಡಿನಾದ್ಯಂತ ಅಪಾರ ಗೌರವ ಗಳಿಸಿದ್ದ ಗಾನಯೋಗಿ ಪಂಡಿತ್ ಪುಟ್ಟರಾಜ ಗವಾಯಿಗಳಿಗೆ ಮರಣೋತ್ತರವಾಗಿ ದೇಶದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂದು ಆಗ್ರಹಿಸಿ ಗದಗದಲ್ಲಿ ಭಕ್ತರು, ರೈತರು, ಅಂಧ ಮಕ್ಕಳು ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಬೃಹತ್ ಹೋರಾಟ ನಡೆಸಿದರು.
ಗದಗ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಪಂಡಿತ್ ಪುಟ್ಟರಾಜ ಗವಾಯಿಗಳ ಸಾಮಾಜಿಕ, ಶೈಕ್ಷಣಿಕ ಹಾಗೂ ಸಂಗೀತ ಕ್ಷೇತ್ರದ ಅಮೂಲ್ಯ ಕೊಡುಗೆಗಳನ್ನು ಸ್ಮರಿಸಿದ ಪ್ರತಿಭಟನಾಕಾರರು, ಅವರ ಸೇವೆ ಹಾಗೂ ಸಾಧನೆಯನ್ನು ಗುರುತಿಸಿ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿದರು. ಇದರೊಂದಿಗೆ ಗದಗ ರೈಲು ನಿಲ್ದಾಣಕ್ಕೆ ಪಂಡಿತ್ ಪುಟ್ಟರಾಜ ಗವಾಯಿಗಳ ಹೆಸರನ್ನು ನಾಮಕರಣ ಮಾಡಬೇಕು ಎಂಬ ಬೇಡಿಕೆಯನ್ನೂ ಮುಂದಿಟ್ಟರು.
ಗಾನಯೋಗಿ ಪಂಡಿತ್ ಪುಟ್ಟರಾಜ ಗವಾಯಿಗಳು ಕೇವಲ ಸಂಗೀತ ಕ್ಷೇತ್ರದ ಮಹಾನ್ ಸಾಧಕರಾಗಿರಲಿಲ್ಲ. ಸಾವಿರಾರು ಅಂಧ, ಅನಾಥ ಹಾಗೂ ವಿಶೇಷ ಚೇತನ ಮಕ್ಕಳ ಬದುಕಿಗೆ ಆಶ್ರಯದಾತರಾಗಿದ್ದರು. ಸಂಗೀತ ಶಿಕ್ಷಣದ ಜೊತೆಗೆ ಮಕ್ಕಳಿಗೆ ಊಟ, ವಸತಿ ಹಾಗೂ ಶಿಕ್ಷಣದ ವ್ಯವಸ್ಥೆ ಕಲ್ಪಿಸಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಮಾರ್ಗದರ್ಶನ ನೀಡಿದ್ದರು. ಸಮಾಜದಲ್ಲಿ ಅವಕಾಶಗಳಿಂದ ವಂಚಿತರಾಗಿದ್ದ ಅನೇಕ ಮಕ್ಕಳಿಗೆ ಸಂಗೀತವನ್ನೇ ಬದುಕಿನ ಶಕ್ತಿಯನ್ನಾಗಿ ಮಾಡಿಕೊಟ್ಟಿದ್ದರು. ಅವರ ಮಾನವೀಯ ಸೇವೆ ಹಾಗೂ ಅಪಾರ ಸಾಧನೆಯನ್ನು ಪರಿಗಣಿಸಿ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಕೇಳಿಬರುತ್ತಿದೆ. ಇದೀಗ ಈ ಬೇಡಿಕೆ ಮತ್ತೊಮ್ಮೆ ತೀವ್ರ ಸ್ವರೂಪ ಪಡೆದುಕೊಂಡಿದೆ.
ಪ್ರತಿಭಟನಾ ಸ್ಥಳಕ್ಕೆ ಗದಗ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರೆಡ್ಡಿ ಆಗಮಿಸಿದ ಸಂದರ್ಭದಲ್ಲಿ ಭಾವನಾತ್ಮಕ ಸನ್ನಿವೇಶವೊಂದು ನಡೆಯಿತು. ಪುಟ್ಟರಾಜ ಗವಾಯಿಗಳಿಗೆ ಭಾರತ ರತ್ನ ಪ್ರಶಸ್ತಿ ಕೊಡಿಸಲು ಸರ್ಕಾರದ ಮಟ್ಟದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ರೈತರೊಬ್ಬರು ಸಚಿವರ ಕಾಲಿಗೆ ಬಿದ್ದು ಕೈಮುಗಿದು ಮನವಿ ಮಾಡಿದರು. ಈ ದೃಶ್ಯ ಪ್ರತಿಭಟನಾ ಸ್ಥಳದಲ್ಲಿದ್ದವರ ಗಮನ ಸೆಳೆಯಿತು.
ಭಕ್ತರ ಭಾವನಾತ್ಮಕ ಮನವಿಗೆ ಸ್ಪಂದಿಸಿದ ಸಚಿವ ಬಸವರಾಜ ರಾಯರೆಡ್ಡಿ, ಪಂಡಿತ್ ಪುಟ್ಟರಾಜ ಗವಾಯಿಗಳಿಗೆ ಭಾರತ ರತ್ನ ನೀಡಬೇಕೆಂಬ ಬೇಡಿಕೆ ನ್ಯಾಯಸಮ್ಮತವಾಗಿದ್ದು, ಇದಕ್ಕೆ ತಮ್ಮ ಸಂಪೂರ್ಣ ಸಹಮತವಿದೆ ಎಂದು ತಿಳಿಸಿದರು. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವುದಾಗಿ ಭರವಸೆ ನೀಡಿದರು. ಅಲ್ಲದೆ, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಗಮನಕ್ಕೂ ಈ ವಿಷಯವನ್ನು ತಂದು, ಸಚಿವ ಸಂಪುಟದಲ್ಲಿ ಚರ್ಚಿಸಿ ನಿರ್ಧಾರ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ಹೇಳಿದರು.
ಪುಟ್ಟರಾಜ ಗವಾಯಿಗಳು ನಾಡಿನ ಸಾಂಸ್ಕೃತಿಕ ಹಾಗೂ ಸಂಗೀತ ಪರಂಪರೆಗೆ ಸಲ್ಲಿಸಿದ ಕೊಡುಗೆ ಅಪಾರವಾಗಿದೆ. ವಿಶೇಷವಾಗಿ ಅಂಧ ಹಾಗೂ ಅನಾಥ ಮಕ್ಕಳಿಗೆ ಸಂಗೀತದ ಮೂಲಕ ಬದುಕಿನ ದಾರಿ ತೋರಿದ ಅವರ ಸೇವೆ ಸಮಾಜಕ್ಕೆ ಸದಾ ಸ್ಮರಣೀಯವಾಗಿದೆ. ಇಂತಹ ಮಹಾನ್ ವ್ಯಕ್ತಿಗೆ ಭಾರತ ರತ್ನ ನೀಡುವುದು ಅವರ ಸಾಧನೆಗೆ ಸಲ್ಲಿಸುವ ಗೌರವ ಮಾತ್ರವಲ್ಲ, ಮಾನವೀಯ ಸೇವೆಗೆ ನೀಡುವ ಮನ್ನಣೆಯೂ ಆಗಲಿದೆ ಎಂಬುದು ಪ್ರತಿಭಟನಾಕಾರರ ಅಭಿಪ್ರಾಯವಾಗಿದೆ.
ಈ ಸಂದರ್ಭದಲ್ಲಿ ಶ್ರೀ ಫಕೀರೇಶ್ವರ ಶಿವಾಚಾರ್ಯ ಸ್ವಾಮೀಜಿ, ಓಂಕಾರಗಿರಿ ಹಾಗೂ ಹೋರಾಟಗಾರ ಎಂ.ಪಿ. ಮುಳಗುಂದ ಸೇರಿದಂತೆ ಪುಟ್ಟರಾಜ ಗವಾಯಿಗಳ ಭಕ್ತರು, ರೈತರು, ಅಂಧ ಮಕ್ಕಳು, ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / lalita MP