
ವಿಜಯಪುರ, 17 ನವೆಂಬರ್ (ಹಿ.ಸ.)
ಪರಿಸರ ಸಂರಕ್ಷಣೆ ಹಾಗೂ ಹಸಿರು ಪರಿಸರ ನಿರ್ಮಾಣದ ಉದ್ದೇಶದಿಂದ ಹಮ್ಮಿಕೊಳ್ಳಲಾಗುತ್ತಿರುವ ಕೋಟಿ ವೃಕ್ಷ ಅಭಿಯಾನ ಮತ್ತು ವೃಕ್ಷೋತ್ಥಾನ ಕಾರ್ಯಕ್ರಮಗಳಿಂದ ಪ್ರೇರಿತರಾಗಿ ಬಬಲೇಶ್ವರ ಮತಕ್ಷೇತ್ರದ ದಾಶ್ಯಾಳ ಗ್ರಾಮದ ಗ್ರಾಮಸ್ಥರು ಒಗ್ಗಟ್ಟಿನಿಂದ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಕಾರ್ಯವಾಗಿದೆ.
ಗ್ರಾಮದ ಹಿರಿಯರು, ಯುವಕರು ಹಾಗೂ ಮಹಿಳೆಯರು ಸೇರಿದಂತೆ ಎಲ್ಲ ವರ್ಗದ ಜನರು ಒಗ್ಗೂಡಿ ಸುಮಾರು 400 ಸಸಿಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಕೇವಲ ಗಿಡಗಳನ್ನು ನೆಡುವುದಕ್ಕೆ ಸೀಮಿತವಾಗದೆ, ನೆಟ್ಟ ಸಸಿಗಳನ್ನು ನಿರಂತರವಾಗಿ ಪೋಷಿಸಿ, ಅವುಗಳನ್ನು ಹೆಮ್ಮರಗಳನ್ನಾಗಿ ಬೆಳೆಸುವ ಸಂಕಲ್ಪದೊಂದಿಗೆ ಗ್ರಾಮಸ್ಥರು ಮುಂದಾಗಿರುವುದು ವಿಶೇಷವಾಗಿದೆ.
ಇಂದಿನ ದಿನಗಳಲ್ಲಿ ಪರಿಸರ ಮಾಲಿನ್ಯ, ಜಾಗತಿಕ ತಾಪಮಾನ ಏರಿಕೆ ಹಾಗೂ ಹವಾಮಾನ ವೈಪರೀತ್ಯದಂತಹ ಸಮಸ್ಯೆಗಳು ಹೆಚ್ಚಾಗುತ್ತಿದ್ದು, ಪರಿಸರ ಸಮತೋಲನ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಂದು ಗ್ರಾಮದಲ್ಲಿಯೂ ಹಸಿರು ಪರಿಸರ ನಿರ್ಮಾಣಕ್ಕೆ ಆದ್ಯತೆ ನೀಡಬೇಕಿದೆ. ಗಿಡಗಳನ್ನು ನೆಡುವುದರ ಜೊತೆಗೆ ಅವುಗಳ ಸಂರಕ್ಷಣೆ ಮತ್ತು ಪೋಷಣೆಯೂ ಅಷ್ಟೇ ಮುಖ್ಯವಾಗಿದೆ.
ಪರಿಸರ ಸಂರಕ್ಷಣೆ ಕೇವಲ ಒಂದು ಅಭಿಯಾನವಾಗಿ ಉಳಿಯದೆ, ಪ್ರತಿಯೊಬ್ಬರ ಸಹಭಾಗಿತ್ವದ ಜನಾಂದೋಲನವಾಗಬೇಕು. ದಾಶ್ಯಾಳ ಗ್ರಾಮದ ಜನರು ತೋರಿರುವ ಪರಿಸರ ಕಾಳಜಿ ಹಾಗೂ ಹಸಿರು ಸಂಕಲ್ಪ ಇತರ ಗ್ರಾಮಗಳಿಗೂ ಮಾದರಿಯಾಗಬೇಕು. ಗ್ರಾಮಸ್ಥರ ಈ ಸ್ವಯಂಪ್ರೇರಿತ ಪ್ರಯತ್ನವು ಹಸಿರು ವಿಜಯಪುರ ಹಾಗೂ ಸಮೃದ್ಧ ಕರ್ನಾಟಕ ನಿರ್ಮಾಣದ ಆಶಯಕ್ಕೆ ಮತ್ತಷ್ಟು ಬಲ ನೀಡಲಿದೆ.
ಪ್ರತಿಯೊಬ್ಬರೂ ತಮ್ಮ ಮನೆ, ಹೊಲ, ಶಾಲೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗಿಡಗಳನ್ನು ನೆಟ್ಟು ಪೋಷಿಸುವ ಮೂಲಕ ಮುಂದಿನ ಪೀಳಿಗೆಗೆ ಹಸಿರು ಪರಿಸರವನ್ನು ಕೊಡುಗೆಯಾಗಿ ನೀಡಬೇಕು ಎಂಬ ಸಂದೇಶವನ್ನು ದಾಶ್ಯಾಳ ಗ್ರಾಮದ ಈ ಕಾರ್ಯ ಸಾರಿದೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande