ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವವರ ವಿರುದ್ದ ಪೌರಕಾರ್ಮಿಕರ ಆಕ್ರೋಶ
ಎಲ್ಲೆಂದರಲ್ಲಿ ಕಸ ಸುರಿಯುವವರ ವಿರುದ್ಧ ವಿನೂತನ ರೀತಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ಪೌರಕಾರ್ಮಿಕರು
People Dumping Garbage


ಬೆಂಗಳೂರು, 17 ನವೆಂಬರ್ (ಹಿ.ಸ.):

ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಕಸ ಸುರಿದು ಪರಿಸರವನ್ನು ಮಲಿನಗೊಳಿಸುವವರ ವಿರುದ್ಧ ಪೌರಕಾರ್ಮಿಕರು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ ಘಟನೆ ನಾಗರಬಾವಿ ಸಮೀಪದ ಮಾಳಗಾಳ ಬಳಿ ನಡೆದಿದೆ.

ಪ್ರದೇಶದ ಬ್ಲಾಕ್ ಸ್ಪಾಟ್ನಲ್ಲಿ ಪ್ರತಿನಿತ್ಯ ಕಸ ತೆರವುಗೊಳಿಸಿದರೂ ಮತ್ತೆ ಮತ್ತೆ ಕಸ ಸುರಿಯುತ್ತಿರುವ ಕೆಲವರ ವರ್ತನೆಯಿಂದ ಬೇಸತ್ತ ಪೌರಕಾರ್ಮಿಕರು, ಕಸ ಸುರಿಯುವವರಿಗೆ ವ್ಯಂಗ್ಯಭರಿತವಾಗಿ 'ಭಾವಪೂರ್ಣ ಶ್ರದ್ಧಾಂಜಲಿ' ಸಲ್ಲಿಸಿದ್ದಾರೆ.

ಕಸ ಸುರಿಯುವವರನ್ನು ಉದ್ದೇಶಿಸಿ, 'ಕಸ ತಂದು ಹಾಕುವ ದಿವ್ಯ ಆತ್ಮಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ' ಎಂಬ ಬರಹದ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಅಷ್ಟೇ ಅಲ್ಲದೆ, 'ಈ ಕಸದಂತೆ ನಿಮ್ಮ ಜೀವನವೂ ಆದಷ್ಟು ಬೇಗ ಕೊಳೆತು ಹೋಗಲಿ' ಎಂಬ ಕಠೋರ ಪದಗಳನ್ನು ಬಳಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಿದ್ದಾರೆ.

ಪ್ರತಿನಿತ್ಯ ನಾವು ಕಸ ತೆರವುಗೊಳಿಸಿದರೂ ಕೆಲವರು ಮತ್ತೆ ಅದೇ ಸ್ಥಳದಲ್ಲಿ ಕಸ ಸುರಿಯುತ್ತಿದ್ದಾರೆ. ಎಷ್ಟೇ ಬಾರಿ ಸ್ವಚ್ಛಗೊಳಿಸಿದರೂ ಸಾರ್ವಜನಿಕರು ತಮ್ಮ ಹಳೆಯ ಚಾಳಿಯನ್ನು ಬಿಡುತ್ತಿಲ್ಲ.

ಇದರಿಂದ ಸ್ವಚ್ಛತಾ ಕಾರ್ಯಕ್ಕೆ ಅಡ್ಡಿಯಾಗುವುದರ ಜೊತೆಗೆ ಪರಿಸರವೂ ಹಾಳಾಗುತ್ತಿದೆ ಎಂದು ಪೌರಕಾರ್ಮಿಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಪೌರಕಾರ್ಮಿಕರ ಶ್ರಮಕ್ಕೆ ಗೌರವ ನೀಡಿ, ಎಲ್ಲೆಂದರಲ್ಲಿ ಕಸ ಸುರಿಯುವ ಬದಲು ನಿಗದಿತ ಸ್ಥಳಗಳಲ್ಲಿ ಕಸ ವಿಲೇವಾರಿ ಮಾಡುವ ಮೂಲಕ ಸ್ವಚ್ಛತೆಗೆ ಕೈಜೋಡಿಸಬೇಕು ಎಂಬ ಸಂದೇಶವನ್ನು ಈ ಘಟನೆ ಸಾರಿದೆ.

ಕಸ ಸುರಿಯುವವರ ವಿರುದ್ಧ ಪೌರಕಾರ್ಮಿಕರು ಕೈಗೊಂಡಿರುವ ಈ ವಿಭಿನ್ನ ಜಾಗೃತಿ ಪ್ರಯತ್ನ ಇದೀಗ ಗಮನ ಸೆಳೆದಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande