ಬೆಂಗಳೂರಿನಲ್ಲಿ ಕಾರಿನೊಳಗೆ ವ್ಯಕ್ತಿಯ ಶವ ಪತ್ತೆ: ಗುಂಡಿಕ್ಕಿ ಕೊಲೆ ಮಾಡಿರುವ ಶಂಕೆ
ಬೆಂಗಳೂರಿನ ಬಾಗಲೂರು ಸಮೀಪ ಕಾರಿನೊಳಗೆ ಇಮ್ರಾನ್ ಪಾಷ (45) ಎಂಬುವವರ ಮೃತದೇಹ ಪತ್ತೆಯಾಗಿದೆ. ತಲೆಗೆ ಗುಂಡೇಟಿನ ಗಾಯ ಹಾಗೂ ಸ್ಥಳದಲ್ಲಿ ಖಾಲಿ ಗುಂಡು ಪತ್ತೆಯಾಗಿದ್ದು, ಕೊಲೆ ಅಥವಾ ಆತ್ಮಹತ್ಯೆಯ ಸಾಧ್ಯತೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Bengaluru-Man-Found-Dead-In-Car-Bagalur-Suspected-Shooting


ಬೆಂಗಳೂರು, 17 ನವೆಂಬರ್ (ಹಿ.ಸ.):

ನಗರದ ಬಾಗಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾರಿನೊಳಗೆ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದ್ದು, ಗುಂಡಿಕ್ಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಮೂಡಿದೆ.

ಘಟನೆಯ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದು, ಸಾವಿನ ನಿಖರ ಕಾರಣ ಹಾಗೂ ಪ್ರಕರಣದ ಹಿಂದಿನ ಸತ್ಯಾಂಶವನ್ನು ಪತ್ತೆಹಚ್ಚುವ ಕಾರ್ಯ ಮುಂದುವರಿದಿದೆ.

ಬೆಂಗಳೂರು ನಗರದ ಹೊರವಲಯದ ಬಾಗಲೂರು ಸಮೀಪದ ಮಂಚಪ್ಪನಹಳ್ಳಿಯ ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿದ್ದ ಕಾರಿನೊಳಗೆ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಮೃತರನ್ನು ಬನ್ನೇರುಘಟ್ಟ ರಸ್ತೆ ನಿವಾಸಿ ಇಮ್ರಾನ್ ಪಾಷ (45) ಎಂದು ಗುರುತಿಸಲಾಗಿದೆ. ಅವರ ತಲೆಯ ಬಲಭಾಗದಲ್ಲಿ ಗುಂಡೇಟಿನ ರೀತಿಯ ಗಾಯ ಕಂಡುಬಂದಿದ್ದು, ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಅನುಮಾನ ಮೂಡಿದೆ.

ಸ್ಥಳೀಯರು ನಿರ್ಜನ ಪ್ರದೇಶದಲ್ಲಿ ಕಾರೊಂದು ಬಹಳ ಹೊತ್ತಿನಿಂದ ನಿಂತಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಬಾಗಲೂರು ಠಾಣೆ ಪೊಲೀಸರು ಪರಿಶೀಲನೆ ನಡೆಸಿದಾಗ ಕಾರಿನ ಮುಂಭಾಗದ ಸೀಟಿನಲ್ಲಿ ಮೃತದೇಹ ಪತ್ತೆಯಾಗಿದೆ. ಘಟನಾ ಸ್ಥಳದಲ್ಲಿ ಖಾಲಿ ಗುಂಡು ಕೂಡ ಪತ್ತೆಯಾಗಿದ್ದು, ಪೊಲೀಸರು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ.

ಗುಂಡಿಕ್ಕಿ ಹತ್ಯೆ ಮಾಡಿರುವ ಶಂಕೆ:

ಈ ಕುರಿತು ಜಂಟಿ ಪೊಲೀಸ್ ಆಯುಕ್ತ ರಮೇಶ್ ಬಾನೂತ್ ಪ್ರತಿಕ್ರಿಯಿಸಿ, ಕಾರು ನಿಂತಿರುವ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪರಿಶೀಲನೆ ನಡೆಸಿದಾಗ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ತಲೆಯ ಬಲಭಾಗಕ್ಕೆ ಗುಂಡು ಹೊಡೆದಿರುವ ರೀತಿಯ ಗಾಯ ಕಂಡುಬಂದಿದ್ದು, ಕಾರಿನ ಸಮೀಪ ಖಾಲಿ ಗುಂಡು ಕೂಡ ಸಿಕ್ಕಿದೆ ಎಂದು ತಿಳಿಸಿದ್ದಾರೆ.

ಮೃತ ಇಮ್ರಾನ್ ಪಾಷ ಸ್ಕ್ರ್ಯಾಪ್ ಉದ್ಯಮ ನಡೆಸುತ್ತಿದ್ದರು ಎನ್ನಲಾಗಿದೆ. ಮೇಲ್ನೋಟಕ್ಕೆ ಗುಂಡಿಕ್ಕಿ ಹತ್ಯೆ ಮಾಡಿರುವ ರೀತಿಯಲ್ಲಿ ಘಟನೆ ಕಂಡುಬಂದಿದ್ದರೂ, ಆತ್ಮಹತ್ಯೆಯ ಸಾಧ್ಯತೆಯನ್ನೂ ಪೊಲೀಸರು ತಳ್ಳಿಹಾಕಿಲ್ಲ. ಮೃತರ ಕುಟುಂಬದವರಿಂದ ಹಣಕಾಸಿನ ವ್ಯವಹಾರ ಹಾಗೂ ವೈಯಕ್ತಿಕ ವಿಚಾರಗಳ ಕುರಿತು ಮಾಹಿತಿ ಕಲೆಹಾಕಲಾಗುತ್ತಿದೆ.

ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯದ (ಎಫ್ಎಸ್ಎಲ್) ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಕಾರಿನಲ್ಲಿ ಬಂದೂಕು ಇತ್ತೇ, ಗುಂಡು ಹಾರಿಸಿದವರು ಯಾರು ಎಂಬುದೂ ಸೇರಿದಂತೆ ಹಲವು ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ. ಮರಣೋತ್ತರ ಪರೀಕ್ಷೆ ಹಾಗೂ ವಿಧಿವಿಜ್ಞಾನ ವರದಿ ಬಂದ ಬಳಿಕ ಸಾವಿನ ನಿಖರ ಕಾರಣ ತಿಳಿದುಬರುವ ನಿರೀಕ್ಷೆಯಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande