ಐಸಿಸಿ ಅಧ್ಯಕ್ಷರಾಗಿ ಜಯ್ ಶಾ ಸತತ ಎರಡನೇ ಬಾರಿ ಅವಿರೋಧ ಆಯ್ಕೆ
ನವದೆಹಲಿ, 16 ನವೆಂಬರ್ (ಹಿ.ಸ.): ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಅಧ್ಯಕ್ಷರಾಗಿ ಜಯ್ ಶಾ ಸತತ ಎರಡನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ಐಸಿಸಿ ಮಂಡಳಿಯ ಸಭೆಗಳ ಸಂದರ್ಭದಲ್ಲಿ ನಿರ್ದೇಶಕರು ಮಂಡಿಸಿದ ಪ್ರಸ್ತಾವನೆಯ ಬಳಿಕ ಜಯ್ ಶಾ ಅವರನ್ನು ಎರಡನೇ
आईसीसी लोगो


ನವದೆಹಲಿ, 16 ನವೆಂಬರ್ (ಹಿ.ಸ.):

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಅಧ್ಯಕ್ಷರಾಗಿ ಜಯ್ ಶಾ ಸತತ ಎರಡನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ಐಸಿಸಿ ಮಂಡಳಿಯ ಸಭೆಗಳ ಸಂದರ್ಭದಲ್ಲಿ ನಿರ್ದೇಶಕರು ಮಂಡಿಸಿದ ಪ್ರಸ್ತಾವನೆಯ ಬಳಿಕ ಜಯ್ ಶಾ ಅವರನ್ನು ಎರಡನೇ ಅವಧಿಗೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಈ ಮೂಲಕ ಜಾಗತಿಕ ಕ್ರಿಕೆಟ್ ಆಡಳಿತದಲ್ಲಿ ನಾಯಕತ್ವದ ನಿರಂತರತೆಯನ್ನು ಕಾಯ್ದುಕೊಳ್ಳಲಾಗಿದೆ.

ಜಯ್ ಶಾ ಅವರ ನಾಯಕತ್ವದ ಮೇಲಿನ ವಿಶ್ವಾಸವನ್ನು ಐಸಿಸಿ ಮಂಡಳಿಯ ಈ ನಿರ್ಧಾರ ಪ್ರತಿಬಿಂಬಿಸಿದೆ. ಜಾಗತಿಕ ಮಟ್ಟದಲ್ಲಿ ಕ್ರಿಕೆಟ್ ವಿಸ್ತರಣೆ, ಅಭಿಮಾನಿಗಳ ಸಂಖ್ಯೆಯನ್ನು ಹೆಚ್ಚಿಸುವುದು ಹಾಗೂ ವಾಣಿಜ್ಯ ಬೆಳವಣಿಗೆಗೆ ಉತ್ತೇಜನ ನೀಡುವ ದೃಷ್ಟಿಯಿಂದ ಕ್ರಿಕೆಟ್ ಮಹತ್ವದ ಘಟ್ಟದಲ್ಲಿದೆ. 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಮತ್ತೆ ಸೇರ್ಪಡೆಯಾಗಲು ಸಿದ್ಧತೆ ನಡೆಸುತ್ತಿದೆ. ಇದರೊಂದಿಗೆ ಹೆಚ್ಚಿನ ಆಟಗಾರರಿಗೆ ಭಾಗವಹಿಸುವಿಕೆ ಮತ್ತು ಬೆಳವಣಿಗೆಯ ಅವಕಾಶ ಕಲ್ಪಿಸುವ ಉದ್ದೇಶದಿಂದ ಪಂದ್ಯಾವಳಿಗಳ ದೀರ್ಘಾವಧಿಯ ವೇಳಾಪಟ್ಟಿಯನ್ನೂ ಐಸಿಸಿ ವಿಸ್ತರಿಸಿದೆ.

ಕ್ರಿಕೆಟ್‌ನ ತಳಹದಿಯನ್ನು ಬಲಪಡಿಸುವುದು, ಮಹಿಳಾ ಕ್ರಿಕೆಟ್ ಬೆಳವಣಿಗೆಗೆ ಬೆಂಬಲ ನೀಡುವುದು, ಸಹವರ್ತಿ ಸದಸ್ಯ ರಾಷ್ಟ್ರಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸುವುದು, ಅಂತರರಾಷ್ಟ್ರೀಯ ಕ್ರಿಕೆಟ್‌ನ ವಿಶ್ವಾಸಾರ್ಹತೆಯನ್ನು ಕಾಪಾಡುವುದು ಹಾಗೂ ಕ್ರೀಡೆಯ ಭವಿಷ್ಯಕ್ಕಾಗಿ ಸುಸ್ಥಿರ ವಾಣಿಜ್ಯ ಅವಕಾಶಗಳನ್ನು ಅಭಿವೃದ್ಧಿಪಡಿಸುವ ಬದ್ಧತೆಯನ್ನು ಮಂಡಳಿ ಪುನರುಚ್ಚರಿಸಿದೆ.

ಎರಡನೇ ಅವಧಿಗೆ ಆಯ್ಕೆಯಾದ ಕುರಿತು ಪ್ರತಿಕ್ರಿಯಿಸಿರುವ ಜಯ್ ಶಾ, ಐಸಿಸಿ ಮಂಡಳಿ ತಮ್ಮ ಮೇಲೆ ಇರಿಸಿರುವ ವಿಶ್ವಾಸದಿಂದ ಗೌರವಿತನಾಗಿದ್ದೇನೆ. ನಿರಂತರ ಬೆಂಬಲ ಮತ್ತು ವಿಶ್ವಾಸ ವ್ಯಕ್ತಪಡಿಸಿದ ಎಲ್ಲ ನಿರ್ದೇಶಕರಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ. ಐಸಿಸಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವುದು ಗೌರವದ ಜೊತೆಗೆ ದೊಡ್ಡ ಜವಾಬ್ದಾರಿಯೂ ಆಗಿದೆ. ವಿಶ್ವದಾದ್ಯಂತ ಕ್ರಿಕೆಟ್‌ನ ಹಿತಾಸಕ್ತಿಗಳನ್ನು ಮುನ್ನಡೆಸಲು ಸದಸ್ಯ ರಾಷ್ಟ್ರಗಳೊಂದಿಗೆ ಒಟ್ಟಾಗಿ ಕೆಲಸ ಮಾಡಲು ಬದ್ಧನಾಗಿದ್ದೇನೆ ಎಂದು ತಿಳಿಸಿದ್ದಾರೆ.

ಕ್ರಿಕೆಟ್ ತನ್ನ ಇತಿಹಾಸದಲ್ಲಿಯೇ ಅತ್ಯಂತ ಮಹತ್ವದ ಮತ್ತು ರೋಚಕ ಘಟ್ಟವನ್ನು ಪ್ರವೇಶಿಸುತ್ತಿದೆ. 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಮರಳಿ ಸೇರ್ಪಡೆಯಾಗುತ್ತಿರುವುದು ಹೊಸ ಪ್ರೇಕ್ಷಕರನ್ನು ಕ್ರೀಡೆಯತ್ತ ಸೆಳೆಯಲು ಹಾಗೂ ಆಟಗಾರರು ಮತ್ತು ಅಭಿಮಾನಿಗಳ ಹೊಸ ಪೀಳಿಗೆಗೆ ಸ್ಫೂರ್ತಿ ನೀಡಲು ಅಸಾಧಾರಣ ಅವಕಾಶವಾಗಿದೆ ಎಂದು ಹೇಳಿದ್ದಾರೆ.

ಯಶಸ್ವಿ ಪಂದ್ಯಾವಳಿಗಳನ್ನು ಆಯೋಜಿಸುವುದಷ್ಟೇ ನಮ್ಮ ಜವಾಬ್ದಾರಿಯಲ್ಲ. ಅಭಿಮಾನಿಗಳು, ಆಟಗಾರರು, ವಾಣಿಜ್ಯ ಪಾಲುದಾರರು ಸೇರಿದಂತೆ ಎಲ್ಲ ಪ್ರಮುಖ ಪಾಲುದಾರರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಕ್ರಿಕೆಟ್‌ಗೆ ಬಲಿಷ್ಠ ಮತ್ತು ಸುಸ್ಥಿರ ಭವಿಷ್ಯ ರೂಪಿಸಬೇಕಿದೆ. ಜನರನ್ನು ಒಗ್ಗೂಡಿಸುವ ಸಾಮರ್ಥ್ಯವೇ ಕ್ರಿಕೆಟ್‌ನ ದೊಡ್ಡ ಶಕ್ತಿ. ಮಂಡಳಿ ಮತ್ತು ಸದಸ್ಯ ರಾಷ್ಟ್ರಗಳ ಬೆಂಬಲದೊಂದಿಗೆ ನಮ್ಮ ಉದ್ದೇಶಗಳನ್ನು ಕಾರ್ಯರೂಪಕ್ಕೆ ತಂದು, ಮುಂದಿನ ಪೀಳಿಗೆಗೂ ಪ್ರಯೋಜನವಾಗುವ ಬೆಳವಣಿಗೆ ಸಾಧಿಸುವುದು ನಮ್ಮ ಗುರಿಯಾಗಿದೆ ಎಂದು ತಿಳಿಸಿದ್ದಾರೆ.

ಜಯ್ ಶಾ ಅವರ ಮರುನೇಮಕಕ್ಕೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ರಿಚರ್ಡ್ ಥಾಂಪ್ಸನ್ ಅಭಿನಂದನೆ ಸಲ್ಲಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಹತ್ವದ ಬದಲಾವಣೆಯ ಹಂತದಲ್ಲಿರುವ ಸಂದರ್ಭದಲ್ಲಿ ಅವರ ನಾಯಕತ್ವ ಮುಂದುವರಿಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಅಂತಾರಾಷ್ಟ್ರೀಯ ಪಂದ್ಯಗಳ ವೇಳಾಪಟ್ಟಿಯನ್ನು ಬಲಪಡಿಸುವುದು, ದ್ವಿಪಕ್ಷೀಯ ಕ್ರಿಕೆಟ್‌ನ ಪ್ರಸ್ತುತತೆ ಮತ್ತು ಸ್ಪರ್ಧಾತ್ಮಕತೆಯನ್ನು ಉಳಿಸುವುದು ಹಾಗೂ ಪ್ರಮುಖ ಪಂದ್ಯಾವಳಿಗಳನ್ನು ಕ್ರೀಡೆಯ ಭವಿಷ್ಯದ ಕೇಂದ್ರವಾಗಿರಿಸುವುದು ಅಗತ್ಯವಾಗಿದೆ ಎಂದು ಹೇಳಿದ್ದಾರೆ.

ಮುಂಬರುವ ವರ್ಷಗಳಲ್ಲಿ ಕ್ರಿಕೆಟ್‌ನ ಪರಂಪರೆ ಮತ್ತು ಹೊಸ ಆವಿಷ್ಕಾರಗಳು, ಹೊಸ ಪ್ರೇಕ್ಷಕರು ಹಾಗೂ ಬದಲಾಗುತ್ತಿರುವ ವಾಣಿಜ್ಯ ಪರಿಸರದಿಂದ ಸಿಗುವ ಅವಕಾಶಗಳ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಮುಖ್ಯವಾಗಿದೆ. ಅಂತರರಾಷ್ಟ್ರೀಯ ಕ್ರಿಕೆಟ್‌ನ ಭವಿಷ್ಯವನ್ನು ರೂಪಿಸಲು ಸದಸ್ಯ ರಾಷ್ಟ್ರಗಳನ್ನು ಒಗ್ಗೂಡಿಸುವಲ್ಲಿ ಐಸಿಸಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಐಸಿಸಿಯ ಸ್ವತಂತ್ರ ನಿರ್ದೇಶಕಿ ಡಾ. ರಾಸ್ ರಿವಾಜ್ ಅವರು ಜಯ್ ಶಾ ಅವರಿಗೆ ಅಭಿನಂದನೆ ಸಲ್ಲಿಸಿದ್ದು, ಮಹಿಳಾ ಕ್ರಿಕೆಟ್‌ನ ಬೆಳವಣಿಗೆಯನ್ನು ಮತ್ತಷ್ಟು ಬಲಪಡಿಸಲು ಅವರ ನಾಯಕತ್ವ ಮಹತ್ವದ ಅವಕಾಶ ಒದಗಿಸಲಿದೆ ಎಂದಿದ್ದಾರೆ. ವಿಶ್ವದಾದ್ಯಂತ ಮಹಿಳಾ ಕ್ರಿಕೆಟ್ ಜನಪ್ರಿಯತೆ ಹೆಚ್ಚುತ್ತಿದೆ. ಮಹಿಳಾ ಆಟಗಾರ್ತಿಯರಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸುವುದು, ಅವರ ಆಟಕ್ಕೆ ಬೆಂಬಲ ನೀಡುವುದು ಮತ್ತು ಸ್ಪರ್ಧೆಗಳಲ್ಲಿ ಭಾಗವಹಿಸಲು ಹೊಸ ಮಾರ್ಗಗಳನ್ನು ರೂಪಿಸುವುದು ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.

ಐಸಿಸಿ ಉಪಾಧ್ಯಕ್ಷ ಹಾಗೂ ಜಿಂಬಾಬ್ವೆ ಕ್ರಿಕೆಟ್ ಮಂಡಳಿ ಅಧ್ಯಕ್ಷ ತವೆಂಗ್ವಾ ಮುಕುಹ್ಲಾನಿ ಅವರು ಜಯ್ ಶಾ ಅವರ ನಾಯಕತ್ವವನ್ನು ಶ್ಲಾಘಿಸಿದ್ದಾರೆ. ಕ್ರಿಕೆಟ್‌ನ ಭವಿಷ್ಯದ ಕುರಿತು ಎಲ್ಲ ಸದಸ್ಯ ರಾಷ್ಟ್ರಗಳನ್ನು ಒಗ್ಗೂಡಿಸುವ ಸ್ಪಷ್ಟ ಬದ್ಧತೆಯನ್ನು ಅವರು ಪ್ರದರ್ಶಿಸಿದ್ದಾರೆ. 2027ರಲ್ಲಿ ನಡೆಯಲಿರುವ ಐಸಿಸಿ ಪುರುಷರ ಏಕದಿನ ವಿಶ್ವಕಪ್ ಆಫ್ರಿಕಾ ಖಂಡದಲ್ಲಿ ಹೊಸ ಪ್ರೇಕ್ಷಕರನ್ನು ಕ್ರಿಕೆಟ್‌ನತ್ತ ಸೆಳೆಯಲು ಮಹತ್ವದ ಅವಕಾಶ ಒದಗಿಸಲಿದೆ ಎಂದು ಹೇಳಿದ್ದಾರೆ.

ನ್ಯೂಜಿಲೆಂಡ್ ಕ್ರಿಕೆಟ್ ನಿರ್ದೇಶಕ ರೋಜರ್ ಟ್ವೋಸ್ ಅವರು ಜಯ್ ಶಾ ಅವರ ಮರುನೇಮಕದಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಾಯಕತ್ವದ ನಿರಂತರತೆ ದೊರೆಯಲಿದೆ ಎಂದಿದ್ದಾರೆ. ಎಲ್ಲ ಮಾದರಿಗಳಲ್ಲಿಯೂ ಕ್ರಿಕೆಟ್‌ನ ಜನಪ್ರಿಯತೆಯನ್ನು ಉಳಿಸಿಕೊಳ್ಳಲು ಸದಸ್ಯ ರಾಷ್ಟ್ರಗಳು ಒಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಐಸಿಸಿ ಸಹವರ್ತಿ ಸದಸ್ಯರ ಅಧ್ಯಕ್ಷ ಗುರುಮೂರ್ತಿ ಪಳನಿ ಅವರು, ಕ್ರಿಕೆಟ್ ನಿಜವಾದ ಜಾಗತಿಕ ಕ್ರೀಡೆಯಾಗಿ ಬೆಳೆಯಬೇಕಾದರೆ ಎಲ್ಲ ಸದಸ್ಯ ರಾಷ್ಟ್ರಗಳಿಗೆ ಸಮಾನವಾದ ಬೆಳವಣಿಗೆಯ ಅವಕಾಶಗಳು ದೊರೆಯಬೇಕು ಎಂದು ಹೇಳಿದ್ದಾರೆ. ಸಹವರ್ತಿ ರಾಷ್ಟ್ರಗಳಿಗೆ ಉನ್ನತ ಮಟ್ಟದ ಪಂದ್ಯಾವಳಿಗಳಲ್ಲಿ ಭಾಗವಹಿಸಲು ಹೆಚ್ಚಿನ ಅವಕಾಶ, ಬಲಿಷ್ಠ ಅಭಿವೃದ್ಧಿ ಮಾರ್ಗಗಳು ಮತ್ತು ಸುಸ್ಥಿರ ಕ್ರಿಕೆಟ್ ವ್ಯವಸ್ಥೆ ರೂಪಿಸಲು ಅಗತ್ಯ ಹೂಡಿಕೆ ದೊರೆಯಬೇಕು ಎಂದು ತಿಳಿಸಿದ್ದಾರೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande