ಖನಿಜಗಳ ಹರಾಜು ವ್ಯವಸ್ಥೆಯಲ್ಲಿ ಪಾರದರ್ಶಕತೆ ಹೆಚ್ಚಳ; ಆದರೂ ಸ್ಥಗಿತಗೊಂಡಿವೆ ಬಹುತೇಕ ಗಣಿಗಾರಿಕೆ ಯೋಜನೆಗಳು
ಲೇಖಕರು: ಅರುಣ್ ಭಾಸ್ಕರ್ ದೇವರಸ್ ಭಾರತದಲ್ಲಿ ಖನಿಜಗಳ ಹಂಚಿಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹೆಚ್ಚಿಸುವ ಉದ್ದೇಶದಿಂದ 2015ರಲ್ಲಿ ಜಾರಿಗೆ ತಂದ ಮುಕ್ತ ಮತ್ತು ಸ್ಪರ್ಧಾತ್ಮಕ ಹರಾಜು ವ್ಯವಸ್ಥೆ ಮಹತ್ವದ ಸುಧಾರಣೆಯಾಗಿ ಹೊರಹೊಮ್ಮಿದೆ. ಆದರೆ, ಈ ವ್ಯವಸ್ಥೆಯ ಮೂಲಕ ಹರಾಜು ಮಾಡಲಾದ ಬಹುತೇಕ ಖನಿಜ ಪ್ರದೇಶಗ
Arun Bhaskar Deoras


ಲೇಖಕರು: ಅರುಣ್ ಭಾಸ್ಕರ್ ದೇವರಸ್

ಭಾರತದಲ್ಲಿ ಖನಿಜಗಳ ಹಂಚಿಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹೆಚ್ಚಿಸುವ ಉದ್ದೇಶದಿಂದ 2015ರಲ್ಲಿ ಜಾರಿಗೆ ತಂದ ಮುಕ್ತ ಮತ್ತು ಸ್ಪರ್ಧಾತ್ಮಕ ಹರಾಜು ವ್ಯವಸ್ಥೆ ಮಹತ್ವದ ಸುಧಾರಣೆಯಾಗಿ ಹೊರಹೊಮ್ಮಿದೆ. ಆದರೆ, ಈ ವ್ಯವಸ್ಥೆಯ ಮೂಲಕ ಹರಾಜು ಮಾಡಲಾದ ಬಹುತೇಕ ಖನಿಜ ಪ್ರದೇಶಗಳಲ್ಲಿ ಇನ್ನೂ ಗಣಿಗಾರಿಕೆ ಆರಂಭವಾಗದಿರುವುದು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

2015ಕ್ಕೂ ಮೊದಲು ಭಾರತದಲ್ಲಿ ಬಹುತೇಕ ಕಲ್ಲಿದ್ದಲ್ಲು ಖನಿಜಗಳ ಗಣಿಗಾರಿಕೆ ಗುತ್ತಿಗೆಗಳನ್ನು ಸರ್ಕಾರದ ನಿರ್ಧಾರ ಮತ್ತು ಅಧಿಕಾರಿಗಳ ವಿವೇಚನೆಯ ಆಧಾರದ ಮೇಲೆ ನೀಡಲಾಗುತ್ತಿತ್ತು. ಈ ವ್ಯವಸ್ಥೆಯಲ್ಲಿ ಪಾರದರ್ಶಕತೆಯ ಕೊರತೆಯಿತ್ತು. ಅಲ್ಲದೆ, ವಿವಿಧ ರಾಜ್ಯಗಳಲ್ಲಿ ವಿಭಿನ್ನ ವಿಧಾನಗಳನ್ನು ಅನುಸರಿಸಲಾಗುತ್ತಿತ್ತು. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕೇಂದ್ರ ಸರ್ಕಾರ 2015ರಲ್ಲಿ ಖನಿಜ ಹರಾಜು ನಿಯಮಗಳನ್ನು ಜಾರಿಗೆ ತಂದಿತು. ಇದರನ್ವಯ ಖನಿಜ ಪ್ರದೇಶಗಳ ಹಂಚಿಕೆಯನ್ನು ಮುಕ್ತ ಮತ್ತು ಸ್ಪರ್ಧಾತ್ಮಕ ಹರಾಜಿನ ಮೂಲಕ ನಡೆಸುವ ವ್ಯವಸ್ಥೆ ಜಾರಿಗೆ ಬಂದಿತು.

ಈ ವ್ಯವಸ್ಥೆಯಡಿ 2026ರ ವೇಳೆಗೆ ದೇಶದಲ್ಲಿ 720ಕ್ಕೂ ಹೆಚ್ಚು ಪ್ರಮುಖ ಖನಿಜ ಪ್ರದೇಶಗಳನ್ನು ಹರಾಜು ಮಾಡಲಾಗಿದೆ. 2025-26ನೇ ಹಣಕಾಸು ವರ್ಷವೊಂದರಲ್ಲೇ ದಾಖಲೆಯ 212 ಖನಿಜ ಪ್ರದೇಶಗಳನ್ನು ಹಂಚಿಕೆ ಮಾಡಲಾಗಿದ್ದು, ಇವುಗಳಲ್ಲಿ 22 ಪ್ರಮುಖ ಮತ್ತು ಕಾರ್ಯತಂತ್ರದ ಖನಿಜ ಪ್ರದೇಶಗಳೂ ಸೇರಿವೆ. ಇದರಿಂದ ರಾಜ್ಯಗಳ ಖನಿಜ ಆದಾಯ ಹಿಂದಿನ ಅವಧಿಗೆ ಹೋಲಿಸಿದರೆ ಸುಮಾರು ಐದು ಪಟ್ಟು ಹೆಚ್ಚಾಗಿದೆ.

ಆದರೆ, ಈ ಸಾಧನೆಗಳ ನಡುವೆಯೇ ಗಂಭೀರ ಸಮಸ್ಯೆಯೊಂದು ಎದುರಾಗಿದೆ. ಹರಾಜು ಮಾಡಲಾದ 720ಕ್ಕೂ ಹೆಚ್ಚು ಖನಿಜ ಪ್ರದೇಶಗಳ ಪೈಕಿ ಕೇವಲ 101ರಿಂದ 105 ಗಣಿಗಳಲ್ಲಿ ಮಾತ್ರ ವಾಸ್ತವಿಕವಾಗಿ ಉತ್ಪಾದನೆ ಆರಂಭವಾಗಿದೆ. ಅಂದರೆ, ಪ್ರತಿ 100 ಹರಾಜು ಪ್ರದೇಶಗಳಲ್ಲಿ ಕೇವಲ 14ರಿಂದ 15 ಗಣಿಗಳು ಮಾತ್ರ ಕಾರ್ಯಾರಂಭ ಮಾಡಿವೆ. ಹೀಗಾಗಿ ಖನಿಜ ಹರಾಜು ವ್ಯವಸ್ಥೆ ನಿಜವಾಗಿಯೂ ಯಶಸ್ವಿಯಾಗಿದೆಯೇ ಅಥವಾ ಆಡಳಿತಾತ್ಮಕ ಹಾಗೂ ಕಾನೂನು ಅಡೆತಡೆಗಳು ಗಣಿಗಾರಿಕೆಗೆ ತಡೆಯಾಗಿವೆಯೇ ಎಂಬ ಪ್ರಶ್ನೆ ಎದುರಾಗಿದೆ.

ಗಣಿಗಾರಿಕೆ ಆರಂಭಕ್ಕೆ ಪ್ರಮುಖ ಅಡೆತಡೆಗಳು

ಸಣ್ಣ ಗುತ್ತಿಗೆ ಪ್ರದೇಶ ಮತ್ತು ಅಗತ್ಯ ಸೌಲಭ್ಯಗಳಿಗೆ ಜಾಗದ ಕೊರತೆ

ಆಧುನಿಕ ಗಣಿಗಾರಿಕೆ ಚಟುವಟಿಕೆಗಳನ್ನು ನಡೆಸಲು ಸಾಕಷ್ಟು ವಿಸ್ತೀರ್ಣವಿಲ್ಲದ ಪ್ರದೇಶಗಳನ್ನು ಹಲವು ಬಾರಿ ಹರಾಜು ಮಾಡಲಾಗುತ್ತಿದೆ. ಗುತ್ತಿಗೆ ಪ್ರದೇಶದ ಗಡಿಯನ್ನು ಖನಿಜ ನಿಕ್ಷೇಪಕ್ಕೆ ಮಾತ್ರ ಸೀಮಿತಗೊಳಿಸಲಾಗುತ್ತದೆ. ಆದರೆ, ಗಣಿಗಾರಿಕೆ ನಡೆಸಲು ಹೆಚ್ಚುವರಿ ಭೂಮಿಯ ಅಗತ್ಯವೂ ಇರುತ್ತದೆ.

ಇದಕ್ಕೆ ಮಧ್ಯಪ್ರದೇಶದ ಕಟ್ನಿ ಜಿಲ್ಲೆಯ ಇಮೇಲಿಯಾ ಚಿನ್ನ ಮತ್ತು ಮೂಲ ಲೋಹಗಳ ಯೋಜನೆ ಉದಾಹರಣೆಯಾಗಿದೆ. ಈ ಖನಿಜ ಪ್ರದೇಶವನ್ನು ಕೇವಲ 6.51 ಹೆಕ್ಟೇರ್ ವಿಸ್ತೀರ್ಣದಲ್ಲಿ ಹರಾಜು ಮಾಡಲಾಗಿದೆ. ಇಲ್ಲಿ 16 ಮೇಲ್ಮೈ ಖನಿಜ ಸೂಚನೆಗಳು ಮತ್ತು ಏಳು ಆಂತರಿಕ ಖನಿಜ ವಲಯಗಳಿವೆ. ಆದರೆ, ತೆರೆದ ಗಣಿಗಾರಿಕೆ ನಡೆಸುವ ಸಂದರ್ಭದಲ್ಲಿ ಹೊರತೆಗೆಯುವ ತ್ಯಾಜ್ಯ ಮಣ್ಣು ಮತ್ತು ಕಲ್ಲುಗಳನ್ನು ಸಂಗ್ರಹಿಸಿಡಲು ಮಾತ್ರವೇ ಸುಮಾರು ಅರ್ಧದಷ್ಟು ಭೂಮಿ ಬೇಕಾಗುತ್ತದೆ.

ಇಂತಹ ಪರಿಸ್ಥಿತಿಯಲ್ಲಿ ಖನಿಜ ಸಂಸ್ಕರಣಾ ಘಟಕ, ಚಿನ್ನ ಮತ್ತು ಬೆಳ್ಳಿ ಹೊರತೆಗೆಯುವ ಘಟಕಗಳು, ಗಣಿಗಾರಿಕೆ ತ್ಯಾಜ್ಯ ಸಂಗ್ರಹಣಾ ಪ್ರದೇಶ ಹಾಗೂ ಯಂತ್ರೋಪಕರಣಗಳ ದುರಸ್ತಿಗೆ ಅಗತ್ಯವಿರುವ ಸೌಲಭ್ಯಗಳನ್ನು ಸ್ಥಾಪಿಸಲು ಸಾಕಷ್ಟು ಜಾಗ ಉಳಿಯುವುದಿಲ್ಲ. ಗುತ್ತಿಗೆ ಪ್ರದೇಶದ ಹೊರಭಾಗದಲ್ಲಿಯೂ ಉತ್ತಮ ಖನಿಜ ನಿಕ್ಷೇಪಗಳ ಸೂಚನೆಗಳು ಕಂಡುಬಂದರೂ ಅವುಗಳನ್ನು ಬಳಸಿಕೊಳ್ಳಲು ಸಾಧ್ಯವಾಗದಿರುವುದು ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಭೂ ದಾಖಲೆಗಳಲ್ಲಿನ ಲೋಪ ಮತ್ತು ಅರಣ್ಯ ಇಲಾಖೆಯ ಹಕ್ಕು ಪ್ರತಿಪಾದನೆ

ಹರಾಜಿನ ನಂತರ ಎದುರಾಗುವ ಮತ್ತೊಂದು ಪ್ರಮುಖ ಸಮಸ್ಯೆಯೆಂದರೆ ಭೂ ದಾಖಲೆಗಳಲ್ಲಿನ ವ್ಯತ್ಯಾಸಗಳು. ಹರಾಜು ದಾಖಲೆಗಳಲ್ಲಿ ನೀಡಿರುವ ಮಾಹಿತಿ ಮತ್ತು ಕಂದಾಯ, ನೀರಾವರಿ ಹಾಗೂ ಅರಣ್ಯ ಇಲಾಖೆಗಳ ದಾಖಲೆಗಳು ಹಲವು ಬಾರಿ ಪರಸ್ಪರ ಹೊಂದಾಣಿಕೆಯಾಗುವುದಿಲ್ಲ.

ಭೂಮಿಯ ಸ್ಥಿತಿಗತಿ ಸ್ಪಷ್ಟವಾಗಿದೆ ಎಂದು ಭಾವಿಸಿ ಹೂಡಿಕೆದಾರರು ಹರಾಜಿನಲ್ಲಿ ಬಿಡ್ ಸಲ್ಲಿಸುತ್ತಾರೆ. ಆದರೆ, ನಂತರದ ಹಂತದಲ್ಲಿ ಆ ಭೂಮಿಯ ಮೇಲೆ ಅರಣ್ಯ ಇಲಾಖೆಯ ಹಕ್ಕು ಪ್ರತಿಪಾದನೆ ಅಥವಾ ಹೆಚ್ಚುವರಿ ಕಾನೂನು ಹೊಣೆಗಾರಿಕೆಗಳು ಇರುವುದು ಬೆಳಕಿಗೆ ಬರುತ್ತದೆ.

ಇದಕ್ಕೆ ಹಿವ್ರಾ ಮ್ಯಾಂಗನೀಸ್ ಖನಿಜ ಪ್ರದೇಶ ಉದಾಹರಣೆಯಾಗಿದೆ. ಹರಾಜು ದಾಖಲೆಗಳಲ್ಲಿ ಈ ಪ್ರದೇಶದ 6.90 ಹೆಕ್ಟೇರ್ ಭೂಮಿಯನ್ನು ಸಂಪೂರ್ಣವಾಗಿ ಕಂದಾಯ ಭೂಮಿ ಎಂದು ನಮೂದಿಸಲಾಗಿತ್ತು. ಅರಣ್ಯ ಭೂಮಿ ಶೂನ್ಯ ಎಂದು ತೋರಿಸಲಾಗಿತ್ತು. ಆದರೆ, ಅರಣ್ಯ ಇಲಾಖೆಯ ಅನುಮತಿ ಪಡೆಯುವ ಪ್ರಕ್ರಿಯೆ ಆರಂಭಿಸಿದಾಗ ದಾಖಲೆಗಳಲ್ಲಿ 6.65 ಹೆಕ್ಟೇರ್ ಅರಣ್ಯ ಭೂಮಿ ಇರುವುದು ಕಂಡುಬಂದಿದೆ.

ಇದರೊಂದಿಗೆ ಗುತ್ತಿಗೆದಾರನ ಮೇಲೆ ಸುಮಾರು 11.20 ಹೆಕ್ಟೇರ್ ಪ್ರದೇಶದಲ್ಲಿ ಪರಿಹಾರಾತ್ಮಕ ಅರಣ್ಯೀಕರಣ ಕೈಗೊಳ್ಳುವ ಹೆಚ್ಚುವರಿ ಹೊಣೆಗಾರಿಕೆಯೂ ಬಿದ್ದಿದೆ. ಆದರೆ, ಈ ಬಗ್ಗೆ ಹರಾಜು ದಾಖಲೆಗಳಲ್ಲಿ ಯಾವುದೇ ಉಲ್ಲೇಖವಿರಲಿಲ್ಲ.

ಕೆಲವು ಪ್ರದೇಶಗಳಲ್ಲಿ ಗ್ರಾಮ ಪಂಚಾಯಿತಿ ಅಥವಾ ಜಿಲ್ಲಾಡಳಿತ ನಿರಾಕ್ಷೇಪಣಾ ಪ್ರಮಾಣಪತ್ರ ನೀಡಿದ ಭೂಮಿಯನ್ನೂ ಅರಣ್ಯ ಇಲಾಖೆ ಹಳೆಯ ದಾಖಲೆಗಳ ಆಧಾರದಲ್ಲಿ ತನ್ನ ವ್ಯಾಪ್ತಿಗೆ ಸೇರಿದೆ ಎಂದು ಪ್ರತಿಪಾದಿಸುತ್ತದೆ. ಇದರಿಂದ ಹಲವು ಗಣಿಗಾರಿಕೆ ಯೋಜನೆಗಳು ವರ್ಷಗಟ್ಟಲೆ ಸ್ಥಗಿತಗೊಳ್ಳುತ್ತಿವೆ.

ಪರಿಸರ ನಿಯಮಗಳು ಮತ್ತು ಭೂವೈಜ್ಞಾನಿಕ ವಾಸ್ತವಗಳ ನಡುವಿನ ಸಂಘರ್ಷ

ಪರಿಸರ ಸಂರಕ್ಷಣೆ ಅತ್ಯಂತ ಅಗತ್ಯವಾದರೂ, ಹಲವು ಸಂದರ್ಭಗಳಲ್ಲಿ ಪರಿಸರ ನಿಯಮಗಳು ಮತ್ತು ವಾಸ್ತವಿಕ ಪರಿಸ್ಥಿತಿಗಳ ನಡುವೆ ಹೊಂದಾಣಿಕೆಯ ಕೊರತೆ ಕಂಡುಬರುತ್ತಿದೆ ಎಂಬುದು ಗಣಿಗಾರಿಕೆ ಕ್ಷೇತ್ರದ ತಜ್ಞರ ಅಭಿಪ್ರಾಯವಾಗಿದೆ.

ಅರಣ್ಯವನ್ನು ಪುನರ್ಸೃಷ್ಟಿಸಬಹುದು. ವನ್ಯಜೀವಿಗಳ ಸಂಚಾರ ಮತ್ತು ವಾಸಕ್ಕೆ ಪರ್ಯಾಯ ವ್ಯವಸ್ಥೆಗಳನ್ನು ರೂಪಿಸಬಹುದು. ಆದರೆ, ಖನಿಜ ನಿಕ್ಷೇಪಗಳನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸಲು ಸಾಧ್ಯವಿಲ್ಲ. ಪ್ರಕೃತಿಯಲ್ಲಿ ಅವು ಯಾವ ಪ್ರದೇಶದಲ್ಲಿ ರೂಪುಗೊಂಡಿವೆಯೋ ಅಲ್ಲಿಯೇ ಇರುತ್ತವೆ.

ಮಹಾರಾಷ್ಟ್ರದ ಪೆಂಚ್ ಹುಲಿ ಸಂರಕ್ಷಿತ ಪ್ರದೇಶದ ದಕ್ಷಿಣ ಭಾಗ ಇದಕ್ಕೆ ಉದಾಹರಣೆಯಾಗಿದೆ. ಕೆಲವು ಖನಿಜ ಪ್ರದೇಶಗಳ ಸುತ್ತಲಿನ ವನ್ಯಜೀವಿ ಸಂಚಾರ ಮಾರ್ಗಗಳ ಗಡಿಗಳನ್ನು ನಿರ್ಧರಿಸುವಾಗ ಕೆಲವೇ ಹುಲಿಗಳ ಸಂಚಾರದ ಆಧಾರದ ಮೇಲೆ ಸಂಗ್ರಹಿಸಿದ ಮಾಹಿತಿಯನ್ನು ಬಳಸಲಾಗಿದೆ ಎಂದು ಉದ್ಯಮ ವಲಯದವರು ಹೇಳುತ್ತಾರೆ. ಇಂತಹ ಗಡಿಗಳಿಂದಾಗಿ ದೊಡ್ಡ ಪ್ರಮಾಣದ ಖನಿಜ ಪ್ರದೇಶಗಳು ಗಣಿಗಾರಿಕೆಯಿಂದ ಹೊರಗುಳಿಯುತ್ತಿವೆ ಎಂಬುದು ಅವರ ವಾದವಾಗಿದೆ.

ಪರಿಣಾಮವಾಗಿ ಪರಿಸರ ಅನುಮತಿ ಪಡೆಯುವ ಪ್ರಕ್ರಿಯೆ ವರ್ಷಗಟ್ಟಲೆ ಮುಂದುವರಿಯುತ್ತಿದ್ದು, ಗಣಿಗಾರಿಕೆ ಆರಂಭವಾಗದೆ ಉಳಿಯುತ್ತಿದೆ.

ಅತಿಯಾದ ಬಿಡ್ ಮೊತ್ತ ಮತ್ತು ಆರ್ಥಿಕ ಒತ್ತಡ

ಪ್ರಸ್ತುತ ಹರಾಜು ವ್ಯವಸ್ಥೆಯಲ್ಲಿ ಕಂಪನಿಗಳು ಖನಿಜ ಮಾರಾಟ ಮೌಲ್ಯದ ಶೇಕಡಾವಾರು ಪ್ರಮಾಣದ ಆಧಾರದ ಮೇಲೆ ಬಿಡ್ ಸಲ್ಲಿಸುತ್ತವೆ. ಹೆಚ್ಚುತ್ತಿರುವ ಸ್ಪರ್ಧೆಯಿಂದಾಗಿ ಹಲವು ಬಾರಿ ಬಿಡ್ ಮೊತ್ತಗಳು ಅತಿಯಾಗಿ ಏರುತ್ತಿದ್ದು, ಯೋಜನೆಗಳ ಆರ್ಥಿಕ ಕಾರ್ಯಸಾಧ್ಯತೆಯೇ ಪ್ರಶ್ನಾರ್ಹವಾಗುತ್ತಿದೆ.

ಇದಕ್ಕೆ ಮಧ್ಯಪ್ರದೇಶದ ಪಾಂಢುರ್ನಾ ಜಿಲ್ಲೆಯ ಭಿಲಾಪಾರ್ ಮ್ಯಾಂಗನೀಸ್ ಮತ್ತು ಡಾಲಮೈಟ್ ಖನಿಜ ಪ್ರದೇಶ ಉದಾಹರಣೆಯಾಗಿದೆ. 2025ರ ಮೇ ತಿಂಗಳಲ್ಲಿ ಈ ಪ್ರದೇಶದ ಹರಾಜಿನಲ್ಲಿ ವಿಜೇತ ಕಂಪನಿ ಅಂತಿಮವಾಗಿ ಶೇ.45,295ರಷ್ಟು ಬಿಡ್ ಮೊತ್ತವನ್ನು ಪ್ರಸ್ತಾಪಿಸಿತ್ತು. ಇಷ್ಟೊಂದು ಹೆಚ್ಚಿನ ಮೊತ್ತದ ಪಾವತಿ ಹೊಣೆಗಾರಿಕೆಯೊಂದಿಗೆ ಉತ್ಪಾದನೆ ಆರಂಭಿಸಿದ ನಂತರವೂ ಯೋಜನೆಯ ವೆಚ್ಚ ಮತ್ತು ಆದಾಯದ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಅತ್ಯಂತ ಕಷ್ಟಕರವಾಗಬಹುದು.

ಇಂತಹ ಕಾರ್ಯಸಾಧ್ಯವಲ್ಲದ ಬಿಡ್ಗಳು ಮುಂದಿನ ದಿನಗಳಲ್ಲಿ ಯೋಜನೆಗಳನ್ನು ಕೈಬಿಡಲು ಅಥವಾ ಕಂಪನಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಲು ಕಾರಣವಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸಮಸ್ಯೆ ನಿವಾರಣೆಗೆ 2026ರಲ್ಲಿ ಸರ್ಕಾರದ ತಿದ್ದುಪಡಿಗಳು

ಈ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು 2026ರಲ್ಲಿ ಕೇಂದ್ರ ಸರ್ಕಾರ ಕೆಲವು ಪ್ರಮುಖ ತಿದ್ದುಪಡಿಗಳನ್ನು ಜಾರಿಗೆ ತಂದಿದೆ.

ಕಾರ್ಯಸಾಧ್ಯವಲ್ಲದ ಪ್ರದೇಶಗಳನ್ನು ಕೈಬಿಡಲು ಅವಕಾಶ: ಅರಣ್ಯ, ನದಿ, ವನ್ಯಜೀವಿ ಸಂಚಾರ ಮಾರ್ಗ ಅಥವಾ ಜನವಸತಿ ಪ್ರದೇಶಗಳ ಕಾರಣದಿಂದ ಗಣಿಗಾರಿಕೆ ನಡೆಸಲು ಸಾಧ್ಯವಾಗದ ಖನಿಜ ಪ್ರದೇಶಗಳ ಭಾಗಗಳನ್ನು ಗುತ್ತಿಗೆಯಿಂದ ಪ್ರತ್ಯೇಕಿಸಲು ಅವಕಾಶ ಕಲ್ಪಿಸಲಾಗಿದೆ.

ಅಂತರ್ಜಾಲ ಆಧಾರಿತ ವ್ಯವಸ್ಥೆ ಮತ್ತು ಕಾಲಮಿತಿಯೊಳಗೆ ಹಣ ಮರುಪಾವತಿ: ಹೊಸ ಅಂತರ್ಜಾಲ ವ್ಯವಸ್ಥೆಯಡಿ ಕಾರ್ಯಕ್ಷಮತಾ ಭದ್ರತಾ ಠೇವಣಿ ಸಲ್ಲಿಕೆಯಾದ ಕೂಡಲೇ ಸ್ವಯಂಚಾಲಿತವಾಗಿ ಉದ್ದೇಶ ಪತ್ರ ನೀಡಲು ಅವಕಾಶವಿದೆ. ಅಲ್ಲದೆ, ಕೆಲವು ಸಂದರ್ಭಗಳಲ್ಲಿ ಭದ್ರತಾ ಮೊತ್ತವನ್ನು ಹಿಂದಿರುಗಿಸಲು ಕಾಲಮಿತಿಯನ್ನೂ ನಿಗದಿಪಡಿಸಲಾಗಿದೆ.

ಅನುಮತಿಗಳಿಗೆ ಹೆಚ್ಚುವರಿ ಕಾಲಾವಕಾಶ: ಅರಣ್ಯ ಅನುಮತಿ ಪಡೆಯಲು ಹೆಚ್ಚಿನ ಸಮಯ ಬೇಕಾಗುವ ಯೋಜನೆಗಳಿಗೆ ಹೆಚ್ಚುವರಿ ಅವಧಿ ನೀಡುವ ವ್ಯವಸ್ಥೆಯನ್ನು ಮುಂದುವರಿಸಲಾಗಿದೆ.

ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳು

ಹರಾಜಿಗೂ ಮುನ್ನ ಭೂ ದಾಖಲೆಗಳ ಸಂಪೂರ್ಣ ಪರಿಶೀಲನೆ: ರಾಜ್ಯ ಸರ್ಕಾರಗಳು ಹರಾಜು ಪ್ರಕ್ರಿಯೆ ಆರಂಭಿಸುವ ಮೊದಲೇ ಕಂದಾಯ, ಅರಣ್ಯ, ನೀರಾವರಿ ಮತ್ತು ಪಂಚಾಯಿತಿ ದಾಖಲೆಗಳನ್ನು ಪರಸ್ಪರ ಪರಿಶೀಲಿಸಿ ಹೊಂದಾಣಿಕೆ ಮಾಡಬೇಕು. ಭೂಮಿಯ ನೈಜ ಸ್ಥಿತಿ ಹಾಗೂ ಅದಕ್ಕೆ ಸಂಬಂಧಿಸಿದ ಎಲ್ಲ ಹೊಣೆಗಾರಿಕೆಗಳ ಮಾಹಿತಿಯನ್ನು ಹೂಡಿಕೆದಾರರಿಗೆ ಮೊದಲೇ ಒದಗಿಸಬೇಕು.

ಕಾರ್ಯಸಾಧ್ಯವಾದ ಗುತ್ತಿಗೆ ಗಡಿಗಳ ನಿರ್ಧಾರ: ಖನಿಜ ಪ್ರದೇಶದ ಗಡಿ ನಿಗದಿಪಡಿಸುವಾಗ ಕೇವಲ ಖನಿಜ ನಿಕ್ಷೇಪವನ್ನಷ್ಟೇ ಪರಿಗಣಿಸದೆ, ತ್ಯಾಜ್ಯ ಸಂಗ್ರಹಣೆ, ಸಂಸ್ಕರಣಾ ಘಟಕ, ಕಚೇರಿ ಹಾಗೂ ಇತರ ಮೂಲಸೌಕರ್ಯಗಳ ಸ್ಥಾಪನೆಗೆ ಅಗತ್ಯವಿರುವಷ್ಟು ಭೂಮಿಯನ್ನೂ ಸೇರಿಸಬೇಕು.

ವಾಸ್ತವಿಕ ಬಿಡ್ ವ್ಯವಸ್ಥೆ: ಯೋಜನೆಯ ಆರ್ಥಿಕ ಕಾರ್ಯಸಾಧ್ಯತೆಗೆ ಧಕ್ಕೆಯಾಗದಂತೆ ಬಿಡ್ ಸಲ್ಲಿಸುವ ವ್ಯವಸ್ಥೆಯನ್ನು ರೂಪಿಸಬೇಕು. ಅತಿಯಾದ ಬಿಡ್ ಮೊತ್ತಗಳನ್ನು ನಿಯಂತ್ರಿಸುವ ಅಥವಾ ನಿರುತ್ಸಾಹಗೊಳಿಸುವ ಕ್ರಮಗಳನ್ನು ಕೈಗೊಳ್ಳಬೇಕು.

ವೈಜ್ಞಾನಿಕ ಆಧಾರದ ಮೇಲೆ ವನ್ಯಜೀವಿ ಸಂಚಾರ ಮಾರ್ಗಗಳ ನಿರ್ಧಾರ: ವನ್ಯಜೀವಿಗಳ ಸಂಚಾರ ಮಾರ್ಗಗಳ ಗಡಿಗಳನ್ನು ದೀರ್ಘಕಾಲೀನ ಮತ್ತು ಸಮಗ್ರ ವೈಜ್ಞಾನಿಕ ಅಧ್ಯಯನಗಳ ಆಧಾರದ ಮೇಲೆ ನಿರ್ಧರಿಸಬೇಕು. ಇದರಿಂದ ಪರಿಸರ ಸಂರಕ್ಷಣೆ ಮತ್ತು ಗಣಿಗಾರಿಕೆ ಚಟುವಟಿಕೆಗಳ ನಡುವೆ ಸಮತೋಲನ ಸಾಧಿಸಲು ಸಾಧ್ಯವಾಗುತ್ತದೆ.

ಪಾರದರ್ಶಕ ಹರಾಜಿನ ಜತೆಗೆ ಉತ್ಪಾದನೆಗೂ ಆದ್ಯತೆ ಅಗತ್ಯ

ಭಾರತವು ಹಳೆಯ ಖನಿಜ ಹಂಚಿಕೆ ವ್ಯವಸ್ಥೆಯಿಂದ ಹೊರಬಂದು ಪಾರದರ್ಶಕ ಮತ್ತು ಸ್ಪರ್ಧಾತ್ಮಕ ಹರಾಜು ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವುದು ಮಹತ್ವದ ಸುಧಾರಣೆಯಾಗಿದೆ. ಇದರಿಂದ ರಾಜ್ಯಗಳ ಆದಾಯ ಹೆಚ್ಚಿದ್ದು, ಖನಿಜ ಹಂಚಿಕೆ ಪ್ರಕ್ರಿಯೆಯಲ್ಲಿಯೂ ನ್ಯಾಯಸಮ್ಮತತೆ ಸುಧಾರಿಸಿದೆ.

ಆದರೆ, ಕೇವಲ ಹರಾಜು ನಡೆಸುವುದರಿಂದ ಮಾತ್ರ ಉದ್ದೇಶ ಈಡೇರಿದಂತಾಗುವುದಿಲ್ಲ. ಭೂ ವಿವಾದಗಳು, ಅರಣ್ಯ ಅನುಮತಿಗಳ ವಿಳಂಬ, ಕಾರ್ಯಸಾಧ್ಯವಲ್ಲದ ಗುತ್ತಿಗೆ ಪ್ರದೇಶಗಳ ಗಡಿಗಳು ಮತ್ತು ಅತಿಯಾದ ಬಿಡ್ ಮೊತ್ತದಂತಹ ಸಮಸ್ಯೆಗಳು ಮುಂದುವರಿದರೆ, ಹರಾಜು ಮಾಡಲಾದ ಬಹುತೇಕ ಖನಿಜ ಪ್ರದೇಶಗಳು ದಾಖಲೆಗಳಿಗೆ ಮಾತ್ರ ಸೀಮಿತವಾಗುವ ಅಪಾಯವಿದೆ.

ಹರಾಜು ಮಾಡಲಾದ ಗಣಿಗಳಲ್ಲಿ ತ್ವರಿತವಾಗಿ ಉತ್ಪಾದನೆ ಆರಂಭವಾಗಿ, ಹೂಡಿಕೆಯನ್ನು ಆಕರ್ಷಿಸಿ, ದೇಶದ ಖನಿಜ ಅಗತ್ಯಗಳನ್ನು ಪೂರೈಸಿದಾಗ ಮಾತ್ರ ಭಾರತದ ಖನಿಜ ಹರಾಜು ವ್ಯವಸ್ಥೆಯ ನೈಜ ಯಶಸ್ಸು ಸಾಧ್ಯ. ಹರಾಜು ಪ್ರಕ್ರಿಯೆ ಮತ್ತು ವಾಸ್ತವಿಕ ಉತ್ಪಾದನೆಯ ನಡುವಿನ ಅಂತರವನ್ನು ಕಡಿಮೆ ಮಾಡುವುದು ಈಗಿನ ಅತಿದೊಡ್ಡ ಸವಾಲಾಗಿದೆ ಎಂದು ಲೇಖಕರು ಅಭಿಪ್ರಾಯಪಟ್ಟಿದ್ದಾರೆ.

(ಲೇಖಕರು ಐದು ದಶಕಗಳಿಗೂ ಹೆಚ್ಚಿನ ಅನುಭವ ಹೊಂದಿರುವ ಗಣಿಗಾರಿಕೆ ಕ್ಷೇತ್ರದ ಪ್ರಖ್ಯಾತ ತಜ್ಞರು ಹಾಗೂ ಹಿರಿಯ ನಿರ್ವಹಣಾ ವೃತ್ತಿಪರರಾಗಿದ್ದಾರೆ.)

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande