ಎಚ್.ಕೆ. ಪಾಟೀಲ್ ವಿರುದ್ಧದ ಭ್ರಷ್ಟಾಚಾರ ಆರೋಪ ಪ್ರಕರಣ: ದಾಖಲೆ ನೀಡುವಂತೆ ಲೋಕಾಯುಕ್ತಕ್ಕೆ ನ್ಯಾಯಾಲಯ ಸೂಚನೆ
ಬೆಂಗಳೂರು, 15 ನವೆಂಬರ್ (ಹಿ.ಸ.): ಮಾಜಿ ಸಚಿವ ಹಾಗೂ ಹಾಲಿ ಶಾಸಕ ಎಚ್.ಕೆ. ಪಾಟೀಲ್ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ, ತನಿಖಾ ವರದಿ ಮತ್ತು ಅಗತ್ಯ ದಾಖಲೆಗಳನ್ನು ದೂರುದಾರರಿಗೆ ಒದಗಿಸುವಂತೆ ಕರ್ನಾಟಕ ಲೋಕಾಯುಕ್ತಕ್ಕೆ ವಿಶೇಷ ನ್ಯಾಯಾಲಯ ನಿರ್ದೇಶನ ನೀಡಿದೆ. ಆಂತ
hk-patil-corruption-case


ಬೆಂಗಳೂರು, 15 ನವೆಂಬರ್ (ಹಿ.ಸ.):

ಮಾಜಿ ಸಚಿವ ಹಾಗೂ ಹಾಲಿ ಶಾಸಕ ಎಚ್.ಕೆ. ಪಾಟೀಲ್ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ, ತನಿಖಾ ವರದಿ ಮತ್ತು ಅಗತ್ಯ ದಾಖಲೆಗಳನ್ನು ದೂರುದಾರರಿಗೆ ಒದಗಿಸುವಂತೆ ಕರ್ನಾಟಕ ಲೋಕಾಯುಕ್ತಕ್ಕೆ ವಿಶೇಷ ನ್ಯಾಯಾಲಯ ನಿರ್ದೇಶನ ನೀಡಿದೆ. ಆಂತರಿಕ ಅಧಿಕೃತ ಸಂವಹನ ಎಂಬ ಕಾರಣಕ್ಕೆ ದಾಖಲೆಗಳನ್ನು ಮುಚ್ಚಿಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

2014ರಲ್ಲಿ ಎಚ್.ಕೆ. ಪಾಟೀಲ್ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದ ಸಂದರ್ಭದಲ್ಲಿ, ವಾಣಿಜ್ಯ ಉದ್ದೇಶದ ಸೋಲಾರ್ ವಿದ್ಯುತ್ ಉತ್ಪಾದಕರಿಗೆ 10 ವರ್ಷಗಳ ಕಾಲ ವೀಲಿಂಗ್ ಮತ್ತು ಬ್ಯಾಂಕಿಂಗ್ ಶುಲ್ಕ ಹಾಗೂ ಕ್ರಾಸ್ ಸಬ್ಸಿಡಿ ಸರ್ಚಾರ್ಜ್ ಪಾವತಿಯಿಂದ ವಿನಾಯಿತಿ ನೀಡುವ ಆದೇಶ ಹೊರಡಿಸಲಾಗಿತ್ತು.

ಈ ನಿರ್ಧಾರದಲ್ಲಿ ಭ್ರಷ್ಟಾಚಾರ, ಅಕ್ರಮ ಹಣ ವರ್ಗಾವಣೆ ಹಾಗೂ ಅಧಿಕಾರ ದುರುಪಯೋಗ ನಡೆದಿದೆ ಎಂಬ ಆರೋಪಗಳು ಕೇಳಿಬಂದಿದ್ದವು.

ಪ್ರಕರಣದ ತನಿಖೆ ನಡೆಸಿದ್ದ ಲೋಕಾಯುಕ್ತ ಅಧಿಕಾರಿಗಳು, ಎಚ್.ಕೆ. ಪಾಟೀಲ್ ಅವರ ಪಾತ್ರಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಸಾಕ್ಷ್ಯಗಳು ಲಭ್ಯವಾಗಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಿದ್ದರು.

ಆದರೆ, ಈ ವರದಿಯಲ್ಲಿನ ಅಂಶಗಳು ಹಾಗೂ ತನಿಖೆಗೆ ಸಂಬಂಧಿಸಿದ ದಾಖಲೆಗಳನ್ನು ಪ್ರಶ್ನಿಸಿ ದೂರುದಾರ ಅಬ್ರಹಾಂ ಟಿ.ಜೆ. ನ್ಯಾಯಾಲಯದ ಮೊರೆ ಹೋಗಿದ್ದರು.

ದೂರುದಾರರ ಅರ್ಜಿ ಪುರಸ್ಕರಿಸಿದ ನ್ಯಾಯಾಲಯ

ಲೋಕಾಯುಕ್ತ ಪೊಲೀಸರು 2025ರ ಮಾರ್ಚ್ 21ರಂದು ಸಲ್ಲಿಸಿದ್ದ ಸ್ಥಿತಿಗತಿ ವರದಿಯನ್ನು ಪ್ರಶ್ನಿಸಿ, ದೂರುದಾರರು 2026ರ ಜನವರಿ 9ರಂದು ಅರ್ಜಿ ಸಲ್ಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳು ಮತ್ತು ಮಾಹಿತಿಗಳನ್ನು ಒದಗಿಸುವಂತೆ ಮನವಿ ಮಾಡಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ಸಂಸದರು ಮತ್ತು ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಶಿವಪ್ರಸಾದ್ ಕೆ.ಬಿ. ಅವರು ದೂರುದಾರರ ಆಕ್ಷೇಪವನ್ನು ಪುರಸ್ಕರಿಸಿದ್ದಾರೆ.

ಅಲ್ಲದೆ, ಅರ್ಜಿಯ 19ನೇ ಪ್ಯಾರಾದಲ್ಲಿ ಉಲ್ಲೇಖಿಸಿರುವ 1 ಹಾಗೂ 4ರಿಂದ 9ನೇ ಕ್ರಮಸಂಖ್ಯೆಯಲ್ಲಿನ ಮಾಹಿತಿಯನ್ನು ಅಪರಾಧ ಪ್ರಕ್ರಿಯಾ ಸಂಹಿತೆ ಸೆಕ್ಷನ್ 91ರ ಅಡಿಯಲ್ಲಿ ದೂರುದಾರರಿಗೆ ಒದಗಿಸುವಂತೆ ಲೋಕಾಯುಕ್ತಕ್ಕೆ ಸೂಚಿಸಿದ್ದಾರೆ.

ಮಾಹಿತಿ ಮುಚ್ಚಿಡಲು ಸಾಧ್ಯವಿಲ್ಲ ಎಂದ ಕೋರ್ಟ್

ಭಾರತೀಯ ಸಾಕ್ಷ್ಯ ಕಾಯ್ದೆಯ ಸೆಕ್ಷನ್ 124ರ ಪ್ರಕಾರ, ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆಯಾಗುವ ಸಾಧ್ಯತೆ ಇದ್ದಲ್ಲಿ ಸರ್ಕಾರಿ ಅಧಿಕಾರಿಗಳು ಅಧಿಕೃತ ಗೌಪ್ಯತೆಯಲ್ಲಿ ಪಡೆದ ಮಾಹಿತಿಯನ್ನು ಬಹಿರಂಗಪಡಿಸಲು ನಿರಾಕರಿಸಬಹುದು.

ಈ ಹಿನ್ನೆಲೆಯಲ್ಲಿ ಕೇಳಲಾದ ದಾಖಲೆಗಳು ಆಂತರಿಕ ಅಧಿಕೃತ ಸಂವಹನಕ್ಕೆ ಸೇರಿವೆ ಎಂಬ ಕಾರಣ ನೀಡಿ ಅವುಗಳನ್ನು ಒದಗಿಸಲು ಸಾಧ್ಯವಿಲ್ಲ ಎಂದು ಲೋಕಾಯುಕ್ತ ಪೊಲೀಸರು ತಮ್ಮ ವರದಿಯಲ್ಲಿ ತಿಳಿಸಿದ್ದರು.

ಆದರೆ, ಕೇವಲ ಆಂತರಿಕ ಅಧಿಕೃತ ಮಾಹಿತಿ ಎಂಬ ಕಾರಣಕ್ಕೆ ದಾಖಲೆಗಳನ್ನು ನೀಡಲು ನಿರಾಕರಿಸಲಾಗದು ಎಂದು ವಿಶೇಷ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಭಾರತೀಯ ಸಾಕ್ಷ್ಯ ಕಾಯ್ದೆ ಅಥವಾ ಮಾಹಿತಿ ಹಕ್ಕು ಕಾಯ್ದೆಯಡಿ ಇಂತಹ ಮಾಹಿತಿಯನ್ನು ಬಹಿರಂಗಪಡಿಸುವುದಕ್ಕೆ ಸಂಪೂರ್ಣ ನಿರ್ಬಂಧವಿಲ್ಲ ಎಂದು ತಿಳಿಸಿರುವ ನ್ಯಾಯಾಲಯ, ದೂರುದಾರರು ಕೇಳಿರುವ ಮಾಹಿತಿಯನ್ನು ಒದಗಿಸುವಂತೆ ಲೋಕಾಯುಕ್ತಕ್ಕೆ ನಿರ್ದೇಶನ ನೀಡಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande