ಸಾಲ ಮರುಪಾವತಿಸಲಾಗದೆ ಬೀದಿಗೆ ಬಂದ ಕುಟುಂಬ; ಮೈಕ್ರೋಫೈನಾನ್ಸ್ ಸಂಸ್ಥೆ ವಿರುದ್ಧ ಗಂಭೀರ ಆರೋಪ
ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಮಾರೇನಹಳ್ಳಿ ಗ್ರಾಮದಲ್ಲಿ 6.80 ಲಕ್ಷ ರೂ. ಸಾಲ ಮರುಪಾವತಿಸಲಾಗದೆ ಮೈಕ್ರೋಫೈನಾನ್ಸ್ ಸಂಸ್ಥೆ ಕುಟುಂಬವೊಂದನ್ನು ಮನೆಯಿಂದ ಹೊರಹಾಕಿರುವ ಆರೋಪ ಕೇಳಿಬಂದಿದೆ.
davanagere-microfinance-loan-family-evicted-from-home-after-loan-default


ದಾವಣಗೆರೆ, 15 ನವೆಂಬರ್ (ಹಿ.ಸ.):

ಸಾಲ ಮರುಪಾವತಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಖಾಸಗಿ ಮೈಕ್ರೋಫೈನಾನ್ಸ್ ಸಂಸ್ಥೆಯೊಂದು ವೃದ್ಧ ಮಹಿಳೆ ಸೇರಿದಂತೆ ಕುಟುಂಬವೊಂದನ್ನು ಮನೆಯಿಂದ ಹೊರಹಾಕಿರುವ ಆರೋಪ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಮಾರೇನಹಳ್ಳಿ ಗ್ರಾಮದಲ್ಲಿ ಕೇಳಿಬಂದಿದೆ. ಕಳೆದ 15 ದಿನಗಳಿಂದ ಮನೆಯಿಲ್ಲದೆ ಕುಟುಂಬ ಬೀದಿಯಲ್ಲೇ ದಿನ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ದೈನಂದಿನ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಗೌರಮ್ಮ ಹಾಗೂ ಅವರ ಕುಟುಂಬಕ್ಕೆ ಇದೀಗ ವಾಸಿಸಲು ಸೂರಿಲ್ಲದಂತಾಗಿದೆ. ಸಾಲ ಮರುಪಾವತಿಯಾಗದ ಹಿನ್ನೆಲೆಯಲ್ಲಿ ಮನೆಯ ಬಾಗಿಲಿಗೆ ಜಪ್ತಿ ನೋಟಿಸ್ ಅಂಟಿಸಿ, ನ್ಯಾಯಾಲಯದ ಆದೇಶದ ಮೇರೆಗೆ ಮನೆ ವಶಕ್ಕೆ ಪಡೆಯಲಾಗಿದೆ ಎಂದು ಗೌರಮ್ಮ ಆರೋಪಿಸಿದ್ದಾರೆ. ಮನೆಯ ಹೊರಗೇ ಗೌರಮ್ಮ ಮತ್ತು ಅವರ ವೃದ್ಧ ತಾಯಿ ದಿನ ಕಳೆಯುತ್ತಿದ್ದು, ಮೂಲಭೂತ ಸೌಕರ್ಯಗಳಿಲ್ಲದೆ ಪರದಾಡುತ್ತಿದ್ದಾರೆ.

ಆರಂಭದಲ್ಲಿ ಸಾಲ ಪಡೆಯಲು ತಾನು ನಿರಾಕರಿಸಿದ್ದರೂ, ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವುದಾಗಿ ಹಾಗೂ ಮಕ್ಕಳ ವ್ಯವಹಾರಕ್ಕೆ ನೆರವಾಗಲಿದೆ ಎಂದು ಮೈಕ್ರೋಫೈನಾನ್ಸ್ ಸಿಬ್ಬಂದಿ ಮನವೊಲಿಸಿದ್ದರು. ಬಳಿಕ 6.80 ಲಕ್ಷ ರೂಪಾಯಿ ಸಾಲ ನೀಡಲಾಗಿತ್ತು. ಸಿಬ್ಬಂದಿ ಕಮಿಷನ್ ಪಡೆಯುವ ಉದ್ದೇಶದಿಂದಲೇ ಸಾಲ ನೀಡಿದ್ದರು ಎಂಬುದು ಗೌರಮ್ಮ ಅವರ ಆರೋಪವಾಗಿದೆ.

ಸಾಲ ಪಡೆದ ಬಳಿಕ ಸತತ ಮೂರು ವರ್ಷ ಮೂರು ತಿಂಗಳ ಕಾಲ ಯಾವುದೇ ಕಂತು ಬಾಕಿ ಉಳಿಸದೆ ಮರುಪಾವತಿ ಮಾಡಿದ್ದಾಗಿ ಗೌರಮ್ಮ ತಿಳಿಸಿದ್ದಾರೆ. ಸಾಲದ ಕಂತು ಪಾವತಿಸಲು ತಾವು ಕೂಲಿ ಕೆಲಸ ಮಾಡುವುದರ ಜತೆಗೆ ಇಬ್ಬರು ಮಕ್ಕಳನ್ನೂ ಇತರರ ಮನೆಗಳಲ್ಲಿ ಕೆಲಸಕ್ಕೆ ಕಳುಹಿಸಿದ್ದರು.

ಆದರೆ, ಕಳೆದ ಕೆಲವು ತಿಂಗಳಿಂದ ಆರೋಗ್ಯ ಹದಗೆಟ್ಟ ಪರಿಣಾಮ ಕೆಲಸ ಮಾಡಲು ಸಾಧ್ಯವಾಗದೆ ಆದಾಯ ಕಡಿಮೆಯಾಗಿದೆ. ಹೀಗಾಗಿ ಸಾಲದ ಕಂತು ಪಾವತಿಸುವುದು ಕಷ್ಟವಾಗಿದೆ.

ತಮ್ಮ ಅನಾರೋಗ್ಯ ಹಾಗೂ ಆದಾಯದ ಸಮಸ್ಯೆಯನ್ನು ವಿವರಿಸಿ ಸಾಲ ಮರುಪಾವತಿಗೆ ಹೆಚ್ಚಿನ ಕಾಲಾವಕಾಶ ನೀಡುವಂತೆ ಸಂಸ್ಥೆಯ ಸಿಬ್ಬಂದಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ.

ಬದಲಾಗಿ ಕಾನೂನು ಕ್ರಮದ ಮೂಲಕ ಮನೆಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಗೌರಮ್ಮ ದೂರಿದ್ದಾರೆ. ಸಾಲದ ಸುಳಿಗೆ ಸಿಲುಕಿದ ಕುಟುಂಬವೊಂದು ಇದೀಗ ಬೀದಿಯಲ್ಲೇ ಬದುಕು ಸಾಗಿಸುವಂತಾಗಿರುವುದು ಸ್ಥಳೀಯವಾಗಿ ಚರ್ಚೆಗೆ ಕಾರಣವಾಗಿದೆ.

ಸಾಲ ವಸೂಲಾತಿಯಲ್ಲಿ ಮಾನವೀಯತೆ ಇರಲಿ: ಸಂಸದೆ ಪ್ರಭಾ ಮಲ್ಲಿಕಾರ್ಜುನ್

ಇನ್ನೊಂದೆಡೆ, ರೈತರ ಸಾಲ ವಸೂಲಾತಿ ವಿಚಾರವಾಗಿ ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಸಹಕಾರಿ ಸಂಸ್ಥೆಗಳಿಗೆ ಮಾನವೀಯತೆ ಪ್ರದರ್ಶಿಸುವಂತೆ ಮನವಿ ಮಾಡಿದ್ದಾರೆ.

ರೈತರು ದೇಶದ ಆರ್ಥಿಕತೆಯ ಬೆನ್ನೆಲುಬಾಗಿದ್ದು, ಕೃಷಿ ಸಂಕಷ್ಟದ ಸಂದರ್ಭದಲ್ಲಿ ಅವರಿಗೆ ನೆರವಾಗುವುದು ಸಹಕಾರಿ ಸಂಸ್ಥೆಗಳ ಜವಾಬ್ದಾರಿಯಾಗಿದೆ. ಸಾಲ ವಸೂಲಾತಿ ಸಂದರ್ಭದಲ್ಲಿ ರೈತರ ಮೇಲೆ ಅನಗತ್ಯ ಒತ್ತಡ ಹೇರುವುದನ್ನು ತಪ್ಪಿಸಬೇಕು.

ಆರ್ಥಿಕ ಸಂಕಷ್ಟದಲ್ಲಿರುವವರ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಮಾನವೀಯ ದೃಷ್ಟಿಕೋನದಿಂದ ಸಾಲ ವಸೂಲಾತಿ ಮಾಡಬೇಕು ಎಂದು ಅವರು ಹೇಳಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande