
ಕೋಲಾರ: 15 ನವೆಂಬರ್ (ಹಿ.ಸ.)
ಕೋಲಾರ ತಾಲ್ಲೂಕಿನ ಚನ್ನಸಂದ್ರ ಗ್ರಾಮದಲ್ಲಿ ‘ಈ ನೆಲ ಈ ಜಲ ತಲೆ ಮತ್ತು ಸಾಂಸ್ಕೃತಿಕ ಸಂಸ್ಥೆ, ಕೋಲಾರ’ ಹಾಗೂ ‘ಕಾರ್ಮಿಕ ಇಲಾಖೆ’ಯ ಸಂಯುಕ್ತ ಆಶ್ರಯದಲ್ಲಿ ವಿಶೇಷ ಜಾಗೃತಿ ಕಾರ್ಯಕ್ರಮ ನಡೆಯಿತು.
ಗ್ರಾಮೀಣ ಭಾಗದ ಜನರಲ್ಲಿ ಶಿಕ್ಷಣದ ಮಹತ್ವವನ್ನು ಬಿಂಬಿಸಲು ಮತ್ತು ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸುವ ಸಂದೇಶ ಸಾರಲು ಆಯೋಜಿಸಿದ್ದ ಈ ಕಾರ್ಯಕ್ರಮವು ಗ್ರಾಮಸ್ಥರ ಗಮನ ಸೆಳೆಯಿತು.
ಸಮಾಜದಲ್ಲಿ ಇಂದಿಗೂ ಇರುವ ಬಾಲ ಕಾರ್ಮಿಕ ಪದ್ಧತಿ ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳ ಸಮಸ್ಯೆಯ ಮೇಲೆ ಬೆಳಕು ಚೆಲ್ಲಿತು. ಪ್ರತಿಯೊಬ್ಬ ಮಗುವಿಗೂ ಅಕ್ಷರ ಕಲಿಯುವ ಹಕ್ಕಿದೆ, ಮಕ್ಕಳನ್ನು ಕೆಲಸಕ್ಕೆ ಕಳುಹಿಸದೆ ಶಾಲೆಗೆ ಕಳುಹಿಸಿ ಎಂಬ ಶಕ್ತಿಯುತ ಸಂದೇಶವನ್ನು ಕಲಾ ತಂಡವು ಅತ್ಯಂತಭಾವನಾತ್ಮಕವಾಗಿ ಹಾಗೂ ಮನಮುಟ್ಟುವಂತೆ ಅಭಿನಯದ ಮೂಲಕ ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಟ್ಟಿತು. ನಾಟಕದ ಸಂದೇಶವು ನೆರೆದಿದ್ದ ಹಳ್ಳಿ ಜನರ ಮನಸ್ಸಿನಲ್ಲಿ ಆಳವಾದ ಪರಿಣಾಮ ಬೀರಿತು.
ಜಾಗೃತಿ ಕಾರ್ಯಕ್ರಮದಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಬಿ. ವೆಂಕಟಾಚಲಪತಿ, ಶಾಂತಮ್ಮ, ಗಣೇಶಪ್ಪ, ಸೌದಾಮಿನಿ, ಮಧು, ನಾರಾಯಣಸ್ವಾಮಿ, ಅಂಕಿತಾ ಸೇರಿದಂತೆ ನೂರಾರು ಗ್ರಾಮಸ್ಥರು, ಮಹಿಳೆಯರು ಮತ್ತು ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು. ಕಾರ್ಯಕ್ರಮದ ಅಂತ್ಯದಲ್ಲಿ ಗ್ರಾಮದ ಎಲ್ಲ ಮಕ್ಕಳನ್ನು ಶಾಲೆಗೆ ಕಳುಹಿಸುವುದಾಗಿ ಹಿರಿಯರು ಸಂಕಲ್ಪ ಮಾಡಿದರು.
---------------
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್