
ಗದಗ, 15 ನವೆಂಬರ್ (ಹಿ.ಸ.)
ಮಾರುಕಟ್ಟೆಯಲ್ಲಿ ಈರುಳ್ಳಿಗೆ ಭರ್ಜರಿ ಬೆಲೆ ಸಿಗುತ್ತಿರುವ ಬೆನ್ನಲ್ಲೇ ಈರುಳ್ಳಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ರೈತರು ಬೆಳೆದ ಬೆಳೆಯನ್ನು ಕಾಪಾಡಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಗದಗ ತಾಲೂಕಿನ ನಾರಾಯಣಪುರ ಗ್ರಾಮದ ರೈತ ಚಂದ್ರಶೇಖರ ಹಂಚಿನಾಳ ಅವರ ಜಮೀನಿನಲ್ಲಿ ಕಟಾವು ಮಾಡಿ ಸಂಗ್ರಹಿಸಿಟ್ಟಿದ್ದ ಸುಮಾರು 150ಕ್ಕೂ ಹೆಚ್ಚು ಚೀಲ ಈರುಳ್ಳಿಯನ್ನು ಕಳ್ಳರು ರಾತ್ರೋರಾತ್ರಿ ಕದ್ದೊಯ್ದ ಘಟನೆ ನಡೆದಿದೆ.
ಚಂದ್ರಶೇಖರ ಹಂಚಿನಾಳ ಅವರು ಬರಗಾಲದ ನಡುವೆಯೂ ಸುಮಾರು 8 ಎಕರೆ ಜಮೀನಿನಲ್ಲಿ 6 ಲಕ್ಷ ರೂ. ವೆಚ್ಚ ಮಾಡಿ ಈರುಳ್ಳಿ ಬೆಳೆದಿದ್ದರು. ಚಿನ್ನಾಭರಣಗಳನ್ನು ಅಡವಿಟ್ಟು ಹಾಗೂ ಕೈ ಸಾಲ ಮಾಡಿಕೊಂಡು ಬೆಳೆ ಬೆಳೆದಿದ್ದ ಅವರು, ಉತ್ತಮ ಬೆಲೆ ಸಿಗುವ ನಿರೀಕ್ಷೆಯಲ್ಲಿದ್ದರು. ಪ್ರಸ್ತುತ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ ಈರುಳ್ಳಿಗೆ 5ರಿಂದ 6 ಸಾವಿರ ರೂ. ಬೆಲೆ ದೊರೆಯುತ್ತಿರುವುದರಿಂದ ಸಾಲ ತೀರಿಸುವ ಆಶಾಭಾವನೆ ಹೊಂದಿದ್ದರು.
ಜಮೀನಿನಲ್ಲಿ ಬೆಳೆದ ಈರುಳ್ಳಿಯನ್ನು ಕಟಾವು ಮಾಡಿ ಮಾರಾಟಕ್ಕೆ ಸಿದ್ಧಪಡಿಸಿ ಇಡಲಾಗಿತ್ತು. ಆದರೆ, ರಾತ್ರಿ ವೇಳೆ ಟ್ರ್ಯಾಕ್ಟರ್ನಲ್ಲಿ ಬಂದ ಕಳ್ಳರು ಸುಮಾರು 150ಕ್ಕೂ ಹೆಚ್ಚು ಚೀಲ ಈರುಳ್ಳಿಯನ್ನು ಕದ್ದೊಯ್ದಿದ್ದಾರೆ ಎನ್ನಲಾಗಿದೆ. ನಾರಾಯಣಪುರದಿಂದ ಹುಯಿಲಗೋಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಪಕ್ಕದಲ್ಲಿರುವ ಜಮೀನಿನಲ್ಲಿ ಈ ಘಟನೆ ನಡೆದಿದೆ.
ಕಷ್ಟಪಟ್ಟು ಬೆಳೆದ ಬೆಳೆ ಕೈಗೆ ಬರುವ ಸಮಯದಲ್ಲಿ ಕಳ್ಳತನವಾಗಿರುವುದರಿಂದ ರೈತ ಕುಟುಂಬ ತೀವ್ರ ಆಘಾತಕ್ಕೊಳಗಾಗಿದೆ. ರೈತ ಮಹಿಳೆ ಕಣ್ಣೀರಿಡುತ್ತಾ, ಸಾಲ ಮಾಡಿ ಕಷ್ಟಪಟ್ಟು ಬೆಳೆದ ಈರುಳ್ಳಿಯನ್ನು ಕಳ್ಳರು ಕದ್ದೊಯ್ದಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.
ನಾರಾಯಣಪುರ ಗ್ರಾಮ ಮಾತ್ರವಲ್ಲದೆ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಈರುಳ್ಳಿ ಕಳ್ಳತನ ಪ್ರಕರಣಗಳು ನಡೆಯುತ್ತಿವೆ ಎನ್ನಲಾಗಿದ್ದು, ರೈತರಲ್ಲಿ ಆತಂಕ ಮೂಡಿಸಿದೆ. ಈ ಕುರಿತು ರೈತರು ಕಳ್ಳರನ್ನು ಶೀಘ್ರ ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ.
ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಅನ್ನದಾತರ ಬೆವರಿನ ಫಲವಾಗಿರುವ ಈರುಳ್ಳಿಯನ್ನೇ ಗುರಿಯಾಗಿಸಿಕೊಂಡಿರುವ ಕಳ್ಳರ ಪತ್ತೆಗೆ ಪೊಲೀಸರು ಕ್ರಮ ಕೈಗೊಳ್ಳಬೇಕಿದೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP