ಅಕ್ರಮ ಮದ್ಯ ಮಾರಾಟ ; ನಂಗಲಿ ಪಿ.ಎಸ್.ಐ ಅಮಾನತ್ತು
ಅಕ್ರಮ ಮದ್ಯ ಮಾರಾಟ ; ನಂಗಲಿ ಪಿ.ಎಸ್.ಐ ಅಮಾನತ್ತು
ಕೋಲಾರ ಎಸ್.ಪಿ. ಕನ್ನಿಕಾ ಸಿಕ್ರಿವಾಲ್


ಕೋಲಾರ, 15 ನವೆಂಬರ್ (ಹಿ.ಸ.)

ಅಕ್ರಮ ಮದ್ಯ ಮಾರಾಟ ಹಾಗೂ ಮರಳು ದಂಧೆ ನಿಯಂತ್ರಣ ಮಾಡಲು ವಿಫಲರಾದ ಕಾರಣ ಮುಳಬಾಗಿಲು ತಾಲ್ಲೂಕಿನ ನಂಗಲಿ ಠಾಣೆಯ ಪಿ.ಎಸ್.ಐ. ವಿದ್ಯಶ್ರೀ ಹಾಗೂ ಎಸ್.ಬಿ. ಸಿಬ್ಬಂದಿ ಪ್ರವೀಣ್ ಕುಮಾರ್ ರವರನ್ನು ಕರ್ತವ್ಯನಿರ್ಲಕ್ಷ್ಯ ಮತ್ತು ಅಶಿಸ್ತು ಆರೋಪದ ಮೇಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್ ಅಮಾನತ್ತುಗೊಳಿಸಿದ್ದಾರೆ.

ಮುಳಬಾಗಿಲು ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾದ ಕುಮಾರಿ ಮನೀಷಾ ನಂಗಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಸಿದ ಪರಿಶೀಲನೆ ವೇಳೆಯಲ್ಲಿ ಅಕ್ರಮ ಮಧ್ಯ ಮಾರಾಟ, ಅವಧಿ ಮೀರಿ ಮದ್ಯದ ಅಂಗಡಿಗಳಲ್ಲಿ ಮದ್ಯ ಸರಬರಾಜು ಹಾಗೂ ಕೆರೆಗಳಲ್ಲಿ ನಿರಂತರ ಮರಳು ಅಕ್ರಮ ಸಾಗಾಣಿಕೆ ಕಂಡು ಬಂದಿತ್ತು.

ಎನ್.ವಡ್ಡಹಳ್ಳಿಯ ಅಂಕಾಳಮ್ಮ ಬಾರ್ ಮತ್ತು ರೆಸ್ಟೋರೆಂಟ್ ಹಾಗೂ ಜೆ.ಎಸ್.ಆರ್. ಟೋಲ್ ಬಳಿಯ ದೀಪಿಕಾ ಬಾರ್ ಮತ್ತು ರೆಸ್ಟೋರೆಂಟ್ಗಳಲ್ಲಿ ನಿಗದಿತ ಅವಧಿ ಮೀರಿಯೂ ಮದ್ಯ ಮಾರಾಟ ನಡೆಸಲಾಗುತ್ತಿರುವುದು ಪತ್ತೆಯಾಗಿದ್ದು, ಈ ಸಂಬ0ಧ ಪ್ರತ್ಯೇಕ ಅಬಕಾರಿ ಕಾಯ್ದೆ ಮೇರೆಗೆ ಪ್ರಕರಣಗಳು ದಾಖಲಾಗಿದ್ದವು.

ಜಂಗಾಲಹಳ್ಳಿ ಗ್ರಾಮದ ಸರ್ಕಾರಿ ಕೆರೆಯಲ್ಲಿ ಜೆಸಿಬಿ ಹಾಗೂ ಟ್ರ್ಯಾಕ್ಟರ್ಗಳ ಮೂಲಕ ಅಕ್ರಮವಾಗಿ ಮಣ್ಣು ತೆಗೆದು, ಅದನ್ನು ಫಿಲ್ಟರ್ ಮಾಡಿ ಮರಳಾಗಿ ಪರಿವರ್ತಿಸಿ ಸಾಗಾಣಿಕೆ ಮಾಡುತ್ತಿರುವ ಬಗ್ಗೆ ದೊರೆತ ಮಾಹಿತಿಯ ಆಧಾರದ ಮೇಲೆ ನಡೆಸಿದ ನಂತರ ಪ್ರಕರಣ ದಾಖಲಾಗಿತ್ತು.

ಅಕ್ರಮ ಚಟುವಟಿಕೆಗಳಿಗೆ ಬಳಸಲಾಗುತ್ತಿದ್ದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಾಥಮಿಕ ತನಿಖೆಯ ವೇಳೆ ಜಂಗಾಲಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಫಿಲ್ಟರ್ ಚಟುವಟಿಕೆಗಳಿಗೆ ಸಂಬ0ಧಿಸಿದ0ತೆ ಜಂಗಾಲಹಳ್ಳಿ ಗ್ರಾಮದ ಹರೀಶ್, ಶಿವಾನಂದ, ಸುಧಾಕರ್, ಮುದಿಗೆರೆ ಗ್ರಾಮದ ಬಾಬು, ರತ್ನಪ್ಪ ಹಾಗೂ ಇತರರೊಂದಿಗೆ ನಂಗಲಿ ಪೊಲೀಸ್ ಠಾಣೆಯಲ್ಲಿ ಎಸ್.ಬಿ. ಕರ್ತವ್ಯ ನಿರ್ವಹಿಸುತ್ತಿದ್ದ ಪ್ರವೀಣ್ ಕುಮಾರ್ ಸಂಪರ್ಕ ಹೊಂದಿರುವುದು ವಿಚಾರಣೆ ವೇಳೆಯಲ್ಲಿ ಮೇಲ್ನೋಟಕ್ಕೆ ಕಂಡುಬ0ದಿರುತ್ತದೆ.

ನಂಗಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಅಕ್ರಮ ಮದ್ಯ ಮಾರಾಟ, ಅವಧಿ ಮೀರಿದ ಮದ್ಯ ವಹಿವಾಟು, ಅಕ್ರಮ ಮಣ್ಣು ಹಾಗೂ ಮರಳು ದಂಧೆ ಸೇರಿದಂತೆ ವಿವಿಧ ಕಾನೂನುಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಕ್ರಮ ಕೈಗೊಳ್ಳುವಂತೆ ಅಪರಾಧ ಸಭೆಗಳಲ್ಲಿ ಹಾಗೂ ಠಾಣೆ ಪರಿಶೀಲನೆ ಸಂದರ್ಭದಲ್ಲಿ ಹಲವು ಬಾರಿ ಸೂಚನೆಗಳನ್ನು ಪಿ.ಎಸ್.ಐ. ವಿದ್ಯಶ್ರೀ ರವರಿಗೆ ನೀಡಲಾಗಿತ್ತು.

ಠಾಣಾಅಧಿಕಾರಿಯಾದ ವಿದ್ಯಶ್ರೀ ರವರು ತಮ್ಮ ಠಾಣಾ ವ್ಯಾಪ್ತಿಯ ಅಕ್ರಮ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ. ಮುಳಬಾಗಿಲು ಸಹಾಯಕ ಪೊಲೀಸ್ ಅಧೀಕ್ಷಕರಾದ ಕುಮಾರಿ ಮನೀಷಾ, ಸಬ್ ಇನ್ಸ್ಪೆಕ್ಟರ್ ಹಾಗೂ ಪೇದೆಯ ಕರ್ತವ್ಯ ನಿರ್ಲಕ್ಷ್ಯ ಹಾಗೂ ಅಕ್ರಮ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ವರದಿಯ ಆಧಾರದ ಮೇಲೆ ಇಬ್ಬರನ್ನು ಅಮಾನತ್ತುಪಡಿಸಿ ಇಲಾಖಾ ವಿಚಾರಣೆಗೆ ಎಸ್.ಪಿ. ಕನ್ನಿಕಾ ಸಿಕ್ರಿವಾಲ್ ಆದೇಶ ಮಾಡಿದ್ದಾರೆ

---------------

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande