
ಗದಗ, 15 ನವೆಂಬರ್ (ಹಿ.ಸ.)
ತೋಂಟದಾರ್ಯ ಮಠದ ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ 2824ನೇ ಶಿವಾನುಭವ ಕಾರ್ಯಕ್ರಮ ನವೆಂಬರ್ 16ರಂದು ಸಂಜೆ 7 ಗಂಟೆಗೆ ನಗರದ ತೋಂಟದಾರ್ಯ ಮಠದಲ್ಲಿ ಜರುಗಲಿದೆ.
ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಬೆಳಗಾವಿಯ ಸಾಹಿತಿ ಪ್ರಕಾಶ ಗಿರಿಮಲ್ಲನವರ ಅವರು ‘ಕನ್ನಡಕ್ಕೆ ಲಿಂಗಾಯತ ಮಠಗಳ ಕೊಡುಗೆ’ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ.
2026ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ವೈದ್ಯಕೀಯ ಕ್ಷೇತ್ರದ ಸಾಧಕಿ ಬೆಳಗಾವಿಯ ಡಾ. ಸುಜಾತಾ ಮಲ್ಲಿಕಾರ್ಜುನ ಜಾಲಿ ಹಾಗೂ ನಾಟಕ ಮತ್ತು ರಂಗಭೂಮಿ ಕ್ಷೇತ್ರದಲ್ಲಿ ಸಾಧನೆಗೈದ ಡಾ. ಡಿ.ಎಸ್. ಚೌಗುಲೆ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು.
ಇದೇ ಸಂದರ್ಭದಲ್ಲಿ ರಾಣೆಬೆನ್ನೂರಿನ ಸಾಹಿತಿ ಲಲಿತಾ ಅರಳಿ ಅವರು ರಚಿಸಿರುವ ‘ಮಿನುಗುವ ನಕ್ಷತ್ರಗಳು’ ಮತ್ತು ‘ಆರಾಧನೆ’ ಎಂಬ ಎರಡು ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಲಾಗುವುದು. ಹಿರಿಯ ಸಾಹಿತಿ ಹಾಗೂ ಶಿಕ್ಷಣತಜ್ಞ ಟಿ.ವಿ. ಮಾಗಳದ ಅವರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಕಲಾವಿದರಾದ ರವಿ ಶಿಶ್ವಿನಹಳ್ಳಿ ಮತ್ತು ಫಕ್ಕೀರೇಶ ಕುಳಗೇರಿ ಅವರಿಗೂ ಸನ್ಮಾನ ನಡೆಯಲಿದೆ. ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ವಚನಸಂಗೀತ ಪ್ರಸ್ತುತಪಡಿಸಲಿದ್ದು, ಸಾನ್ವಿ ರಾಜಪ್ಪನವರ ಧರ್ಮಗ್ರಂಥ ಪಠಣ ಹಾಗೂ ಪ್ರತೀಕ್ಷಾ ತುಕ್ಕಪ್ಪನವರ ವಚನ ಚಿಂತನ ನಡೆಸಿಕೊಡಲಿದ್ದಾರೆ.
ಸಂಡೂರಿನ ಕೆ.ಎಸ್. ವೀರಭದ್ರಪ್ಪನವರ ಸ್ಮರಣಾರ್ಥ ಕೆ.ಎಸ್. ನಾಗರಾಜ್ ಹಾಗೂ ರಾಣೆಬೆನ್ನೂರಿನ ಅರಳಿ ಕುಟುಂಬದವರು ದಾಸೋಹ ಸೇವೆ ವಹಿಸಿಕೊಂಡಿದ್ದಾರೆ ಎಂದು ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಡಾ. ಉಮೇಶ ಪುರದ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP