
ಬೆಂಗಳೂರು, 15 ನವೆಂಬರ್ (ಹಿ.ಸ.):
ಕರ್ನಾಟಕದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮದುವೆ ಸಮಾರಂಭಗಳಿಗೆ ಆನೆಗಳನ್ನು ಬಾಡಿಗೆಗೆ ನೀಡುವ ಪದ್ಧತಿ ಮುಂದುವರಿದಿದ್ದು, ಆನೆಗಳ ಶೋಷಣೆ ಮತ್ತು ಅವುಗಳ ಮೇಲಿನ ದೌರ್ಜನ್ಯದ ಕುರಿತು ಪರಿಸರ ಹೋರಾಟಗಾರ ಜೋಸೆಫ್ ಹೂವರ್ ಆತಂಕ ವ್ಯಕ್ತಪಡಿಸಿದ್ದಾರೆ.
ಆನೆಗಳನ್ನು ಬಾಡಿಗೆಗೆ ಪಡೆಯಲು ಅನುಕೂಲವಾಗುವಂತೆ ಸರ್ಕಾರವೇ ಪ್ರತ್ಯೇಕ ಆನೆ ಬಾಡಿಗೆ ಆ್ಯಪ್ ಆರಂಭಿಸಬಹುದೇ ಎಂದು ಅವರು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ. ಆನೆಗಳನ್ನು ಸಾರ್ವಜನಿಕ ಕಾರ್ಯಕ್ರಮಗಳಿಗೆ ಬಳಸುವ ಮೂಲಕ ಅವುಗಳನ್ನು ವ್ಯಾಪಾರದ ವಸ್ತುಗಳನ್ನಾಗಿ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಇದಕ್ಕೆ ಉದಾಹರಣೆಯಾಗಿ ಹೈದರಾಬಾದ್ನಲ್ಲಿ ಇಂದು ನಿಯಂತ್ರಣ ತಪ್ಪಿ ಓಡಾಡಿದ ಮೇನಕಾ ಎಂಬ ಆನೆಯ ಪ್ರಕರಣವನ್ನು ಉಲ್ಲೇಖಿಸಿದ್ದಾರೆ. ಈ ಆನೆಯನ್ನು ಕಳೆದ 17 ತಿಂಗಳಲ್ಲಿ ಬರೋಬ್ಬರಿ 29 ಬಾರಿ ಬಾಡಿಗೆಗೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಕೆಲವು ಮಠಗಳ ಟ್ರಸ್ಟಿಗಳಿಗೆ ಆನೆಗಳನ್ನು ಬಾಡಿಗೆಗೆ ನೀಡುವುದು ವ್ಯವಹಾರವಾಗಿ ಮಾರ್ಪಟ್ಟಿದೆ ಎಂದು ಆರೋಪಿಸಿರುವ ಅವರು, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಆನೆಗಳನ್ನು ಬಳಸುವುದಕ್ಕೆ ಉಚ್ಚ ನ್ಯಾಯಾಲಯ ನಿಷೇಧ ವಿಧಿಸಿದ್ದರೂ ಕರ್ನಾಟಕ ಅರಣ್ಯ ಇಲಾಖೆ ಪರಿಣಾಮಕಾರಿಯಾಗಿ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಟೀಕಿಸಿದ್ದಾರೆ.
ಆನೆಗಳನ್ನು ಸಾರ್ವಜನಿಕ ಕಾರ್ಯಕ್ರಮಗಳಿಗೆ ಬಳಸಲು ಅರಣ್ಯಾಧಿಕಾರಿಗಳ ಮೇಲೆ ರಾಜಕೀಯ ನಾಯಕರು ಒತ್ತಡ ಹೇರುತ್ತಿದ್ದಾರೆ. ಇದರಿಂದ ಆನೆಗಳು ನಿರಂತರವಾಗಿ ಮಾನಸಿಕ ಆಘಾತ ಮತ್ತು ಹಿಂಸೆಗೆ ಒಳಗಾಗುತ್ತಿವೆ ಎಂದು ಜೋಸೆಫ್ ಹೂವರ್ ಆರೋಪಿಸಿದ್ದಾರೆ.
ಆನೆಗಳ ಕಲ್ಯಾಣ ಮತ್ತು ಸಂರಕ್ಷಣೆಗೆ ಆದ್ಯತೆ ನೀಡಬೇಕಾದ ಸಂದರ್ಭದಲ್ಲಿ ಅವುಗಳನ್ನು ಮನರಂಜನೆ ಹಾಗೂ ಸಮಾರಂಭಗಳಿಗಾಗಿ ಬಳಸುತ್ತಿರುವುದರ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.