ಕಾಂಗ್ರೆಸ್ ಎಂದಿಗೂ ಮೇಕೆದಾಟು ಯೋಜನೆ ಜಾರಿ ಮಾಡುವುದಿಲ್ಲ:ಆರ್.ಅಶೋಕ
ಬೆಂಗಳೂರು, 15 ನವೆಂಬರ್ (ಹಿ.ಸ.): ಮೇಕೆದಾಟು ಯೋಜನೆಯನ್ನು ತಮಿಳುನಾಡಿನ ಕಾಂಗ್ರೆಸ್‌ ವಿರೋಧಿಸಿದರೆ, ಇಲ್ಲಿನ ಕಾಂಗ್ರೆಸ್‌ ಸರ್ಕಾರ ಜಾರಿ ಮಾಡಲು ಪ್ರಯತ್ನಿಸುತ್ತಿದೆ. ಇದು ಕಾಂಗ್ರೆಸ್‌ನ ದ್ವಂದ್ವ ನೀತಿಯನ್ನು ತೋರಿಸುತ್ತದೆ. ಕಾಂಗ್ರೆಸ್‌ ಸರ್ಕಾರದಿಂದ ಎಂದಿಗೂ ಈ ಯೋಜನೆ ಜಾರಿಯಾಗುವುದಿಲ್ಲ ಎಂದು ಪ್ರ
ಅಶೋಕ್


ಬೆಂಗಳೂರು, 15 ನವೆಂಬರ್ (ಹಿ.ಸ.):

ಮೇಕೆದಾಟು ಯೋಜನೆಯನ್ನು ತಮಿಳುನಾಡಿನ ಕಾಂಗ್ರೆಸ್‌ ವಿರೋಧಿಸಿದರೆ, ಇಲ್ಲಿನ ಕಾಂಗ್ರೆಸ್‌ ಸರ್ಕಾರ ಜಾರಿ ಮಾಡಲು ಪ್ರಯತ್ನಿಸುತ್ತಿದೆ. ಇದು ಕಾಂಗ್ರೆಸ್‌ನ ದ್ವಂದ್ವ ನೀತಿಯನ್ನು ತೋರಿಸುತ್ತದೆ. ಕಾಂಗ್ರೆಸ್‌ ಸರ್ಕಾರದಿಂದ ಎಂದಿಗೂ ಈ ಯೋಜನೆ ಜಾರಿಯಾಗುವುದಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.

ಫ್ರೀಡಂ ಪಾರ್ಕ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಡಿ.ಕೆ.ಶಿವಕುಮಾರ್‌ ಅವರು ಬಿಜೆಪಿ ಅವಧಿಯಲ್ಲಿ ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಮಾಡಿದ್ದರು. ಅಧಿಕಾರಕ್ಕೆ ಬಂದ ಒಂದು ತಿಂಗಳಲ್ಲೇ ಮೇಕೆದಾಟು ಯೋಜನೆ ಜಾರಿ ಮಾಡುತ್ತೇವೆಂದು ರಾಜ್ಯದ ಜನತೆಗೆ ಮಾತು ಕೊಟ್ಟಿದ್ದರು. ಆದರೆ ಮೂರುವರೆ ವರ್ಷವಾದರೂ ಏನೂ ಮಾಡಿಲ್ಲ. ಕೋರ್ಟ್‌ ಕೂಡ ಈ ಯೋಜನೆ ಮಾಡಬಹುದು ಎಂದು ಒಪ್ಪಿಗೆ ನೀಡಿದೆ. ಆದರೆ ಸ್ಟಿಂಗ್‌ ಆಪರೇಶನ್‌ ಹಾಗೂ ಭ್ರಷ್ಟಾಚಾರದಲ್ಲೇ ಕಾಂಗ್ರೆಸ್‌ ನಾಯಕರು ಮುಳುಗಿದ್ದಾರೆ ಎಂದು ಟೀಕಿಸಿದರು.

ತಮಿಳುನಾಡಿನ ಕಾಂಗ್ರೆಸ್‌ ನಾಯಕರೇ ಈ ಯೋಜನೆಯನ್ನು ವಿರೋಧಿಸುವುದಾಗಿ ಹೇಳಿದ್ದಾರೆ. ಮೇಕೆದಾಟು ಯೋಜನೆಗೆ ಸಹಕಾರ ನೀಡುತ್ತಿಲ್ಲವೆಂದು ಕೇಂದ್ರ ಸರ್ಕಾರವನ್ನು ಕಾಂಗ್ರೆಸ್‌ ನಾಯಕರು ದೂರುತ್ತಿದ್ದರು. ಆದರೆ ಈ ವಿಚಾರದಲ್ಲಿ ತಮ್ಮದೇ ಪಕ್ಷದವರ ಮನ ಒಲಿಸಲು ರಾಜ್ಯದ ಕಾಂಗ್ರೆಸ್‌ ನಾಯಕರಿಗೆ ಆಗುತ್ತಿಲ್ಲ. ಅಂದಮೇಲೆ ಕೇಂದ್ರ ಸರ್ಕಾರದ ವಿರುದ್ಧ ಯಾಕೆ ಆರೋಪ ಮಾಡಲಾಗುತ್ತಿದೆ? ಈಗಿನ ಸರ್ಕಾರ ಮೇಕೆದಾಟು ಯೋಜನೆ ಜಾರಿ ಮಾಡುವುದಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದರೆ ಮಾತ್ರ ಯೋಜನೆ ಜಾರಿಯಾಗಲಿದೆ. ಕೇವಲ ಚುನಾವಣೆ ದೃಷ್ಟಿಯಿಂದ ಇವರೆಲ್ಲರೂ ಅಂದು ಪಾದಯಾತ್ರೆ ಮಾಡಿದ್ದರು. ಇದು ನಗೆಪಾಟಲೀಗೀಡಾದ ವಿಷಯ ಎಂದರು.

ತಮಿಳುನಾಡಿನ ಕಾಂಗ್ರೆಸ್‌ ಅಧ್ಯಕ್ಷರು ಇದು ಕಾನೂನುಬಾಹಿರ ಎಂದಿದ್ದಾರೆ. ಇದಕ್ಕೆ ಕರ್ನಾಟಕದ ಕೆಪಿಸಿಸಿ ಅಧ್ಯಕ್ಷರು, ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ ಉತ್ತರ ನೀಡಬೇಕು. ಅಂಡಮಾನ್‌ಗೆ ಹೋಗಿ ಮರ ತಬ್ಬಿಕೊಂಡ ರಾಹುಲ್‌ ಗಾಂಧಿ ಈಗ ಉತ್ತರ ನೀಡಬೇಕು. ಹಳೆ ಮೈಸೂರು ಭಾಗದ ಜನರಿಗೆ, ಬೆಂಗಳೂರಿನ ಜನರ ಬೆನ್ನಿಗೆ ಸಿಎಂ ಡಿ.ಕೆ.ಶಿವಕುಮಾರ್‌ ಹಾಗೂ ಕಾಂಗ್ರೆಸ್‌ ಚೂರಿ ಹಾಕಿದೆ. ಜನರು ಇದನ್ನು ಕ್ಷಮಿಸುವುದಿಲ್ಲ ಎಂದರು.

ಅರಣ್ಯ ಪ್ರದೇಶದಲ್ಲಿ ಈ ಯೋಜನೆ ಬರುವುದರಿಂದ ಇದಕ್ಕೆ ಪರಿಸರವಾದಿಗಳ ವಿರೋಧವಿದೆ. ಆದ್ದರಿಂದ ಕೇಂದ್ರ ಸರ್ಕಾರ ಎಚ್ಚರಿಕೆಯ ನಡೆ ಇಡುತ್ತಿದೆ. ರಾಜ್ಯ ಸರ್ಕಾರ ಈ ಬಗ್ಗೆ ಎಲ್ಲರನ್ನೂ ಮನ ಒಲಿಸಬೇಕು. ಆದರೆ ತಮಿಳುನಾಡಿನ ಕಾಂಗ್ರೆಸ್‌ ಸುಮ್ಮನಿರದೆ ತೀವ್ರ ವಿರೋಧ ಮಾಡುವುದು ಈ ಪಕ್ಷದ ದ್ವಂದ್ವ ನೀತಿಯನ್ನು ತೋರಿಸುತ್ತದೆ ಎಂದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande