
ಕಲಬುರಗಿ, 15 ನವೆಂಬರ್ (ಹಿ.ಸ.):
ಸಮಸಮಾಜದ ಕನಸು ಕಂಡ ವಿಶ್ವಗುರು ಬಸವಣ್ಣನವರ ಅಶ್ವಾರೂಢ ಮೂರ್ತಿಯನ್ನು ಕಲಬುರಗಿ ಜಿಲ್ಲೆಯ ಹರಸೂರ ಗ್ರಾಮದಲ್ಲಿ ಇಂದು ಸಚಿವ ಈಶ್ವರ ಖಂಡ್ರೆ ಅವರು ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಈಶ್ವರ ಖಂಡ್ರೆ, ಬಸವಣ್ಣನವರ ಸಮಾನತೆ, ಸಹೋದರತ್ವ ಮತ್ತು ಕಾಯಕ ನಿಷ್ಠೆಯ ಸಂದೇಶಗಳು ಎಂದೆಂದಿಗೂ ಪ್ರಸ್ತುತವಾಗಿವೆ. ಕೇವಲ ಮೂರ್ತಿ ಪ್ರತಿಷ್ಠಾಪನೆ ಮಾಡುವುದಷ್ಟೇ ಬಸವಣ್ಣನವರಿಗೆ ಸಲ್ಲಿಸುವ ಗೌರವವಲ್ಲ. ಅವರ ವಿಚಾರಧಾರೆ ಹಾಗೂ ತತ್ವಗಳನ್ನು ನಮ್ಮ ನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವವಾಗಿದೆ ಎಂದು ಹೇಳಿದರು.
ಎಲ್ಲರೂ ಒಗ್ಗಟ್ಟಿನಿಂದ ಬಸವಣ್ಣನವರ ತತ್ವಗಳ ಅಡಿಯಲ್ಲಿ ಸುಂದರ, ಸಮಾನತೆಯ ಸಮಾಜವನ್ನು ನಿರ್ಮಿಸಲು ಮುಂದಾಗಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಪೂಜ್ಯ ಸ್ವಾಮೀಜಿಗಳು, ಶಾಸಕರಾದ ಬಸವರಾಜ ಮತ್ತಿಮೂಡ್, ಶರಣು ಸಾಲಗಾರ, ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಶರಣಕುಮಾರ ಮೋದಿ, ಮಾಜಿ ಶಾಸಕ ಅಮರನಾಥ ಪಾಟೀಲ್, ಆಯೋಜಕ ಸಮಿತಿಯ ಸದಸ್ಯರು ಹಾಗೂ ಸಾವಿರಾರು ಬಸವಾನುಯಾಯಿಗಳು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.