
ಬೆಂಗಳೂರು, 14 ನವೆಂಬರ್ (ಹಿ.ಸ.):
ರಾಜ್ಯದಲ್ಲಿ ಮಳೆ ಪ್ರಮಾಣ ಕಡಿಮೆಯಾಗುತ್ತಿರುವ ಬೆನ್ನಲ್ಲೇ ಪ್ರಮುಖ ಜಲಾಶಯಗಳಲ್ಲಿನ ನೀರಿನ ಸಂಗ್ರಹವೂ ಕುಸಿಯುತ್ತಿದೆ.
ಅದರಲ್ಲೂ ಮೈಸೂರು ಜಿಲ್ಲೆಯ ಕಬಿನಿ ಜಲಾಶಯದಲ್ಲಿ ನೀರಿನ ಮಟ್ಟ ಗಣನೀಯವಾಗಿ ಇಳಿಕೆಯಾಗಿದ್ದು, ಆತಂಕ ಮೂಡಿಸಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ 17.46 ಟಿಎಂಸಿ ನೀರು ಸಂಗ್ರಹವಾಗಿದ್ದ ಕಬಿನಿಯಲ್ಲಿ ಈ ಬಾರಿ 12.14 ಟಿಎಂಸಿ ಮಾತ್ರ ಲಭ್ಯವಿದೆ. ಇತ್ತ ಕೆಆರ್ಎಸ್, ತುಂಗಭದ್ರಾ, ಆಲಮಟ್ಟಿ ಹಾಗೂ ಬಸವಸಾಗರ ಜಲಾಶಯಗಳಲ್ಲಿಯೂ ಒಳಹರಿವು ಕಡಿಮೆಯಾಗಿರುವುದು ಗಮನ ಸೆಳೆದಿದೆ.
ಕಬಿನಿಯಲ್ಲಿ 5 ಟಿಎಂಸಿಗೂ ಹೆಚ್ಚು ನೀರು ಕಡಿಮೆ
ಮೈಸೂರು ಜಿಲ್ಲೆಯ ಕಬಿನಿ ಜಲಾಶಯದ ಇಂದಿನ ನೀರಿನ ಮಟ್ಟ 70.93 ಅಡಿಗಳಷ್ಟಿದೆ. ಜಲಾಶಯದ ಗರಿಷ್ಠ ಸಂಗ್ರಹ ಸಾಮರ್ಥ್ಯ 19.52 ಟಿಎಂಸಿಯಾಗಿದ್ದು, ಪ್ರಸ್ತುತ 12.14 ಟಿಎಂಸಿ ನೀರು ಸಂಗ್ರಹವಾಗಿದೆ.
ಇದರಲ್ಲಿ ಜೀವಂತ ನೀರಿನ ಸಂಗ್ರಹ 2.33 ಟಿಎಂಸಿಯಷ್ಟಿದೆ. ಜಲಾಶಯಕ್ಕೆ 254 ಕ್ಯುಸೆಕ್ ಒಳಹರಿವಿದ್ದು, ಕಬಿನಿ ನದಿಗೆ 600 ಕ್ಯುಸೆಕ್ ಹಾಗೂ ಬಲದಂಡೆ ನಾಲೆಗೆ 750 ಕ್ಯುಸೆಕ್ ನೀರು ಹರಿಸಲಾಗುತ್ತಿದೆ.
ಒಟ್ಟು ಹೊರಹರಿವು 1,350 ಕ್ಯುಸೆಕ್ ಇದೆ. ಎಡದಂಡೆ ನಾಲೆಗೆ ನೀರು ಬಿಡುಗಡೆ ಸ್ಥಗಿತಗೊಳಿಸಲಾಗಿದೆ. ಜಲಾಶಯದ ವ್ಯಾಪ್ತಿಯಲ್ಲಿ ಯಾವುದೇ ಮಳೆಯಾಗಿಲ್ಲ.
ಕೆಆರ್ಎಸ್ನಲ್ಲೂ ಇಳಿಮುಖವಾದ ನೀರಿನ ಮಟ್ಟ
ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ (ಕೆಆರ್ಎಸ್) ಜಲಾಶಯದ ನೀರಿನ ಮಟ್ಟ 97.96 ಅಡಿಗಳಷ್ಟಿದೆ. 124.80 ಅಡಿ ಗರಿಷ್ಠ ಮಟ್ಟ ಹೊಂದಿರುವ ಜಲಾಶಯದಲ್ಲಿ ಪ್ರಸ್ತುತ 21.252 ಟಿಎಂಸಿ ನೀರು ಸಂಗ್ರಹವಾಗಿದೆ.
ಜೀವಂತ ಸಂಗ್ರಹ 12.873 ಟಿಎಂಸಿಯಷ್ಟಿದೆ. ಒಳಹರಿವು 892 ಕ್ಯುಸೆಕ್ ಇದ್ದು, ಕಾಲುವೆ ಹಾಗೂ ಕುಡಿಯುವ ನೀರಿನ ಪೂರೈಕೆ ಸೇರಿದಂತೆ ಒಟ್ಟು 1,295 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ಕಬಿನಿ ಮತ್ತು ಕೆಆರ್ಎಸ್ ಜಲಾಶಯಗಳ ನೀರಿನ ಲಭ್ಯತೆ ಮುಂದಿನ ದಿನಗಳಲ್ಲಿ ಕಾವೇರಿ ನೀರು ನಿರ್ವಹಣೆಗೆ ಪ್ರಮುಖವಾಗಲಿದೆ.
ತುಂಗಭದ್ರೆಗೆ ಒಳಹರಿವು ಶೂನ್ಯ
ತುಂಗಭದ್ರಾ ಜಲಾಶಯದ ನೀರಿನ ಮಟ್ಟ 1,606.219 ಅಡಿಗಳಷ್ಟಿದೆ. ಜಲಾಶಯದ ಗರಿಷ್ಠ ಮಟ್ಟ 1,633 ಅಡಿಗಳಾಗಿದ್ದು, ಪ್ರಸ್ತುತ 30.706 ಟಿಎಂಸಿ ನೀರು ಸಂಗ್ರಹವಿದೆ.
ಆದರೆ ಜಲಾಶಯಕ್ಕೆ ಯಾವುದೇ ಒಳಹರಿವು ಇಲ್ಲ. ಒಳಹರಿವು ಶೂನ್ಯವಾಗಿದ್ದರೂ ಕಾಲುವೆಗಳ ಮೂಲಕ 8,619 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಇದರಿಂದ ಜಲಾಶಯದ ಸಂಗ್ರಹದ ಮೇಲೆ ಒತ್ತಡ ಹೆಚ್ಚಾಗುವ ಸಾಧ್ಯತೆಯಿದೆ.
ಆಲಮಟ್ಟಿ, ಬಸವಸಾಗರದ ನೀರಿನ ಮಟ್ಟ
ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯದ ಗರಿಷ್ಠ ಮಟ್ಟ 519.60 ಮೀಟರ್ ಆಗಿದ್ದು, ಪ್ರಸ್ತುತ ನೀರಿನ ಮಟ್ಟ 513.87 ಮೀಟರ್ ಇದೆ. ಜಲಾಶಯಕ್ಕೆ ಒಳಹರಿವು ಸಂಪೂರ್ಣ ಸ್ಥಗಿತಗೊಂಡಿದ್ದು, 1,317 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ಯಾದಗಿರಿ ಜಿಲ್ಲೆಯ ಬಸವಸಾಗರ ಜಲಾಶಯದ ಗರಿಷ್ಠ ಮಟ್ಟ 492.25 ಮೀಟರ್ ಆಗಿದ್ದು, ಪ್ರಸ್ತುತ 489.19 ಮೀಟರ್ ನೀರಿನ ಮಟ್ಟವಿದೆ. ಜಲಾಶಯಕ್ಕೆ 51 ಕ್ಯುಸೆಕ್ ಒಳಹರಿವಿದ್ದು, 843 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ಬೆಂಗಳೂರಿನ ಕುಡಿಯುವ ನೀರಿನ ಪೂರೈಕೆಯ ಮೇಲೂ ನಿಗಾ
ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಾದ ಕಬಿನಿ ಮತ್ತು ಕೆಆರ್ಎಸ್ನಲ್ಲಿನ ನೀರಿನ ಸಂಗ್ರಹ ಇಳಿಕೆಯಾಗುತ್ತಿರುವುದು ಬೆಂಗಳೂರಿನ ಕುಡಿಯುವ ನೀರಿನ ಪೂರೈಕೆಯ ಬಗ್ಗೆಯೂ ಗಮನಹರಿಸುವಂತೆ ಮಾಡಿದೆ.
ಆದರೆ ಪ್ರಸ್ತುತ ಅಂಕಿಅಂಶಗಳ ಆಧಾರದಲ್ಲಿ ತಕ್ಷಣವೇ ಕುಡಿಯುವ ನೀರಿನ ಅಭಾವ ಎದುರಾಗಲಿದೆ ಎಂದು ಹೇಳಲಾಗದು. ಮುಂದಿನ ದಿನಗಳಲ್ಲಿ ಮಳೆಯ ಪ್ರಮಾಣ, ಜಲಾಶಯಗಳ ಒಳಹರಿವು ಹಾಗೂ ನೀರಿನ ಬಳಕೆಯ ಪ್ರಮಾಣ ನಿರ್ಣಾಯಕವಾಗಲಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R