ದೇಗುಲದ ಆನೆಗಳ ಅಮಾನವೀಯ ಸ್ಥಿತಿಗೆ ನಟಿ ರಮ್ಯಾ ಆಕ್ರೋಶ
ಬೆಂಗಳೂರು, 14 ನವೆಂಬರ್ (ಹಿ.ಸ.): ದೇಗುಲದ ಆನೆಗಳ ಮೇಲೆ ನಡೆಯುತ್ತಿರುವ ಅಮಾನವೀಯ ವರ್ತನೆ ಹಾಗೂ ಅವುಗಳ ಕಲ್ಯಾಣದ ಕುರಿತು ನಟಿ ಮತ್ತು ಮಾಜಿ ಸಂಸದೆ ರಮ್ಯಾ (ದಿವ್ಯಾ ಸ್ಪಂದನ) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆನೆಗಳ ಕಾಲಿಗೆ ಸರಪಳಿ ಬಿಗಿದು ಗಾಯಗೊಳಿಸಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ
Ramya Slams Inhumane Treatment of Temple Elephants, Questions Department's Role


ಬೆಂಗಳೂರು, 14 ನವೆಂಬರ್ (ಹಿ.ಸ.):

ದೇಗುಲದ ಆನೆಗಳ ಮೇಲೆ ನಡೆಯುತ್ತಿರುವ ಅಮಾನವೀಯ ವರ್ತನೆ ಹಾಗೂ ಅವುಗಳ ಕಲ್ಯಾಣದ ಕುರಿತು ನಟಿ ಮತ್ತು ಮಾಜಿ ಸಂಸದೆ ರಮ್ಯಾ (ದಿವ್ಯಾ ಸ್ಪಂದನ) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆನೆಗಳ ಕಾಲಿಗೆ ಸರಪಳಿ ಬಿಗಿದು ಗಾಯಗೊಳಿಸಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಪ್ರತಿಕ್ರಿಯಿಸಿರುವ ಅವರು, ಸಂಬಂಧಪಟ್ಟ ಇಲಾಖೆಯ ಕಾರ್ಯವೈಖರಿಯನ್ನೂ ಪ್ರಶ್ನಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಮ್ಯಾ, ಇಂತಹ ಘಟನೆಗಳು ಶೋಚನೀಯವಾಗಿದ್ದು, ತಮಗೆ ತೀವ್ರ ಕೋಪ ಮತ್ತು ದುಃಖ ಉಂಟುಮಾಡಿವೆ ಎಂದು ಹೇಳಿದ್ದಾರೆ. ಅಮಾನವೀಯ ಹಾಗೂ ಕಾನೂನುಬಾಹಿರ ಕೃತ್ಯಗಳಿಗೆ ಸಂಬಂಧಪಟ್ಟ ಇಲಾಖೆಯೇ ಅವಕಾಶ ನೀಡುತ್ತಿರುವುದು ಬೇಸರದ ಸಂಗತಿ. ಸಚಿವರು ಮತ್ತು ಧಾರ್ಮಿಕ ವಲಯದ ಒತ್ತಡಕ್ಕೆ ಇಲಾಖೆ ಮಣಿದಿದೆಯೇ ಎಂಬ ಅನುಮಾನ ಮೂಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದೇ ಸಂದರ್ಭದಲ್ಲಿ ಕರ್ನಾಟಕದ ಅಲಕನೂರು ಮಠದ ಆನೆ ಧ್ರುವರಾಜನ ಸಾವು ಕೂಡ ದೇಗುಲದ ಆನೆಗಳ ಬದುಕಿನ ಪರಿಸ್ಥಿತಿಯ ಕುರಿತು ಚರ್ಚೆಗೆ ಕಾರಣವಾಗಿದೆ.

ಮಠದ ಸೇವೆಯಲ್ಲಿ 25 ವರ್ಷಕ್ಕೂ ಹೆಚ್ಚು ಕಾಲ ಕಳೆದಿದ್ದ ಧ್ರುವರಾಜ ಆನೆ ತನ್ನ 30ನೇ ವಯಸ್ಸಿನಲ್ಲಿ ಮೃತಪಟ್ಟಿದೆ ಎಂದು ಸುಜಯ್ ಜಗದೀಶ್ ಎಂಬುವವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಸಾಮಾನ್ಯವಾಗಿ ಆನೆಗಳ ನೈಸರ್ಗಿಕ ಜೀವಿತಾವಧಿ ಸುಮಾರು 70 ವರ್ಷಗಳೆಂದು ಹೇಳಲಾಗುತ್ತದೆ. ಹೀಗಾಗಿ, ಧ್ರುವರಾಜನ ಅಕಾಲಿಕ ಸಾವು ಆನೆಗಳ ಆರೋಗ್ಯ, ನಿರ್ವಹಣೆ ಮತ್ತು ಜೀವನ ಪರಿಸ್ಥಿತಿಯ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande