
ರಾಮನಗರ, 14 ನವೆಂಬರ್ (ಹಿ.ಸ.):
ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರಿಗೆ ಹಾರೋಹಳ್ಳಿ ತಾಲೂಕಿನ ಕುರುಬರಹಳ್ಳಿ ಗ್ರಾಮದ ಶ್ರೀ ಬಿಸಿಲು ಮಾರಮ್ಮ ದೇವಾಲಯ ಪ್ರವೇಶ ನಿರಾಕರಿಸಿರುವ ಘಟನೆಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ಶ್ರೀ ರಂಗನಾಥಸ್ವಾಮಿ ಬೆಟ್ಟದಲ್ಲಿ ದೇವರ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವರು ಎಲ್ಲರಿಗೂ ಒಂದೇ. ದೇವಾಲಯದ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನ ನೀಡಿ, ಬಳಿಕ ದರ್ಶನಕ್ಕೆ ಅವಕಾಶ ನಿರಾಕರಿಸಿರುವುದು ನೋವಿನ ಸಂಗತಿ ಎಂದು ಹೇಳಿದರು.
ಕುರುಬರಹಳ್ಳಿ ಗ್ರಾಮದ ಶ್ರೀ ಬಿಸಿಲು ಮಾರಮ್ಮ ದೇವಾಲಯದ ಉದ್ಘಾಟನಾ ಕಾರ್ಯಕ್ರಮಕ್ಕೆ ನಿಖಿಲ್ ಕುಮಾರಸ್ವಾಮಿ ಅವರನ್ನು ಆಹ್ವಾನಿಸಲಾಗಿತ್ತು. ಆಹ್ವಾನದ ಮೇರೆಗೆ ದೇವಾಲಯಕ್ಕೆ ತೆರಳಿ ತಾಯಿಯ ದರ್ಶನ ಪಡೆಯಲು ಮುಂದಾದಾಗ ಏಕಾಏಕಿ ದೇವಾಲಯದ ಬಾಗಿಲಿಗೆ ಬೀಗ ಹಾಕಿ ದರ್ಶನ ನಿರಾಕರಿಸಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ರಾಜಕೀಯ ಬೆರೆಸಲು ಇಷ್ಟವಿಲ್ಲ
ಇದು ರಾಜಕೀಯ ಬೆರೆಸುವ ವಿಚಾರವಲ್ಲ. ಇಂದು ರಾಜಕೀಯ ಚರ್ಚೆ ಮಾಡಲು ನನಗೂ ಇಷ್ಟವಿಲ್ಲ. ಆದರೆ ಈ ಘಟನೆ ನನ್ನ ಮನಸ್ಸಿಗೆ ನೋವುಂಟುಮಾಡಿದೆ. ಕುರುಬರಹಳ್ಳಿ ಗ್ರಾಮದ ಜನರೊಂದಿಗೆ ನನಗೆ ಆತ್ಮೀಯ ಸಂಬಂಧವಿದೆ. ಸದಾ ನನ್ನನ್ನು ಬೆಂಬಲಿಸಿ, ದೊಡ್ಡ ಮಟ್ಟದಲ್ಲಿ ಮತ ನೀಡಿ ಗೆಲ್ಲಿಸಿರುವ ಗ್ರಾಮದ ದೇವಾಲಯದ ಪ್ರಾರಂಭೋತ್ಸವದಲ್ಲಿ ಇಂತಹ ಘಟನೆ ನಡೆಯಬಾರದಿತ್ತು ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪ್ರತಿಪಕ್ಷಗಳ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಡೆಸುವ ಘಟನೆಗಳು ಹೆಚ್ಚಾಗಿವೆ ಎಂದು ಆರೋಪಿಸಿದ ಅವರು, ಕಾರ್ಯಕರ್ತರನ್ನು ಭಯಭೀತರನ್ನಾಗಿಸುವ ಪ್ರಯತ್ನ ನಡೆಯುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರ ನಡವಳಿಕೆ, ದೌರ್ಜನ್ಯ ಹಾಗೂ ರೌಡಿಸಂ ಬಗ್ಗೆ ಈಗಲೇ ಹೆಚ್ಚು ಮಾತನಾಡಲು ಬಯಸುವುದಿಲ್ಲ. ಆದರೆ ಅಲ್ಲಿನ ಜನರು ಬುದ್ಧಿ ಕಲಿಸುವ ದಿನ ದೂರವಿಲ್ಲ ಎಂದು ಎಚ್ಚರಿಕೆ ನೀಡಿದರು.
2004ರ ಘಟನೆಯನ್ನು ಸ್ಮರಿಸಿದ ಎಚ್ಡಿಕೆ
2004ರಲ್ಲಿ ಇದೇ ರಾಮನಗರ ಜಿಲ್ಲೆಯ ಕೂಟಗಲ್ಲು ಹೊಸೂರು ಗ್ರಾಮದಲ್ಲಿ ತಾವು ದೇವಾಲಯಕ್ಕೆ ತೆರಳುವ ಸಂದರ್ಭದಲ್ಲಿ ಕಾಂಗ್ರೆಸ್ನವರು ದಬ್ಬಾಳಿಕೆ ನಡೆಸಿ ದೇವಸ್ಥಾನಕ್ಕೆ ಬೀಗ ಹಾಕಿದ್ದರು ಎಂದು ಹಿಂದಿನ ಘಟನೆಯನ್ನು ಸ್ಮರಿಸಿದರು.
ದೇವರ ಅನುಗ್ರಹ ಹೇಗಿರುತ್ತದೆ ಎಂಬುದು ಯಾರಿಗೆ ಗೊತ್ತು? ಆನಂತರ ನಡೆದ ಚುನಾವಣೆಯಲ್ಲಿ ಜನರು ನನಗೆ 25 ಸಾವಿರಕ್ಕೂ ಹೆಚ್ಚು ಮತಗಳ ಬಹುಮತ ನೀಡಿ ಗೆಲ್ಲಿಸಿದ್ದರು. ಈ ಬಾರಿಯೂ ಕಾಂಗ್ರೆಸ್ನವರು ಅಂತಹದ್ದೇ ಪರಿಸ್ಥಿತಿ ಸೃಷ್ಟಿಸಿದ್ದಾರೆ. ಬದಲಾವಣೆಯ ಪರ್ವಕ್ಕೆ ಕಾಂಗ್ರೆಸ್ ಕಾರ್ಯಕರ್ತರೇ ನಾಂದಿ ಹಾಡಿದ್ದಾರೆ. ಈಗಾಗಲೇ ಜೆಡಿಎಸ್ ಕಾರ್ಯಕರ್ತರು ಹೋರಾಟ ಆರಂಭಿಸಿದ್ದಾರೆ ಎಂದು ಹೇಳಿದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R