ರೈತರ ಆರ್ಥಿಕ ಸ್ವಾವಲಂಬನೆಗೆ ಸಹಕಾರ ಕ್ಷೇತ್ರವೇ ಹೆಬ್ಬಾಗಿಲು: ಡಿ.ಕೆ. ಶಿವಕುಮಾರ್
ಬೆಂಗಳೂರು, 14 ನವೆಂಬರ್ (ಹಿ.ಸ.): ರೈತರ ಆರ್ಥಿಕ ಸ್ವಾವಲಂಬನೆಗೆ ಸಹಕಾರ ಕ್ಷೇತ್ರ ಪ್ರಮುಖ ಆಧಾರವಾಗಿದ್ದು, ಕೃಷಿ ಮತ್ತು ಗ್ರಾಮೀಣ ಆರ್ಥಿಕತೆಯ ಬಲವರ್ಧನೆಗೆ ಸಹಕಾರಿ ಸಂಸ್ಥೆಗಳಿಗೆ ಹೆಚ್ಚಿನ ಶಕ್ತಿ ತುಂಬಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ಬೆಂಗಳೂರಿನ ಬನಶಂಕರಿ ಸಮೀಪದ ಸರ್ ಎಂ
ಸಿಎಂ ಡಿ.ಕೆ.ಶಿವಕುಮಾರ್


ಬೆಂಗಳೂರು, 14 ನವೆಂಬರ್ (ಹಿ.ಸ.):

ರೈತರ ಆರ್ಥಿಕ ಸ್ವಾವಲಂಬನೆಗೆ ಸಹಕಾರ ಕ್ಷೇತ್ರ ಪ್ರಮುಖ ಆಧಾರವಾಗಿದ್ದು, ಕೃಷಿ ಮತ್ತು ಗ್ರಾಮೀಣ ಆರ್ಥಿಕತೆಯ ಬಲವರ್ಧನೆಗೆ ಸಹಕಾರಿ ಸಂಸ್ಥೆಗಳಿಗೆ ಹೆಚ್ಚಿನ ಶಕ್ತಿ ತುಂಬಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಬೆಂಗಳೂರಿನ ಬನಶಂಕರಿ ಸಮೀಪದ ಸರ್ ಎಂ. ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಆಯೋಜಿಸಿದ್ದ 73ನೇ ಸಹಕಾರ ಸಪ್ತಾಹ-2026 ಉದ್ಘಾಟಿಸಿ ಅವರು ಮಾತನಾಡಿದರು.

ಸಹಕಾರ ಚಳವಳಿ ಜನರಿಂದ, ಜನರಿಗಾಗಿ ಇರುವ ವ್ಯವಸ್ಥೆಯಾಗಿದೆ. ಸರ್ವರಿಗೂ ಸಮಪಾಲು, ಸಮಬಾಳು ಎಂಬುದು ಇದರ ಮೂಲತತ್ವ. ರೈತರ ಬದುಕಿನ ಬೆನ್ನೆಲುಬಾಗಿರುವ ಸಹಕಾರಿ ಸಂಸ್ಥೆಗಳಿಗೆ ಸರ್ಕಾರದ ಬೆಂಬಲ ಮುಂದುವರಿಯಲಿದೆ. ಒಂದು ಹಳ್ಳಿಯಲ್ಲಿ ಸಹಕಾರಿ ಸಂಘ, ಶಾಲೆ ಮತ್ತು ಪಂಚಾಯಿತಿ ಇರಬೇಕು ಎಂಬುದು ಮಹಾತ್ಮ ಗಾಂಧೀಜಿಯವರ ಆಶಯವಾಗಿತ್ತು ಎಂದರು.

17 ಲಕ್ಷ ರೈತರಿಗೆ ಬಡ್ಡಿರಹಿತ ಸಾಲ

ರಾಜ್ಯ ಸರ್ಕಾರದ ಬೆಳೆ ಸಾಲ ಮತ್ತು ಬಡ್ಡಿ ಸಹಾಯಧನ ಯೋಜನೆಯಡಿ ಸುಮಾರು 17 ಲಕ್ಷ ರೈತರಿಗೆ ಬಡ್ಡಿರಹಿತ ಸಾಲ ಸೌಲಭ್ಯ ಕಲ್ಪಿಸಲಾಗಿದೆ. ಇದಕ್ಕಾಗಿ ವಿವಿಧ ರೂಪಗಳಲ್ಲಿ ಈಗಾಗಲೇ 1,135 ಕೋಟಿ ರೂಪಾಯಿ ಅನುದಾನ ಒದಗಿಸಲಾಗಿದೆ. ಬಡ್ಡಿರಹಿತ ಸಾಲಕ್ಕಾಗಿ 1,592 ಕೋಟಿ ರೂಪಾಯಿ ಮೀಸಲಿಡಲಾಗಿದ್ದು, ರೈತರಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ ಎಂದು ತಿಳಿಸಿದರು.

ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ರಾಜ್ಯದ ಸುಮಾರು 25 ಲಕ್ಷ ರೈತರು ಸದಸ್ಯರಾಗಿದ್ದಾರೆ. ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ ಐದು ರೂಪಾಯಿ ಪ್ರೋತ್ಸಾಹಧನ ನೀಡಲಾಗುತ್ತಿದೆ. ಯಶಸ್ವಿನಿ ಯೋಜನೆಯಡಿ 52 ಲಕ್ಷ ಸದಸ್ಯರಿಗೆ ಸುಮಾರು 9,450 ಆಸ್ಪತ್ರೆಗಳ ಮೂಲಕ ಚಿಕಿತ್ಸಾ ಸೌಲಭ್ಯ ಕಲ್ಪಿಸಲಾಗಿದೆ. ಡಿಸಿಸಿ ಬ್ಯಾಂಕ್ ಹಾಗೂ ಭೂ ಅಭಿವೃದ್ಧಿ ಬ್ಯಾಂಕ್‌ಗಳು ಕೃಷಿ ಚಟುವಟಿಕೆಗಳಿಗೆ ಸಾಲ ನೀಡುವ ಮೂಲಕ ರೈತರ ನೆರವಿಗೆ ನಿಂತಿವೆ ಎಂದರು.

ಸುಮಾರು 75 ಸಾವಿರ ಕುಟುಂಬಗಳಿಗೆ 1,551 ಕೋಟಿ ರೂಪಾಯಿ ದೀರ್ಘಾವಧಿ ಸಾಲ ವಿತರಿಸಲಾಗಿದೆ. ಸಹಕಾರಿ ಸಕ್ಕರೆ ಕಾರ್ಖಾನೆಗಳು, ಹಾಲು ಉತ್ಪಾದಕರ ಸಂಘಗಳು, ನಗರ ಸಹಕಾರಿ ಬ್ಯಾಂಕ್‌ಗಳು ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು ಗ್ರಾಮೀಣ ಆರ್ಥಿಕತೆಯ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿವೆ ಎಂದು ವಿವರಿಸಿದರು.

ಸಹಕಾರ ಕ್ಷೇತ್ರಕ್ಕೆ ರಾಜಕೀಯಕ್ಕಿಂತ ಸೇವೆಯೇ ಮುಖ್ಯ

ಸಹಕಾರ ಕ್ಷೇತ್ರದಲ್ಲಿ ರಾಜಕೀಯಕ್ಕಿಂತ ಸಂಸ್ಥೆಯ ಹಿತಾಸಕ್ತಿ ಮತ್ತು ಸೇವೆಗೆ ಹೆಚ್ಚಿನ ಆದ್ಯತೆ ಇದೆ. ಪರಸ್ಪರ ಹೊಂದಾಣಿಕೆ, ಒಗ್ಗಟ್ಟು ಮತ್ತು ಸೇವಾ ಮನೋಭಾವ ಈ ಕ್ಷೇತ್ರದ ಶಕ್ತಿಯಾಗಿದೆ. ಅನೇಕ ನಾಯಕರು, ಸಂಸದರು, ಶಾಸಕರು ಹಾಗೂ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಸಹಕಾರ ಕ್ಷೇತ್ರದಿಂದಲೇ ಬೆಳೆದು ಬಂದಿದ್ದಾರೆ ಎಂದು ಹೇಳಿದರು.

ರೈತರ ಕೈ ಬಲಪಡಿಸಲು ಸಹಕಾರಿ ಸಂಸ್ಥೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಹಾಲು ಉತ್ಪಾದಕರಿಗೆ ಅವರ ಶ್ರಮಕ್ಕೆ ತಕ್ಕ ಬೆಲೆ ದೊರೆಯಬೇಕು. ಅಮೂಲ್‌ನಲ್ಲಿ ಹಾಲಿನ ಬೆಲೆ ಲೀಟರ್‌ಗೆ 61ರಿಂದ 62 ರೂಪಾಯಿ ಇದ್ದರೆ, ರಾಜ್ಯದಲ್ಲಿ ರೈತರಿಗೆ ದೊರೆಯುತ್ತಿರುವ ಬೆಲೆ 54 ರೂಪಾಯಿ ಎಂದು ತಿಳಿಸಿದರು. ಜಾನುವಾರುಗಳ ಸಾಕಣೆ, ಮೇವು, ಔಷಧೋಪಚಾರ ಮತ್ತು ಆರೈಕೆಗೆ ರೈತರು ಸಾಕಷ್ಟು ಶ್ರಮಿಸುತ್ತಾರೆ. ಅವರ ಆರ್ಥಿಕ ಬದುಕಿಗೆ ಬೆಂಬಲ ನೀಡುವುದು ಸರ್ಕಾರದ ಜವಾಬ್ದಾರಿ ಎಂದರು.

ಬರ ಪರಿಹಾರಕ್ಕೆ ಕೇಂದ್ರದಿಂದ ₹22 ಸಾವಿರ ಕೋಟಿ ನೆರವಿನ ಬೇಡಿಕೆ

ರಾಜ್ಯದಲ್ಲಿ ಬರ ಪರಿಸ್ಥಿತಿಯಿಂದ ಸುಮಾರು 60 ಸಾವಿರ ಕೋಟಿ ರೂಪಾಯಿ ನಷ್ಟವಾಗಿರುವ ಕುರಿತು ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆ. ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಿ 22 ಸಾವಿರ ಕೋಟಿ ರೂಪಾಯಿ ನೆರವು ನೀಡುವಂತೆ ಒತ್ತಾಯಿಸಲಾಗಿದೆ ಎಂದು ತಿಳಿಸಿದರು.

ಗ್ರಾಮೀಣ ಬದುಕಿಗೆ ನೆರವಾಗಲು ನೇಗಿಲಯೋಗಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮರಗಳ ಬೆಳವಣಿಗೆಗೆ ಉತ್ತೇಜನ ನೀಡುವ ತೇಗದ ಸಿರಿ ಕಾರ್ಯಕ್ರಮಗಳನ್ನು ಪರಿಚಯಿಸಲಾಗಿದೆ ಎಂದರು.

ಯಶವಂತಪುರದಲ್ಲಿ ₹41 ಕೋಟಿ ವೆಚ್ಚದಲ್ಲಿ ಕಾಲೇಜು

ಯಶವಂತಪುರ ಕ್ಷೇತ್ರದಲ್ಲಿ ನಾಲ್ಕು ಎಕರೆ 39 ಗುಂಟೆ ಜಾಗದಲ್ಲಿ ಸುಮಾರು 41 ಕೋಟಿ ರೂಪಾಯಿ ವೆಚ್ಚದಲ್ಲಿ ಸರ್ಕಾರಿ ಕಾಲೇಜು ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಶಾಸಕ ಎಸ್.ಟಿ. ಸೋಮಶೇಖರ್ ಅವರ ಮನವಿಗೆ ಸ್ಪಂದಿಸಿ ಬಿಡಿಎ ಮೂಲಕ ಜಾಗ ಮಂಜೂರು ಮಾಡಿಸಲಾಗಿದೆ. ಉಲ್ಲಾಳದಲ್ಲಿ 250 ಹಾಸಿಗೆಗಳ ಸಾಮರ್ಥ್ಯದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೂ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಬೆಂಗಳೂರು ನಗರದಲ್ಲಿ ಸಹಕಾರಿ ವಸತಿ ಸಂಘಗಳ ಮೂಲಕ ಸುಮಾರು 30ರಿಂದ 40 ಲಕ್ಷ ಜನರಿಗೆ ನಿವೇಶನ ಸೌಲಭ್ಯ ದೊರೆತಿರಬಹುದು. ಇಂತಹ ಜನಪರ ಸಹಕಾರ ಚಳವಳಿಯನ್ನು ಉಳಿಸಿ ಬೆಳೆಸಬೇಕು ಎಂದು ಕರೆ ನೀಡಿದರು.

ಶಾಸಕ ಎಸ್.ಟಿ. ಸೋಮಶೇಖರ್ ಅವರನ್ನು ಕ್ಷೇತ್ರದ ಜನರು ಮೂರು-ನಾಲ್ಕು ಬಾರಿ ಗೆಲ್ಲಿಸಿ ಜನಸೇವೆ ಮಾಡಲು ಅವಕಾಶ ನೀಡಿದ್ದಾರೆ. 2028ರಲ್ಲಿಯೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರಲಿದೆ ಎಂದು ಡಿ.ಕೆ. ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande