







ಬಳ್ಳಾರಿ, 14 ನವೆಂಬರ್ (ಹಿ.ಸ.)
ವಿದ್ಯಾರ್ಥಿಗಳ ಸಂಖ್ಯೆ ಮತ್ತು ಹಾಜರಾತಿ ಕಡಿಮೆಯಿದೆ ಎಂಬ ಕಾರಣ ನೀಡಿ ಕನ್ನಡ ಶಾಲೆಗಳನ್ನು ಮುಚ್ಚುವುದು ಸರಿಯಲ್ಲ. ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಕನ್ನಡ ಶಾಲೆಗಳನ್ನು ಮುಚ್ಚಬಾರದು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಿ.ವಿ. ಪರಶಿವಮೂರ್ತಿ ಆಗ್ರಹಿಸಿದರು.
ನಗರದ ರಾಘವ ಕಲಾಮಂದಿರದಲ್ಲಿ ಶನಿವಾರ ಆರಂಭಗೊಂಡ ಎರಡು ದಿನಗಳ ಅಖಂಡ ಬಳ್ಳಾರಿ ಜಿಲ್ಲಾ 23ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕದ ಗ್ರಾಮೀಣ ಪ್ರದೇಶಗಳಿಗೂ ಅನ್ಯಭಾಷೆಗಳ ಪ್ರಭಾವ ವ್ಯಾಪಿಸುತ್ತಿದೆ. ಇಂತಹ ಸಂದರ್ಭದಲ್ಲಿ ಗ್ರಾಮೀಣ ಜನರಲ್ಲಿ ಕನ್ನಡ ಕಲಿಕೆಯ ಕುರಿತು ಆತ್ಮವಿಶ್ವಾಸ ಮೂಡಿಸಬೇಕಿದೆ. ಕನ್ನಡ ಭಾಷೆ ಕಲಿಯಲು ಹಾಗೂ ಕನ್ನಡ ಸಂಸ್ಕೃತಿಯನ್ನು ಪಾಲಿಸಲು ಗ್ರಾಮೀಣ ಜನರಿಗೆ ಸೂಕ್ತ ಪ್ರೋತ್ಸಾಹ ನೀಡಬೇಕು ಎಂದರು.
ಯಾವುದೇ ಭಾಷೆಯನ್ನು ಮಾತನಾಡುವ ಮತ್ತು ಬರೆಯುವ ಮೂಲಕ ಉಳಿಸಿ ಬೆಳೆಸಲು ಸಾಧ್ಯ. ಕನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆಯ ದೃಷ್ಟಿಯಿಂದ ಕನ್ನಡ ಶಾಲೆಗಳನ್ನು ಮುಚ್ಚುವ ನಿರ್ಧಾರ ಕೈಗೊಳ್ಳಬಾರದು. ಕನ್ನಡ ಮಾತೃಭಾಷೆಯ ವಿದ್ಯಾರ್ಥಿಗಳ ಹಿತಾಸಕ್ತಿಗಳನ್ನು ಸರ್ಕಾರ ಕಾಪಾಡಬೇಕು ಎಂದು ಒತ್ತಾಯಿಸಿದರು.
ಕನ್ನಡ ವಿದ್ಯಾರ್ಥಿಗಳಲ್ಲಿ ಕೌಶಲದ ಕೊರತೆಯಿದೆ ಎಂಬ ಕಾರಣ ನೀಡಿ ಖಾಸಗಿ ಕಂಪನಿಗಳಲ್ಲಿಯೂ ಉದ್ಯೋಗಾವಕಾಶಗಳು ದೊರೆಯುತ್ತಿಲ್ಲ. ಕನ್ನಡ ಭಾಷೆಯ ರಕ್ಷಣೆ ಹಾಗೂ ಕನ್ನಡಿಗರ ಉದ್ಯೋಗ ಹಿತದೃಷ್ಟಿಯಿಂದ ಖಾಸಗಿ ಕ್ಷೇತ್ರದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀತಿಯನ್ನು ಜಾರಿಗೊಳಿಸಬೇಕು. ರಾಜ್ಯದಲ್ಲಿ ಅನ್ಯಭಾಷಿಕರ ಪ್ರಭಾವ ಮತ್ತು ಅಧಿಪತ್ಯ ಹೆಚ್ಚಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದ ಪತ್ರಕರ್ತ ಹಾಗೂ ಸಾಹಿತಿ ಸಿ.ಜಿ. ಹಂಪಣ್ಣ ಮಾತನಾಡಿ, ಬಳ್ಳಾರಿ ಜಿಲ್ಲೆ ಇತಿಹಾಸ, ಸಾಹಿತ್ಯ, ಕಲೆ, ಸಂಸ್ಕೃತಿ, ರಂಗಭೂಮಿ ಹಾಗೂ ಮಾಧ್ಯಮ ಕ್ಷೇತ್ರಗಳಲ್ಲಿ ವಿಶಿಷ್ಟ ಖ್ಯಾತಿ ಹೊಂದಿದೆ. ಬಳ್ಳಾರಿಯನ್ನು ಕರ್ನಾಟಕದಲ್ಲಿ ಸೇರ್ಪಡೆಗೊಳಿಸುವ ಮೂಲಕ ಕರ್ನಾಟಕ ಏಕೀಕರಣ ಪೂರ್ಣಗೊಂಡಿತು. ಬಳ್ಳಾರಿ ಸಹೃದಯಿ ಕನ್ನಡಿಗರ ತವರುಮನೆಯಾಗಿದ್ದು, ಭಾಷಾ ಸೌಹಾರ್ದತೆ ಮತ್ತು ಕೋಮು ಸಾಮರಸ್ಯಕ್ಕೆ ಹೆಸರಾಗಿದೆ ಎಂದರು.
ಅಖಂಡ ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ನಿಷ್ಠಿ ರುದ್ರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಆಡಳಿತಾತ್ಮಕ ಕಾರಣಗಳಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನಗಳು ಸಂಕಷ್ಟ ಎದುರಿಸುತ್ತಿವೆ. ಆದರೂ ಕನ್ನಡಾಭಿಮಾನಿಗಳು ಮತ್ತು ಕನ್ನಡಿಗರ ಸ್ವಾಭಿಮಾನದ ಪ್ರೋತ್ಸಾಹದಿಂದ ಸರ್ಕಾರದ ಆರ್ಥಿಕ ನೆರವಿಲ್ಲದೆ ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ನಿಕಟಪೂರ್ವ ಸಮ್ಮೇಳನದ ಅಧ್ಯಕ್ಷ ಡಾ. ಅರವಿಂದ ಪಟೇಲ್ ಮಾತನಾಡಿ, ಕನ್ನಡ ಭಾಷೆಯ ಬಳಕೆಯ ಮೂಲಕ ನಾವೆಲ್ಲರೂ ತಾಯಿಹೃದಯದ ಮೌಲ್ಯಗಳನ್ನು ಉಳಿಸಿಕೊಳ್ಳಬೇಕು. ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆಯ ಪ್ರಭಾವದ ನಡುವೆಯೂ ಮಾನವೀಯತೆ ಹಾಗೂ ಮನುಷ್ಯತ್ವವನ್ನು ಉಳಿಸಲು ಪ್ರತಿಯೊಬ್ಬರೂ ಶ್ರಮಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು, ಕಲ್ಯಾಣ ಸ್ವಾಮಿ ಸಂಸ್ಥಾನ ಮಠದ ಕಲ್ಯಾಣ ಶ್ರೀಗಳು ಹಾಗೂ ಡಿಸೋಜಾ ಆರ್ಚ್ ಬಿಷಪ್ ಸಾನ್ನಿಧ್ಯ ವಹಿಸಿದ್ದರು. ಈ ಸಂದರ್ಭದಲ್ಲಿ 'ನುಡಿ ಬೆಳಗು' ಸ್ಮರಣಿಕೆಯನ್ನು ಬಿಡುಗಡೆ ಮಾಡಲಾಯಿತು.
ಅಖಂಡ ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ. ಶಿವಲಿಂಗಪ್ಪ ಹಂದ್ಯಾಳು ಸ್ವಾಗತಿಸಿದರು. ಸಂಡೂರಿನ ಡಾ. ತಿಪ್ಪೇರುದ್ರ ಕಾರ್ಯಕ್ರಮ ನಿರೂಪಿಸಿದರು. ಜಡೇಶ್ ಎಮ್ಮಿಗನೂರು ಗೀತಗಾಯನ ನಡೆಸಿಕೊಟ್ಟರು.
ಮೇಯರ್ ಪಿ. ಗಾದೆಪ್ಪ, ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಕೆ.ಇ. ಚಿದಾನಂದಪ್ಪ, ಅಲ್ಲಂ ಪ್ರಶಾಂತ್, ಅಧಿಕಾರಿ ನಾಗರಾಜ್ ಸೇರಿದಂತೆ ಹಲವು ಗಣ್ಯರು ವೇದಿಕೆಯಲ್ಲಿದ್ದರು.
ಸಮ್ಮೇಳನದ ಅಂಗವಾಗಿ ನಾಟ್ಯ ಕಲಾಪ್ರಪೂರ್ಣ ಟಿ. ರಾಘವಾಚಾರ್ಯ ವೇದಿಕೆ, ಸರ್ವದರ್ಶನ ತೀರ್ಥ ವೈ. ನಾಗೇಶ ಶಾಸ್ತ್ರಿಗಳ ಸಭಾಮಂಟಪ, ಗಮಕ ಕಲಾನಿಧಿ ಡಾ. ಜೋಳದರಾಶಿ ದೊಡ್ಡನಗೌಡ ಮಹಾದ್ವಾರ ಸೇರಿದಂತೆ ವಿವಿಧ ವೇದಿಕೆ ಮತ್ತು ಮಳಿಗೆಗಳನ್ನು ನಿರ್ಮಿಸಲಾಗಿತ್ತು. ವ್ಯಾಕರಣತೀರ್ಥ ಚಂದ್ರಶೇಖರ ಶಾಸ್ತ್ರಿಗಳ ಹೆಸರಿನಲ್ಲಿ ಪುಸ್ತಕ ಮಳಿಗೆ ಹಾಗೂ ದಿ. ಮಂಜುನಾಥ ಗೋವಿಂದವಾಡ ಅವರ ಹೆಸರಿನಲ್ಲಿ ಚಿತ್ರಕಲಾ ಮಳಿಗೆ ತೆರೆಯಲಾಗಿತ್ತು.
ಮಂಗಳವಾದ್ಯಗಳ ವೈಭವದೊಂದಿಗೆ ಕನ್ನಡ ಭುವನೇಶ್ವರಿ ಹಾಗೂ ಸಮ್ಮೇಳನದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಕನ್ನಡಾಭಿಮಾನಿಗಳು, ಕನ್ನಡಪರ ಸಂಘಟನೆಗಳ ಸದಸ್ಯರು, ಕನ್ನಡ ಪೋಷಕರು ಹಾಗೂ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್