





ಬಳ್ಳಾರಿ, 14 ನವೆಂಬರ್ (ಹಿ.ಸ.)
ಪ್ರತಿಯೊಬ್ಬ ಮಗುವಿಗೂ ಉತ್ತಮ ಶಿಕ್ಷಣ ಮತ್ತು ಸುರಕ್ಷಿತ ಬಾಲ್ಯವನ್ನು ನೀಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ವಿಧಾನಪರಿಷತ್ ಸದಸ್ಯರಾದ ವೈ.ಎಂ. ಸತೀಶ್ ಅವರು ತಿಳಿಸಿದ್ದಾರೆ.
ಮಕ್ಕಳ ದಿನಾಚರಣೆಯ ಅಂಗವಾಗಿ ಬಳ್ಳಾರಿಯ ಸತ್ಯನಾರಾಯಣಪೇಟೆಯ ಎಂಎಂಟಿಸಿ ಕಾಲೊನಿಯಲ್ಲಿ ಇರುವ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಬ್ಯಾಗ್, ಪುಸ್ತಕಗಳನ್ನು ಶನಿವಾರ ವಿತರಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರ ಬಾಲ್ಯ ಮುಗ್ದತೆಯಿಂದ ಕೂಡಿರುತ್ತದೆ. ಬಾಲ್ಯವು ಅತ್ಯಂತ ಸುಂದರವಾಗಿರುತ್ತದೆ. ಒತ್ತಡಗಳು, ಸವಾಲುಗಳು ಮತ್ತು ಸಂಕಷ್ಟಗಳನ್ನು ಅರ್ಥ ಮಾಡಿಕೊಳ್ಳದೇ ದಿನಗಳನ್ನು ಕಳೆಯುವ ದಿನಗಳಾಗಿರುತ್ತವೆ. ಆದರೆ, ಬಾಲ್ಯವು ಸಮೃದ್ಧವಾಗಿ ಇದ್ದಲ್ಲಿ ಭವಿಷ್ಯವೂ ಉತ್ತಮವಾಗಿರುತ್ತದೆ ಎಂದರು.
ಮಕ್ಕಳ ಹಕ್ಕುಗಳನ್ನು ರಕ್ಷಿಸಿ ಮಕ್ಕಳಿಗೆ ಸುರಕ್ಷಿತ ಬಾಲ್ಯವನ್ನು ನೀಡುವುದು ಪ್ರಸ್ತುತ ಸವಾಲಾಗಿದೆ. ಪ್ರತಿಯೊಬ್ಬ ಮಗುವೂ ದೇಶದ ಪ್ರಗತಿಗೆ ಶ್ರಮಿಸಲು ಉತ್ತಮವಾಗಿ ಓದಿ ಒಳ್ಳೆಯ ನಾಗರೀಕರಾಗಿ ಜೀವನ ನಡೆಸಬೇಕು. ಕಾರಣ ಗುರುಗಳ ಹಾಗೂ ಪೋಷಕರ ಮಾತುಗಳನ್ನು ಗೌರವಿಸಿ, ಪಾಲಿಸಬೇಕು ಎಂದರು.
ಮಾಜಿ ಶಾಸಕರಾದ ಜಿ. ಸೋಮಶೇಖರರೆಡ್ಡಿ ಅವರು, ಮಕ್ಕಳಿಗೆ ತಂದೆ - ತಾಯಿ ಮೊದಲ ಗುರು. ಮನೆಯೇ ಮೊದಲ ಪಾಠಶಾಲೆ. ಮಕ್ಕಳು ತಂದೆ - ತಾಯಿ, ಮನೆ ಹಾಗೂ ಗುರು ಹಿರಿಯರನ್ನು ಗೌರವಿಸುವ ಮೂಲಕ ಉತ್ತಮವಾದ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು.
ಬಳ್ಳಾರಿ ಮಹಾನಗರ ಪಾಲಿಕೆಯ ಪಾಲಿಕೆ ಸದಸ್ಯರಾದ ಕೆ.ಎಸ್. ಅಶೋಕ್ ಕುಮಾರ್, ಪಾಲಿಕಯ ವಿರೋಧ ಪಕ್ಷದ ನಾಯಕರಾಗಿರುವ ಶ್ರೀನಿವಾಸ್ ಮೋತ್ಕರ್ ಸೇರಿ ಅನೇಕರು ಈ ಸಂದರ್ಭದಲ್ಲಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್