
ವಿಜಯಪುರ, 14 ನವೆಂಬರ್ (ಹಿ.ಸ.)
ಇಂದಿನ ಮಕ್ಕಳೇ ನಾಳಿನ ಭವ್ಯ ಭಾರತದ ನಿರ್ಮಾತೃಗಳಾಗಿದ್ದು, ಅವರಲ್ಲಿ ವೈಜ್ಞಾನಿಕ ಜ್ಞಾನ, ತಾರ್ಕಿಕ ಚಿಂತನೆ ಹಾಗೂ ಸೃಜನಶೀಲತೆಯನ್ನು ಬೆಳೆಸುವುದು ಅಗತ್ಯವಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹೇಳಿದರು.
ಬಬಲೇಶ್ವರದಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳನ್ನು ಅಪಾರವಾಗಿ ಪ್ರೀತಿಸುತ್ತಿದ್ದ ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನದ ಸ್ಮರಣಾರ್ಥ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಮಕ್ಕಳಲ್ಲಿ ನವ ಭಾರತದ ಉಜ್ವಲ ಭವಿಷ್ಯವನ್ನು ಕಂಡಿದ್ದ ನೆಹರು ಅವರ ಆಶಯಗಳನ್ನು ಸಾಕಾರಗೊಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಮಕ್ಕಳಿಗೆ ಪಠ್ಯಪುಸ್ತಕದ ಅಕ್ಷರ ಜ್ಞಾನ ನೀಡುವುದಕ್ಕೆ ಮಾತ್ರ ಸೀಮಿತವಾಗದೆ, ಅವರಲ್ಲಿ ವೈಜ್ಞಾನಿಕ ಮನೋಭಾವ, ತಾರ್ಕಿಕ ಚಿಂತನೆ ಮತ್ತು ಸೃಜನಶೀಲತೆಯನ್ನು ಬೆಳೆಸಬೇಕು. ಮಕ್ಕಳ ಕುತೂಹಲ ಹಾಗೂ ಆಸಕ್ತಿಯನ್ನು ಪ್ರೋತ್ಸಾಹಿಸಿದಾಗ ಅವರು ಭವಿಷ್ಯದಲ್ಲಿ ಶ್ರೇಷ್ಠ ವಿಜ್ಞಾನಿಗಳು, ಸಂಶೋಧಕರು ಮತ್ತು ಯಶಸ್ವಿ ನವೋದ್ಯಮಿಗಳಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪೋಷಕರು ಹಾಗೂ ಶಿಕ್ಷಕರು ಮಕ್ಕಳಿಗೆ ಸೂಕ್ತ ಪ್ರೋತ್ಸಾಹ ನೀಡಬೇಕು ಎಂದು ಕರೆ ನೀಡಿದರು.
ಮಕ್ಕಳಲ್ಲಿ ವೈಚಾರಿಕ ಪ್ರಜ್ಞೆ ಬೆಳೆಸುವ ಅಗತ್ಯವನ್ನು ಒತ್ತಿಹೇಳಿದ ಸಚಿವರು, ಮೌಢ್ಯದಿಂದ ಮುಕ್ತವಾದ ಮನಸ್ಸು, ವಿಜ್ಞಾನದಿಂದ ಸಮೃದ್ಧವಾದ ಚಿಂತನೆ ಹಾಗೂ ಜ್ಞಾನದಿಂದ ಬಲಿಷ್ಠವಾದ ಯುವಶಕ್ತಿ ಅಭಿವೃದ್ಧಿಶೀಲ ಭಾರತದ ಭದ್ರ ಅಡಿಪಾಯಗಳಾಗಿವೆ. ಪಂಡಿತ್ ಜವಾಹರಲಾಲ್ ನೆಹರು ಅವರು ಕಂಡಿದ್ದ ಆಧುನಿಕ ಮತ್ತು ವೈಜ್ಞಾನಿಕ ಭಾರತದ ಕನಸನ್ನು ನನಸು ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.
ನಾಡಿನ ಪ್ರತಿಯೊಂದು ಮಗುವಿಗೂ ಉತ್ತಮ ಶಿಕ್ಷಣ, ಆರೋಗ್ಯ ಮತ್ತು ಸುರಕ್ಷಿತ ವಾತಾವರಣ ದೊರೆಯಲಿ ಎಂದು ಆಶಿಸಿದ ಸಚಿವರು, ಸಮಸ್ತ ಮಕ್ಕಳಿಗೆ ಮಕ್ಕಳ ದಿನಾಚರಣೆಯ ಶುಭಾಶಯಗಳನ್ನು ಕೋರಿದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande