
ಬೆಂಗಳೂರು, 13 ನವೆಂಬರ್ (ಹಿ.ಸ.):
ಮಗಳ ಮದುವೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದವು. ಮನೆಯಲ್ಲಿ ಮದುವೆಯ ಸಂಭ್ರಮ ಮನೆಮಾಡಿತ್ತು. ಸಂಬಂಧಿಕರು ಹಾಗೂ ಸ್ನೇಹಿತರಿಗೆ ಲಗ್ನಪತ್ರಿಕೆ ಹಂಚಲು ತೆರಳಿದ್ದ ದಂಪತಿ ಭೀಕರ ರಸ್ತೆ ಅಪಘಾತಕ್ಕೆ ಒಳಗಾಗಿದ್ದಾರೆ.
ಪತ್ನಿ ಸ್ಥಳದಲ್ಲೇ ಮೃತಪಟ್ಟಿದ್ದರೆ, ಪತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಮೈಲನಹಳ್ಳಿಯಲ್ಲಿ ನಡೆದಿದೆ.
42 ವರ್ಷದ ಲಕ್ಷ್ಮೀ ದೇವಿ ಅಲಿಯಾಸ್ ದೇವಮ್ಮ ಮೃತಪಟ್ಟ ಮಹಿಳೆ. ಅವರ ಪತಿ 48 ವರ್ಷದ ವಿಜಯ್ ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದು, ಅಪಘಾತದಲ್ಲಿ ಅವರ ಕಾಲು ತುಂಡಾಗಿದೆ. ದಂಪತಿ ದೊಡ್ಡಬಳ್ಳಾಪುರ ತಾಲೂಕಿನ ಚಿಕ್ಕಮದುರೆ ಹೋಬಳಿಯ ಉದ್ದಿಚಿಕ್ಕನಹಳ್ಳಿ ಗ್ರಾಮದ ನಿವಾಸಿಗಳಾಗಿದ್ದಾರೆ.
ದಂಪತಿಯ ಪುತ್ರಿ ಇಂದ್ರಾಣಿ ಅವರ ವಿವಾಹ ನವೆಂಬರ್ 26 ಮತ್ತು 27ರಂದು ನಿಶ್ಚಯವಾಗಿತ್ತು. ಹೀಗಾಗಿ ಕಳೆದ ಒಂದು ವಾರದಿಂದ ದಂಪತಿ ಸಂಬಂಧಿಕರು ಹಾಗೂ ಸ್ನೇಹಿತರಿಗೆ ಮದುವೆಯ ಲಗ್ನಪತ್ರಿಕೆ ಹಂಚುತ್ತಿದ್ದರು.
ಇಂದು ಕೂಡ ನೆಲಮಂಗಲದಲ್ಲಿರುವ ಸಂಬಂಧಿಕರಿಗೆ ಮದುವೆ ಪತ್ರಿಕೆ ನೀಡಲು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆ ಮೈಲನಹಳ್ಳಿ ಬಳಿ ಹಿಂಬದಿಯಿಂದ ಬಂದ ಸಿಮೆಂಟ್ ಲಾರಿ ದಂಪತಿ ಪ್ರಯಾಣಿಸುತ್ತಿದ್ದ ದ್ವಿಚಕ್ರ ವಾಹನದ ಮೇಲೆ ಹರಿದಿದೆ.
ಲಾರಿ ಚಕ್ರಕ್ಕೆ ಸಿಲುಕಿ ತಾಯಿ ಸ್ಥಳದಲ್ಲೇ ಸಾವುಅಪಘಾತದ ರಭಸಕ್ಕೆ ದೇವಮ್ಮ ಲಾರಿಯ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪತಿ ವಿಜಯ್ ಕುಮಾರ್ ಅವರ ಕಾಲುಗಳ ಮೇಲೂ ಲಾರಿ ಹರಿದ ಪರಿಣಾಮ ಕಾಲು ತುಂಡಾಗಿ ಗಂಭೀರ ಗಾಯಗಳಾಗಿವೆ.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವಿಜಯ್ ಕುಮಾರ್, ಮಗಳ ಮದುವೆಯನ್ನು ನೆರವೇರಿಸಲು ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಮದುವೆಯ ಸಿದ್ಧತೆಗಳ ನಡುವೆ ದಂಪತಿ ಕಳೆದ ಒಂದು ವಾರದಿಂದ ಲಗ್ನಪತ್ರಿಕೆ ಹಂಚುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಮಗಳ ಮದುವೆಗೆ ಕೆಲವೇ ದಿನಗಳು ಬಾಕಿ ಇರುವಾಗ ಸಂಭವಿಸಿದ ಭೀಕರ ಅಪಘಾತ ಇಡೀ ಕುಟುಂಬವನ್ನು ದುಃಖಕ್ಕೆ ದೂಡಿದೆ.
ಅಪಘಾತದಲ್ಲಿ ಮೃತಪಟ್ಟ ದೇವಮ್ಮ ಅವರ ಮೃತದೇಹವನ್ನು ನೆಲಮಂಗಲದ ಶವಾಗಾರಕ್ಕೆ ರವಾನಿಸಲಾಗಿದೆ. ಘಟನೆ ಸಂಬಂಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R