ಹಾಸನಾಂಬ ದರ್ಶನೋತ್ಸವಕ್ಕೆ ದಾಖಲೆ: 30 ಲಕ್ಷಕ್ಕೂ ಅಧಿಕ ಭಕ್ತರಿಂದ ದರ್ಶನ; ₹29.55 ಕೋಟಿ ಆದಾಯ ಸಂಗ್ರಹ
ಹಾಸನಾಂಬ ದೇವಿ ದರ್ಶನೋತ್ಸವ ಈ ಬಾರಿ ದಾಖಲೆ ನಿರ್ಮಿಸಿದ್ದು, 14 ದಿನಗಳಲ್ಲಿ 30.06 ಲಕ್ಷಕ್ಕೂ ಅಧಿಕ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ. ವಿಶೇಷ ದರ್ಶನ ಟಿಕೆಟ್, ಲಾಡು ಮಾರಾಟ ಹಾಗೂ ಹುಂಡಿ ಕಾಣಿಕೆ ಸೇರಿದಂತೆ ಒಟ್ಟು 29.55 ಕೋಟಿ ರೂ. ಆದಾಯ ಸಂಗ್ರಹವಾಗಿದೆ. ಕಳೆದ ವರ್ಷಕ್ಕಿಂತ ಸುಮಾರು 4 ಕೋಟಿ ರೂ. ಹೆ
hasanamba-darshanotsava-30-lakh-devotees-rs-29-55-crore-revenue


ಹಾಸನ, 13 ನವೆಂಬರ್ (ಹಿ.ಸ.):

ಪ್ರಸಿದ್ಧ ಹಾಸನಾಂಬ ದೇವಿ ದರ್ಶನೋತ್ಸವ ಈ ಬಾರಿ ಹೊಸ ದಾಖಲೆ ನಿರ್ಮಿಸಿದೆ. 14 ದಿನಗಳ ಕಾಲ ನಡೆದ ದರ್ಶನೋತ್ಸವದಲ್ಲಿ ಒಟ್ಟು 30,06,000 ಭಕ್ತರು ದೇವಿಯ ದರ್ಶನ ಪಡೆದಿದ್ದು, ವಿವಿಧ ಮೂಲಗಳಿಂದ ಒಟ್ಟು 29,55,27,852 ರೂ. ಆದಾಯ ಸಂಗ್ರಹವಾಗಿದೆ ಎಂದು ಹಾಸನಾಂಬ ದೇವಾಲಯದ ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಜಗದೀಶ್ ಗಂಗಣ್ಣನವರ್ ತಿಳಿಸಿದ್ದಾರೆ.

ಕಳೆದ ವರ್ಷ 13 ದಿನಗಳ ದರ್ಶನೋತ್ಸವದಲ್ಲಿ ಸುಮಾರು 25 ಲಕ್ಷ ಭಕ್ತರು ದೇವಿಯ ದರ್ಶನ ಪಡೆದಿದ್ದರು. ವಿಶೇಷ ದರ್ಶನ ಟಿಕೆಟ್, ಲಾಡು ಪ್ರಸಾದ ಮಾರಾಟ ಹಾಗೂ ಹುಂಡಿ ಕಾಣಿಕೆ ಸೇರಿದಂತೆ ಒಟ್ಟು 25.59 ಕೋಟಿ ರೂ. ಆದಾಯ ಸಂಗ್ರಹವಾಗಿತ್ತು. ಆದರೆ, ಈ ಬಾರಿ ಭಕ್ತರ ಸಂಖ್ಯೆ ಹಾಗೂ ಆದಾಯ ಎರಡರಲ್ಲೂ ಏರಿಕೆ ಕಂಡುಬಂದಿದೆ.

ಅಕ್ಟೋಬರ್ 29ರಂದು ಹಾಸನಾಂಬ ದೇವಾಲಯದ ಗರ್ಭಗುಡಿಯ ಬಾಗಿಲು ತೆರೆಯಲಾಗಿತ್ತು. ಅಂದು ಸಾರ್ವಜನಿಕರಿಗೆ ಅಧಿಕೃತ ದರ್ಶನಕ್ಕೆ ಅವಕಾಶವಿರದಿದ್ದರೂ, ದೇವಾಲಯದ ಆವರಣದಲ್ಲಿ ನೆರೆದಿದ್ದ 5,600 ಮಂದಿಗೆ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಅಕ್ಟೋಬರ್ 30ರಿಂದ ನವೆಂಬರ್ 10ರವರೆಗೆ 12 ದಿನಗಳ ಕಾಲ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಈ ಅವಧಿಯಲ್ಲಿ ದೇಶದ ವಿವಿಧ ಭಾಗಗಳು, ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಹೊರರಾಜ್ಯಗಳಿಂದ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಹಾಸನಾಂಬ ದೇವಿ ಹಾಗೂ ಶ್ರೀ ಸಿದ್ದೇಶ್ವರಸ್ವಾಮಿ ದೇವಾಲಯಗಳ ಹುಂಡಿ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, 1,000 ರೂ. ವಿಶೇಷ ದರ್ಶನ ಟಿಕೆಟ್ ಮಾರಾಟದಿಂದ 16,98,11,257 ರೂ., 300 ರೂ. ಟಿಕೆಟ್ ಮಾರಾಟದಿಂದ 7,24,14,000 ರೂ., ಲಾಡು ಪ್ರಸಾದ ಮಾರಾಟದಿಂದ 1,35,99,156 ರೂ. ಸಂಗ್ರಹವಾಗಿದೆ.

ಇದರೊಂದಿಗೆ ದೇಣಿಗೆಯಾಗಿ 5,91,228 ರೂ., ಇ-ಹುಂಡಿಯಿಂದ 13,13,264 ರೂ. ಹಾಗೂ ಜಾಹೀರಾತುಗಳಿಂದ 5,74,000 ರೂ. ಆದಾಯ ಬಂದಿದೆ. ಈ ಮೂಲಗಳಿಂದ ಒಟ್ಟು 25,82,88,199 ರೂ. ಸಂಗ್ರಹವಾಗಿದೆ ಎಂದು ತಿಳಿಸಿದರು.

ಇನ್ನು ಭಕ್ತರು ಹುಂಡಿಯಲ್ಲಿ 3,71,63,933 ರೂ. ನಗದು ಕಾಣಿಕೆ ಸಲ್ಲಿಸಿದ್ದಾರೆ. ಇದರಿಂದ ದರ್ಶನೋತ್ಸವದ ಒಟ್ಟು ಆದಾಯ 29,55,27,852 ರೂ.ಗೆ ತಲುಪಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಸುಮಾರು 4 ಕೋಟಿ ರೂ. ಹೆಚ್ಚುವರಿ ಆದಾಯ ಸಂಗ್ರಹವಾಗಿದೆ.

ನಗದು ಕಾಣಿಕೆಗಳ ಜತೆಗೆ ಭಕ್ತರು 43.170 ಗ್ರಾಂ ಚಿನ್ನ ಹಾಗೂ 1.255 ಕೆ.ಜಿ. ಬೆಳ್ಳಿಯನ್ನು ದೇವಿಗೆ ಕಾಣಿಕೆಯಾಗಿ ಅರ್ಪಿಸಿದ್ದಾರೆ ಎಂದು ಜಗದೀಶ್ ಗಂಗಣ್ಣನವರ್ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande