
ಶಿವಮೊಗ್ಗ, 13 ನವೆಂಬರ್ (ಹಿ.ಸ.):
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯುವಶಕ್ತಿಯೇ ದೇಶವನ್ನು ಮುನ್ನಡೆಸುವ ಪ್ರಮುಖ ಶಕ್ತಿಯಾಗಿದೆ. ಸಂಸತ್ತಿನ ಕಾರ್ಯವೈಖರಿ, ಶಾಸನ ರಚನೆ ಮತ್ತು ಜನಪ್ರತಿನಿಧಿಗಳ ಜವಾಬ್ದಾರಿಗಳ ಬಗ್ಗೆ ಯುವಜನರು ತಿಳಿದುಕೊಳ್ಳುವುದು ಅಗತ್ಯ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ತಿಳಿಸಿದರು.
ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಯುವ ಸಂಸತ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯುವ ಸಂಸತ್ ಕೇವಲ ಸ್ಪರ್ಧೆಯಲ್ಲ. ಸಂಸದೀಯ ವ್ಯವಸ್ಥೆ, ಸಂವಿಧಾನದ ಮೌಲ್ಯಗಳು, ಕಾನೂನು ರಚನೆ ಮತ್ತು ಸಾರ್ವಜನಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಕ್ರಿಯೆ ಅರಿಯಲು ಇದು ಉತ್ತಮ ವೇದಿಕೆಯಾಗಿದೆ. ಸದನದಲ್ಲಿ ಮಂಡಿಸುವ ವಿಷಯಗಳ ಕುರಿತು ಜನಪ್ರತಿನಿಧಿಗಳು ಆಳವಾದ ಅಧ್ಯಯನ ಮತ್ತು ಸಿದ್ಧತೆ ನಡೆಸುತ್ತಾರೆ ಎಂದರು.
ಅಣಕು ಸಂಸತ್ ಅಧಿವೇಶನದಲ್ಲಿ ಕಬ್ಬು ಬೆಳೆಗಾರರ ಬೆಲೆ ಸಮಸ್ಯೆ, ಪೋಕ್ಸೋ ಪ್ರಕರಣಗಳು, ಬುಡಕಟ್ಟು ಸಮುದಾಯಗಳ ಅರಣ್ಯ ಹಕ್ಕು, ರಸ್ತೆ ಗುಂಡಿಗಳು, ಶಿವಮೊಗ್ಗ ಸಂಚಾರ ದಟ್ಟಣೆ, ಮಾದಕ ವಸ್ತು ಬಳಕೆ, ಅಡಿಕೆ ಎಲೆಚುಕ್ಕಿ ರೋಗ, ಬೆಳೆ ವಿಮೆ ಹಾಗೂ ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ರದ್ದತಿ ಸೇರಿದಂತೆ ಹಲವು ವಿಷಯಗಳ ಕುರಿತು ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರು ಚರ್ಚೆ ನಡೆಸಿದರು.
ಕನ್ನಡಿಗರಿಗೆ ಉದ್ಯೋಗ ಮೀಸಲಾತಿ, ರೈತರ ಆತ್ಮಹತ್ಯೆ, ಮಹಿಳಾ ಮತ್ತು ಮಕ್ಕಳ ಸುರಕ್ಷತೆ, ಸಾರಿಗೆ ಸೌಲಭ್ಯ ಹಾಗೂ ಪದವೀಧರರ ಉದ್ಯೋಗಾವಕಾಶಗಳ ಬಗ್ಗೆಯೂ ಚರ್ಚೆ ನಡೆಯಿತು.
ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಪಕ್ಷಕ್ಕಿಂತ ದೇಶ ಮತ್ತು ಜನರ ಹಿತಾಸಕ್ತಿ ಮುಖ್ಯ. ಆಡಳಿತ ಮತ್ತು ವಿರೋಧ ಪಕ್ಷಗಳು ರೈತರು, ಕಾರ್ಮಿಕರು ಹಾಗೂ ಬಡವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಒಟ್ಟಾಗಿ ಪ್ರಯತ್ನಿಸಬೇಕು ಎಂದರು.
ಯುವ ಸಂಸತ್ನಲ್ಲಿ ಮುಖ್ಯಮಂತ್ರಿ ಪಾತ್ರವನ್ನು ಅಂಶಕ್, ವಿರೋಧ ಪಕ್ಷದ ನಾಯಕನಾಗಿ ಹಾಲಸ್ವಾಮಿ ಹಾಗೂ ಸಭಾಪತಿಯಾಗಿ ದೀಕ್ಷಿತಾ ಸಿ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಡಿಡಿಪಿಐ ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಲ್ಲೇಶಪ್ಪ ಸೇರಿದಂತೆ ಅಧಿಕಾರಿಗಳು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.