
ಗದಗ, 13 ನವೆಂಬರ್ (ಹಿ.ಸ.)
ಸಾಮಾನ್ಯವಾಗಿ ಹುಟ್ಟುಹಬ್ಬವೆಂದರೆ ಕೇಕ್ ಕತ್ತರಿಸಿ, ಸಂಭ್ರಮದಿಂದ ಆಚರಿಸುವುದು ಸಹಜ. ಆದರೆ ಬೆಟಗೇರಿ ಎಸ್.ಎಸ್.ಕೆ. ಸಮಾಜದ ತರುಣ ಸಂಘದ ಸದಸ್ಯ ವಿಷ್ಣು ಅರವಟಗಿ ಅವರು ತಮ್ಮ 58ನೇ ವರ್ಷದ ಜನ್ಮದಿನವನ್ನು ಆರು ಮಂದಿ ಬಡವರ ಬಾಳಿನಲ್ಲಿ ದೃಷ್ಟಿಯ ಬೆಳಕು ಮೂಡಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದಾರೆ.
ಗದಗದ ಚಾಪೇಕರ ಆಸ್ಪತ್ರೆಯಲ್ಲಿ ಆರು ಮಂದಿಗೆ ಉಚಿತ ನೇತ್ರ ಶಸ್ತ್ರಚಿಕಿತ್ಸೆ ಮಾಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಕಳೆದ ಸುಮಾರು 18 ವರ್ಷಗಳಿಂದ ನಿರಂತರವಾಗಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಅವರು, ಇದುವರೆಗೆ ಒಟ್ಟು 114 ಜನರಿಗೆ ಉಚಿತ ನೇತ್ರ ಶಸ್ತ್ರಚಿಕಿತ್ಸೆಯ ನೆರವು ನೀಡಿದ್ದಾರೆ.
ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದರೂ ಆರ್ಥಿಕ ಸಂಕಷ್ಟದಿಂದ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಸಾಧ್ಯವಾಗದ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ನೆರವಾಗಬೇಕೆಂಬ ಮಾನವೀಯ ಕಾಳಜಿ ಅವರ ಸೇವೆಯ ಹಿಂದಿನ ಉದ್ದೇಶವಾಗಿದೆ. ಪ್ರತಿವರ್ಷ ತಮ್ಮ ಜನ್ಮದಿನದ ಸಂಭ್ರಮವನ್ನು ವೈಯಕ್ತಿಕ ಆಚರಣೆಗೆ ಸೀಮಿತಗೊಳಿಸದೆ, ಬೇರೆಯವರ ಬದುಕಿನಲ್ಲಿ ಬೆಳಕು ಮೂಡಿಸುವ ಸಮಾಜಮುಖಿ ಕಾರ್ಯಕ್ಕೆ ಮೀಸಲಿಡುತ್ತಿರುವುದು ವಿಶೇಷವಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಬೆಟಗೇರಿ ಎಸ್.ಎಸ್.ಕೆ. ದಸರಾ ಉತ್ಸವ ಸಮಿತಿಯ ಅಧ್ಯಕ್ಷ ಸುರೇಶ ಮೇರವಾಡೆ, ಬಡವರ ಕಣ್ಣಿಗೆ ಬೆಳಕು ನೀಡುತ್ತಿರುವ ವಿಷ್ಣು ಅರವಟಗಿ ಅವರ ಸೇವೆ ನಿಜಕ್ಕೂ ಶ್ಲಾಘನೀಯ. ಇಂತಹ ಸಮಾಜಮುಖಿ ಕಾರ್ಯಗಳು ಇತರರಿಗೂ ಪ್ರೇರಣೆಯಾಗಿದ್ದು, ಅವರ ಸೇವೆ ನಿರಂತರವಾಗಿ ಮುಂದುವರಿಯಲಿ ಎಂದು ಹಾರೈಸಿದರು.
ಎಸ್.ಎಸ್.ಕೆ. ತರುಣ ಸಂಘದ ಸದಸ್ಯ ಗಣೇಶ ಪವಾರ ಮಾತನಾಡಿ, ಧರ್ಮ ಹಾಗೂ ಆರ್ಥಿಕ ಪರಿಸ್ಥಿತಿಯನ್ನು ಲೆಕ್ಕಿಸದೆ ಅಗತ್ಯವಿರುವವರಿಗೆ ನೆರವಾಗುವ ವಿಶಾಲ ಮನೋಭಾವ ವಿಷ್ಣು ಅರವಟಗಿ ಅವರದ್ದಾಗಿದೆ. ಈ ಸಮಾಜಸೇವಾ ಕಾರ್ಯಕ್ಕೆ ಅವರ ಪತ್ನಿ ರೇಖಾ ಅರವಟಗಿ, ಮಕ್ಕಳು ಹಾಗೂ ಕುಟುಂಬದ ಸದಸ್ಯರು ಕೂಡ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಬೆಟಗೇರಿ ಶ್ರೀ ಕಾಳಿಕಾ ದೇವಸ್ಥಾನದ ಅಧ್ಯಕ್ಷ ಶ್ರೀಧರ್ ಕೊಣ್ಣೂರ ಮಾತನಾಡಿ, ಕಳೆದ 18 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಈ ಸೇವೆ ಸಮಾಜಕ್ಕೆ ಮಾದರಿಯಾಗಿದೆ. ತಮ್ಮ ಹುಟ್ಟುಹಬ್ಬದ ನೆನಪಿನಲ್ಲಿ ನೂರಾರು ಜನರ ಬದುಕಿಗೆ ದೃಷ್ಟಿಯ ಬೆಳಕು ನೀಡುತ್ತಿರುವುದು ಅತ್ಯಂತ ಸಾರ್ಥಕ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹೀರಾಲಾಲಸಾ ಬಾಕಳೆ, ಭೀಮಸೇನಸಾ ರಾಯಬಾಗಿ, ಮಾಧುಸಾ ಮೇರವಾಡೆ, ನರಸಿಂಗಸಾ ಮೇರವಾಡೆ, ರಾಜು ಬಸವಾ, ಎಂ.ಯು. ರಾಯಬಾಗಿ, ಮೋಹನಸಾ ಮೇಘರಾಜ, ಸುಬ್ಬಣಸಾ ಮಗಜಿ, ದಿಲೀಪ ಮೇಘರಾಜ, ಪವನ ಅರವಟಗಿ, ಚಿದಾನಂದ ಅಣ್ಣಿಗೇರಿ ಹಾಗೂ ರಮೇಶ ಕಬುರ್ಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಹುಟ್ಟುಹಬ್ಬದ ಕೇಕ್ನ ಸಿಹಿಗಿಂತ ಮತ್ತೊಬ್ಬರ ಕಣ್ಣಲ್ಲಿ ದೃಷ್ಟಿಯ ಬೆಳಕು ಮೂಡಿಸುವ ಸಂತೋಷವೇ ದೊಡ್ಡದು ಎಂಬುದನ್ನು ತಮ್ಮ ಸೇವೆಯ ಮೂಲಕ ತೋರಿಸಿಕೊಟ್ಟಿರುವ ವಿಷ್ಣು ಅರವಟಗಿ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ. ಸಮಾಜದಲ್ಲಿ ಇಂತಹ ಮಾನವೀಯ ಕಾರ್ಯಗಳು ಹೆಚ್ಚಾಗಲಿ ಎಂಬುದೇ ಎಲ್ಲರ ಆಶಯವಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP