
ಬಳ್ಳಾರಿ, 13 ನವೆಂಬರ್ (ಹಿ.ಸ.)
ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆಯನ್ನು ಮುಂದೂಡಿದ್ದಕ್ಕೆ ಆಕ್ರೋಶಗೊಂಡ ಕಕ್ಷಿದಾರನೊಬ್ಬ ವಕೀಲರ ಮೇಲೆ ಹಲ್ಲೆಗೆ ಯತ್ನಿಸಿ, ರಿವಾಲ್ವರ್‌ನಿಂದ ಗುಂಡು ಹಾರಿಸುವುದಾಗಿ ಕೊಲೆ ಬೆದರಿಕೆ ಹಾಕಿರುವ ಘಟನೆ ಬಳ್ಳಾರಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನಡೆದಿದೆ. ಘಟನೆ ಖಂಡಿಸಿ ಜಿಲ್ಲಾ ವಕೀಲರ ಸಂಘದ ಸದಸ್ಯರು ಶುಕ್ರವಾರ ಪ್ರತಿಭಟನೆ ನಡೆಸಿ, ಆರೋಪಿಯ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.
ಹಲ್ಲೆ ಹಾಗೂ ಜೀವ ಬೆದರಿಕೆಗೆ ಒಳಗಾದವರು ವಕೀಲ ನಾಗೇಂದ್ರ ಪ್ರಸಾದ್. ಲಕ್ಷ್ಮರೆಡ್ಡಿ ಎಂಬಾತ ಆರೋಪಿತ ಕಕ್ಷಿದಾರನಾಗಿದ್ದಾನೆ.
ಬಳ್ಳಾರಿಯ ಎರಡನೇ ಹೆಚ್ಚುವರಿ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಲಕ್ಷ್ಮರೆಡ್ಡಿ ಪರವಾಗಿ ಹಿರಿಯ ನ್ಯಾಯವಾದಿ ಅಯ್ಯಪ್ಪ ಅವರು ವಕಾಲತ್ತು ವಹಿಸಿದ್ದರು. ಗುರುವಾರ (ನ.12) ನಡೆದ ವಿಚಾರಣೆಗೆ ಅಯ್ಯಪ್ಪ ಅವರ ತಂಡದ ಸದಸ್ಯ ವಕೀಲ ನಾಗೇಂದ್ರ ಪ್ರಸಾದ್ ಹಾಜರಾಗಿದ್ದರು. ಈ ವೇಳೆ ನ್ಯಾಯಾಧೀಶರು ಪ್ರಕರಣದ ಮುಂದಿನ ವಿಚಾರಣೆಯನ್ನು ಡಿಸೆಂಬರ್ 15ಕ್ಕೆ ಮುಂದೂಡಿದ್ದರು.
ವಿಚಾರಣೆ ಮುಂದೂಡಿದ ಬಳಿಕ ನ್ಯಾಯಾಲಯದ ಸಭಾಂಗಣದಿಂದ ಹೊರಬರುತ್ತಿದ್ದ ನಾಗೇಂದ್ರ ಪ್ರಸಾದ್ ಅವರನ್ನು ತಡೆದ ಲಕ್ಷ್ಮರೆಡ್ಡಿ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಆರೋಪಿಸಿ ವಾಗ್ವಾದ ನಡೆಸಿದ್ದಾನೆ. ಬಳಿಕ ಅವರ ಬಟ್ಟೆ ಹರಿಯಲು ಯತ್ನಿಸಿ, ರಿವಾಲ್ವರ್‌ನಿಂದ ಗುಂಡು ಹಾರಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಅಲ್ಲದೆ, ಕುತ್ತಿಗೆ ಹಿಡಿಯಲು ಪ್ರಯತ್ನಿಸಿ, ಶರ್ಟ್‌ನ ಕಾಲರ್ ಹಾಗೂ ವಕೀಲರ ಉಡುಪಿನ ಬ್ಯಾಂಡ್ ಹಿಡಿದು ಎಳೆದು ತಳ್ಳಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ವಕೀಲರಾದ ಶ್ರೀನಿಧಿ ಮತ್ತು ಚಂದ್ರಶೇಖರರೆಡ್ಡಿ ಮಧ್ಯಪ್ರವೇಶಿಸಿ ನಾಗೇಂದ್ರ ಪ್ರಸಾದ್ ಅವರನ್ನು ರಕ್ಷಿಸಿದ್ದಾರೆ. ಪ್ರಕರಣದ ವಿಚಾರಣೆಯನ್ನು ಮುಂದೂಡುವ ನಿರ್ಧಾರ ನ್ಯಾಯಾಧೀಶರಿಗೆ ಸೇರಿದ್ದು, ಇದರಲ್ಲಿ ವಕೀಲರ ಪಾತ್ರವಿಲ್ಲ ಎಂದು ನಾಗೇಂದ್ರ ಪ್ರಸಾದ್ ಪೊಲೀಸರಿಗೆ ತಿಳಿಸಿದ್ದಾರೆ.
ಇದೇ ವೇಳೆ ಬಾರ್ ಅಸೋಸಿಯೇಷನ್‌ಗೆ ತೆರಳುತ್ತಿದ್ದ ವಕೀಲ ಶ್ರೀನಿಧಿ ಅವರಿಗೂ ಲಕ್ಷ್ಮರೆಡ್ಡಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ನ್ಯಾಯಾಲಯದ ನೆಲಮಹಡಿಯ ಮುಖ್ಯ ದ್ವಾರದ ಮೆಟ್ಟಿಲು ಬಳಿ ಎದುರಾದ ಆತ, ತಾನು ತೆಲಂಗಾಣದ ನಕ್ಸಲೈಟ್ ಆಗಿದ್ದು, ತನ್ನ ಬಳಿ ಪರವಾನಗಿ ಪಡೆದ ರಿವಾಲ್ವರ್ ಇದೆ. ನಿನ್ನನ್ನು ಮುಗಿಸಿಬಿಡುತ್ತೇನೆ ಎಂದು ಜೀವ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆರೋಪಿತ ಲಕ್ಷ್ಮರೆಡ್ಡಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಕಲಂ 115(2), 126(2), 351(2) ಹಾಗೂ 352ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ವಕೀಲರು ಪೊಲೀಸರಿಗೆ ಮನವಿ ಮಾಡಿದ್ದಾರೆ.
ಆರೋಪಿಯ ಬಂಧನಕ್ಕೆ ಆಗ್ರಹ
ಬಳ್ಳಾರಿ ವಕೀಲರ ಸಂಘದ ಅಧ್ಯಕ್ಷ ರಾಮಬ್ರಹ್ಮ ಅವರು ಮಾತನಾಡಿ, ನ್ಯಾಯಾಲಯದ ಆವರಣದಲ್ಲಿಯೇ ವಕೀಲರ ಮೇಲೆ ಹಲ್ಲೆಗೆ ಯತ್ನಿಸಿ ಕೊಲೆ ಬೆದರಿಕೆ ಹಾಕಿರುವುದು ಗಂಭೀರ ಘಟನೆ. ಪೊಲೀಸರು ವಕೀಲರಿಗೆ ಸೂಕ್ತ ಭದ್ರತೆ ಒದಗಿಸಬೇಕು ಹಾಗೂ ಆರೋಪಿಯನ್ನು ತಕ್ಷಣ ಬಂಧಿಸಬೇಕು ಎಂದು ಆಗ್ರಹಿಸಿದರು.
ಬಳ್ಳಾರಿ ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಶುಕ್ರವಾರ ಬ್ರೂಸ್‌ಪೇಟೆ ಪೊಲೀಸ್ ಠಾಣೆಗೆ ತೆರಳಿ ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ, ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್