ಜಿಲ್ಲಾ ಮಟ್ಟದ ವಿಜ್ಞಾನ ಸಮಾವೇಶದಲ್ಲಿ, ವೈಜ್ಞಾನಿಕ ಪ್ರದರ್ಶನ
ಗದಗ, 13 ನವೆಂಬರ್ (ಹಿ.ಸ.) ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ, ಸೃಜನಶೀಲತೆ, ಸಂಶೋಧನಾ ಪ್ರವೃತ್ತಿ ಹಾಗೂ ನಾವೀನ್ಯತೆಯನ್ನು ಬೆಳೆಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ, ಜಿಲ್ಲಾ ಪಂಚಾಯತ್ ಗದಗ ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಇವುಗಳ ಸಂಯ
ಫೋಟೋ


ಗದಗ, 13 ನವೆಂಬರ್ (ಹಿ.ಸ.)

ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ, ಸೃಜನಶೀಲತೆ, ಸಂಶೋಧನಾ ಪ್ರವೃತ್ತಿ ಹಾಗೂ ನಾವೀನ್ಯತೆಯನ್ನು ಬೆಳೆಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ, ಜಿಲ್ಲಾ ಪಂಚಾಯತ್ ಗದಗ ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಇವುಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಯಟ್ನ ಹಿರಿಯ ಉಪನ್ಯಾಸಕ ಬಿ.ಎಫ್. ಅರವಟಗಿ ಅವರು, ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶವು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಸಂಶೋಧನಾ ಮನೋಭಾವ ಬೆಳೆಸುವ ಮಹತ್ವದ ವೇದಿಕೆಯಾಗಿದೆ. ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ, ಅವರಲ್ಲಿ ವೈಜ್ಞಾನಿಕ ಚಿಂತನೆ ಮತ್ತು ಹೊಸ ಆವಿಷ್ಕಾರಗಳ ಆಸಕ್ತಿಯನ್ನು ಬೆಳೆಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ ಎಂದು ಹೇಳಿದರು.

ವಿಜ್ಞಾನ ಶಿಕ್ಷಕ ಹಾಗೂ ಉಪನಿರ್ದೇಶಕರ ಕಚೇರಿಯ ತಾಂತ್ರಿಕ ಸಹಾಯಕ ಎಂ.ಎಚ್. ಸವದತ್ತಿ ಅವರು ಮಾತನಾಡಿ, 1993ರಲ್ಲಿ ಪ್ರಾರಂಭವಾದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶವು ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ ಆಶ್ರಯದಲ್ಲಿ ನಡೆಯುತ್ತಿದೆ. 10ರಿಂದ 17 ವರ್ಷದೊಳಗಿನ ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಸ್ಥಳೀಯ ಸಮಸ್ಯೆಗಳನ್ನು ವೈಜ್ಞಾನಿಕ ದೃಷ್ಟಿಕೋನದಿಂದ ಗುರುತಿಸುವುದು, ಪ್ರಯೋಗಗಳ ಮೂಲಕ ಕಲಿಕೆ, ವೈಜ್ಞಾನಿಕ ಮನೋಭಾವ ಹಾಗೂ ಸುಸ್ಥಿರ ಅಭಿವೃದ್ಧಿಯ ಅರಿವು ಮೂಡಿಸುವುದರ ಜೊತೆಗೆ ಎಲ್ಲ ಮಕ್ಕಳಿಗೂ ಸಮಾನ ಅವಕಾಶ ಕಲ್ಪಿಸುವುದು ಈ ಸಮಾವೇಶದ ವಿಶೇಷತೆಯಾಗಿದೆ ಎಂದು ವಿವರಿಸಿದರು.

ಡಯಟ್ ಉಪನ್ಯಾಸಕ ಜಿ.ಡಿ. ದಾಸರ ಅವರು ವಿವಿಧ ಸಸ್ಯಗಳ ಉಪಯೋಗಗಳು ಹಾಗೂ ಸಸ್ಯಗಳು ಹೊರಸೂಸುವ ಅನಿಲಗಳ ಕುರಿತು ವೈಜ್ಞಾನಿಕ ಮಾಹಿತಿಯನ್ನು ಹಂಚಿಕೊಂಡರು. ಮಕ್ಕಳಲ್ಲಿ ಕುತೂಹಲ, ಪ್ರಶ್ನಿಸುವ ಗುಣ, ಸೃಜನಶೀಲತೆ ಮತ್ತು ಸಂಶೋಧನಾ ಮನೋಭಾವ ಬೆಳೆಸಲು ಇಂತಹ ಸಮಾವೇಶಗಳು ಉತ್ತಮ ವೇದಿಕೆಯಾಗಿವೆ ಎಂದು ತಿಳಿಸಿದರು.

ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ತಮ್ಮ ವೈಜ್ಞಾನಿಕ ಯೋಜನೆಗಳನ್ನು ಮಂಡಿಸಿ, ಸಂಶೋಧನಾ ಚಿಂತನೆ ಹಾಗೂ ಸೃಜನಶೀಲತೆಯನ್ನು ಪ್ರದರ್ಶಿಸಿದರು. ನಿರ್ಣಾಯಕರಾಗಿ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದ ಮುಲ್ಕಿ ಗೌಡ್ರ ಹಾಗೂ ಮುರಾರ್ಜಿ ವಸತಿ ಪದವಿಪೂರ್ವ ಮಹಾವಿದ್ಯಾಲಯದ ಮುಬಶಿರಿನ್ ಡಂಬಳ ಭಾಗವಹಿಸಿ ವಿದ್ಯಾರ್ಥಿಗಳ ಯೋಜನೆಗಳನ್ನು ಮೌಲ್ಯಮಾಪನ ಮಾಡಿದರು.

ಗದಗದ ಸಿಡಿಒ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಕುಮಾರಿ ನಿಧಿ ಎ. ಹಾಗೂ ಹರ್ಷಿತ ವಿ. ಜಾನ್ಮನಿ ಪ್ರಥಮ ಸ್ಥಾನ ಪಡೆದುಕೊಂಡರು. ಗದಗ ಗ್ರಾಮೀಣ ಕಳಸಾಪುರದ ಬ್ರೈಟ್ ಹಾರಿಜನ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮಾಲತೇಶ್ ಬಸವರಾಜ ಮಲ್ಲೂರ ಹಾಗೂ ಮಹಾಂತಗೌಡ ಸಂಗನಗೌಡ ಪಾಟೀಲ ದ್ವಿತೀಯ ಸ್ಥಾನ ಗಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಗದಗದ ಮಂಜುನಾಥ ಹಾಗೂ ಬಸವರಾಜ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಮಾರ್ಗದರ್ಶಿ ಶಿಕ್ಷಕರು ಹಾಗೂ ಗಣ್ಯರು ಭಾಗವಹಿಸಿದ್ದರು.

ಆರಂಭದಲ್ಲಿ ಕಲಾವತಿ ಹೂಲಗೇರಿ ಪ್ರಾರ್ಥಿಸಿದರು. ಎಂ.ಎಚ್. ಸವದತ್ತಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ಕೊನೆಯಲ್ಲಿ ವಂದಿಸಿದರು.

ಒಟ್ಟಾರೆ, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ದೃಷ್ಟಿಕೋನ, ಅನ್ವೇಷಣಾ ಮನೋಭಾವ ಹಾಗೂ ಹೊಸ ಆವಿಷ್ಕಾರಗಳ ಆಸಕ್ತಿ ಬೆಳೆಸುವಲ್ಲಿ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ ಪರಿಣಾಮಕಾರಿ ವೇದಿಕೆಯಾಗಿ ಮೂಡಿಬಂದಿತು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande