ಮಧುಮೇಹದ ಆರಂಭಿಕ ಪತ್ತೆ ಮತ್ತು ನಿಯಂತ್ರಣಕ್ಕೆ ನಿಯಮಿತ ತಪಾಸಣೆ ಅಗತ್ಯ: ಡಾ. ಅಲಕನಂದ
ಬಳ್ಳಾರಿ, 13 ನವೆಂಬರ್ (ಹಿ.ಸ.) ಮಧುಮೇಹ ಕಾಯಿಲೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು, ಆರಂಭಿಕ ಪತ್ತೆ, ತಡೆಗಟ್ಟುವಿಕೆ, ಲಕ್ಷಣಗಳು ಹಾಗೂ ನಿಯಂತ್ರಣದ ಮಹತ್ವವನ್ನು ತಿಳಿಸುವುದು ವಿಶ್ವ ಮಧುಮೇಹ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡ
ನವೆಂಬರ್ 14: ವಿಶ್ವ ಮಧುಮೇಹ ದಿನ


ಬಳ್ಳಾರಿ, 13 ನವೆಂಬರ್ (ಹಿ.ಸ.)

ಮಧುಮೇಹ ಕಾಯಿಲೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು, ಆರಂಭಿಕ ಪತ್ತೆ, ತಡೆಗಟ್ಟುವಿಕೆ, ಲಕ್ಷಣಗಳು ಹಾಗೂ ನಿಯಂತ್ರಣದ ಮಹತ್ವವನ್ನು ತಿಳಿಸುವುದು ವಿಶ್ವ ಮಧುಮೇಹ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಲಕನಂದ ಡಿ. ಮಳಗಿ ತಿಳಿಸಿದ್ದಾರೆ.

ಪ್ರತಿವರ್ಷ ನವೆಂಬರ್ 14ರಂದು ವಿಶ್ವ ಮಧುಮೇಹ ದಿನವನ್ನು ಆಚರಿಸಲಾಗುತ್ತದೆ. 1991ರಲ್ಲಿ ಅಂತರರಾಷ್ಟ್ರೀಯ ಮಧುಮೇಹ ಒಕ್ಕೂಟ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಜಂಟಿಯಾಗಿ ಈ ದಿನಾಚರಣೆಯನ್ನು ಆರಂಭಿಸಿದವು. ಇನ್ಸುಲಿನ್ ಕಂಡುಹಿಡಿಯುವಲ್ಲಿ ಮಹತ್ವದ ಕೊಡುಗೆ ನೀಡಿದ ವಿಜ್ಞಾನಿ ಸರ್ ಫ್ರೆಡ್ರಿಕ್ ಬ್ಯಾಂಟಿಂಗ್ ಅವರ ಜನ್ಮದಿನದ ಅಂಗವಾಗಿ ನವೆಂಬರ್ 14 ಅನ್ನು ವಿಶ್ವ ಮಧುಮೇಹ ದಿನವನ್ನಾಗಿ ಆಯ್ಕೆ ಮಾಡಲಾಗಿದೆ.

ಮಧುಮೇಹ ಎಂದರೇನು

ದೇಹದಲ್ಲಿ ಇನ್ಸುಲಿನ್ ಹಾರ್ಮೋನ್ ಉತ್ಪಾದನೆ ಕಡಿಮೆಯಾಗುವುದರಿಂದ ಅಥವಾ ದೇಹವು ಇನ್ಸುಲಿನ್ ಅನ್ನು ಸರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗದ ಕಾರಣ ರಕ್ತದಲ್ಲಿ ಗ್ಲೂಕೋಸ್ ಪ್ರಮಾಣ ಹೆಚ್ಚಾಗುವ ಸ್ಥಿತಿಯನ್ನು ಮಧುಮೇಹ ಎಂದು ಕರೆಯಲಾಗುತ್ತದೆ.

ಮಧುಮೇಹದಲ್ಲಿ ಮುಖ್ಯವಾಗಿ ಮೂರು ವಿಧಗಳಿವೆ. ಟೈಪ್-1 ಮಧುಮೇಹದಲ್ಲಿ ದೇಹದಲ್ಲಿ ಇನ್ಸುಲಿನ್ ಉತ್ಪಾದನೆ ಬಹಳ ಕಡಿಮೆಯಾಗುತ್ತದೆ ಅಥವಾ ಸಂಪೂರ್ಣ ನಿಲ್ಲುತ್ತದೆ. ಟೈಪ್-2 ಮಧುಮೇಹದಲ್ಲಿ ದೇಹವು ಇನ್ಸುಲಿನ್ ಅನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದು ಸಾಮಾನ್ಯವಾಗಿ ಕಂಡುಬರುವ ಮಧುಮೇಹದ ವಿಧವಾಗಿದೆ. ಗರ್ಭಾವಸ್ಥೆಯಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗುವ ಸ್ಥಿತಿಯನ್ನು ಗರ್ಭಾವಸ್ಥೆಯ ಮಧುಮೇಹ ಎಂದು ಕರೆಯಲಾಗುತ್ತದೆ.

*ಪ್ರಮುಖ ಲಕ್ಷಣಗಳು

ಪದೇಪದೇ ಮೂತ್ರ ವಿಸರ್ಜನೆ, ಅತಿಯಾದ ಬಾಯಾರಿಕೆ, ಹಸಿವು ಹೆಚ್ಚಾಗುವುದು, ದೇಹದ ತೂಕ ಕಡಿಮೆಯಾಗುವುದು, ಸುಸ್ತು, ನಿಶ್ಯಕ್ತಿ, ದೃಷ್ಟಿ ಮಂಜಾಗುವುದು, ಗಾಯಗಳು ನಿಧಾನವಾಗಿ ಗುಣವಾಗುವುದು ಹಾಗೂ ಕೈಕಾಲುಗಳಲ್ಲಿ ಜುಮ್ಮೆನಿಸುವಿಕೆ ಮಧುಮೇಹದ ಪ್ರಮುಖ ಲಕ್ಷಣಗಳಾಗಿವೆ. ಕೆಲವರಿಗೆ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳದೆಯೂ ಮಧುಮೇಹ ಇರಬಹುದು. ಆದ್ದರಿಂದ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯವಾಗಿದೆ.

ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕ್ರಮಗಳು

ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ನಡೆದಾಡುವುದು ಅಥವಾ ವ್ಯಾಯಾಮ ಮಾಡುವುದು, ಸಕ್ಕರೆ ಮತ್ತು ಸಿಹಿ ಪದಾರ್ಥಗಳ ಸೇವನೆ ಕಡಿಮೆ ಮಾಡುವುದು, ತರಕಾರಿ, ಸೊಪ್ಪು, ಸಿರಿಧಾನ್ಯ ಹಾಗೂ ನಾರಿನಾಂಶ ಹೆಚ್ಚಿರುವ ಆಹಾರ ಸೇವಿಸುವುದು, ದೇಹದ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಮಧುಮೇಹ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕೆ ಸಹಕಾರಿಯಾಗುತ್ತದೆ.

ಅಲ್ಲದೆ, ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರುವುದು, ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳುವುದು ಹಾಗೂ ನಿಯಮಿತವಾಗಿ ರಕ್ತದಲ್ಲಿನ ಸಕ್ಕರೆ ಪ್ರಮಾಣ ಪರೀಕ್ಷಿಸಿಕೊಳ್ಳುವುದು ಮುಖ್ಯವಾಗಿದೆ.

ಆರೋಗ್ಯ ಇಲಾಖೆಯು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಜಾಗೃತಿ ಕಾರ್ಯಕ್ರಮಗಳು, ಆರೋಗ್ಯ ಕೇಂದ್ರಗಳಲ್ಲಿ ರಕ್ತದ ಸಕ್ಕರೆ ಪರೀಕ್ಷೆ, ಆರೋಗ್ಯ ಶಿಕ್ಷಣ, ಕರಪತ್ರಗಳ ಹಂಚಿಕೆ, ಜಾಥಾ ಹಾಗೂ ಬೀದಿ ನಾಟಕಗಳ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದೆ.

‘ಮಧುಮೇಹದ ಬಗ್ಗೆ ಜಾಗೃತಿ ಮೂಡಿಸಿ – ಆರೋಗ್ಯವಂತ ಸಮಾಜ ನಿರ್ಮಿಸಿ’ ಎಂಬ ಸಂದೇಶದೊಂದಿಗೆ ಈ ಬಾರಿಯ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಲಕನಂದ ಡಿ. ಮಳಗಿ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande