

ಬಳ್ಳಾರಿ, 13 ನವೆಂಬರ್ (ಹಿ.ಸ.)
ಶಾಸಕ ನಾರಾ ಭರತರೆಡ್ಡಿ ಅವರು ಬಳ್ಳಾರಿ ತಾಲೂಕು ಕಚೇರಿಗೆ ಭೇಟಿ ನೀಡಿ, ಸಿಬ್ಬಂದಿಗಳ ಹಾಜರಾತಿ ಮತ್ತು ಕಚೇರಿಯ ವಿವಿಧ ವಿಭಾಗಗಳ ಕಾರ್ಯವೈಖರಿ ಹಾಗೂ ಆಡಳಿತಾತ್ಮಕ ಚಟುವಟಿಕೆಗಳನ್ನು ಪರಿಶೀಲಿಸಿದ್ದಾರೆ.
ತಾಲೂಕು ಕಚೇರಿಯಲ್ಲಿ ಇರುವ ಕಡತಗಳನ್ನು ವಿಲೇವಾರಿ ಮಾಡುತ್ತಿರುವ ಕುರಿತು, ಸಾರ್ವಜನಿಕರಿಗೆ ನೀಡುತ್ತಿರುವ ಸೇವೆಗಳು ಹಾಗೂ
ಸರ್ಕಾರಿ ಯೋಜನೆಗಳ ಅನುಷ್ಠಾನದ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ, ಶಾಸಕ ನಾರಾ ಭರತರೆಡ್ಡಿ ಅವರು, ಜನಸಾಮಾನ್ಯರನ್ನು ಕಚೇರಿಗೆ ಪದೇ ಪದೇ ಅಲೆದಾಡಿಸುವುದರನ್ನು ತಪ್ಪಿಸಿ, ತ್ವರಿತವಾಗಿ ಕೆಲಸ ಮಾಡಿಕೊಡಬೇಕು ಎಂದರು.
ತಾಲೂಕು ಕಚೇರಿಯಲ್ಲಿ ಸಿಗುವ, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಪಹಣಿ, ಖಾತೆ ಬದಲಾವಣೆ, ಭೂಮಿ ಸಂಬಂಧಿತ ಸಮಸ್ಯೆಗಳು, ಪಿಂಚಣಿ, ವಿವಿಧ ಸೌಲಭ್ಯಗಳ ಅರ್ಜಿಗಳು ಸೇರಿ ವಿವಿಧ ಕೆಲಸಗಳಿಗಾಗಿ ಜನರು ಕಂದಾಯ ಇಲಾಖೆಯನ್ನು ಅವಲಂಬಿಸಿದ್ದಾರೆ. ಹೀಗಾಗಿ ಸಾರ್ವಜನಿಕರು ಅನಗತ್ಯವಾಗಿ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಬಾರದು. ಪ್ರತಿಯೊಂದು ಅರ್ಜಿಯನ್ನೂ ನಿಗದಿತ ಕಾಲಮಿತಿಯೊಳಗೆ ವಿಲೇವಾರಿ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಹಸೀಲ್ದಾರರ ಕಚೇರಿಗೆ ಬಂದಿದ್ದ ಸಾರ್ವಜನಿಕರೊಂದಿಗೆ ಆಪ್ತವಾಗಿ ಮಾತನಾಡಿದ ಶಾಸಕರು, ಜನರು ಕಚೇರಿಗಳಿಗೆ ಭೇಟಿ ನೀಡುತ್ತಿರುವ ಕಾರಣಗಳು ಮತ್ತು ಸಿಬ್ಬಂದಿಗಳ ಸಹಕಾರಗಳ ಕುರಿತು ಮಾಹಿತಿ ಪಡೆದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್