
ಗದಗ, 13 ನವೆಂಬರ್ (ಹಿ.ಸ.)
ಸಾವಿರಾರು ವರ್ಷಗಳಿಂದ ವ್ಯಕ್ತಿಯಿಂದ ವ್ಯಕ್ತಿಗೆ ಮೌಖಿಕವಾಗಿ ಬೆಳೆದು ಬಂದಿರುವ ಜಾನಪದ ಸಾಹಿತ್ಯದಲ್ಲಿ ನಮ್ಮ ನಾಡಿನ ಇತಿಹಾಸ, ಸಂಸ್ಕೃತಿ ಹಾಗೂ ಆಧ್ಯಾತ್ಮದ ಶ್ರೀಮಂತಿಕೆ ಅಡಕವಾಗಿದೆ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.
ಗದಗ ಲಿಂಗಾಯತ ಪ್ರಗತಿಶೀಲ ಸಂಘದ ವತಿಯಿಂದ ಆಯೋಜಿಸಿದ್ದ 2823ನೇ ಶಿವಾನುಭವ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಜನಪದರು ತಮ್ಮ ಜೀವನಾನುಭವ, ಸುಖ-ದುಃಖ ಹಾಗೂ ಬದುಕಿನ ಆಗುಹೋಗುಗಳನ್ನು ತಮ್ಮ ಕಂಠಸಿರಿಯಿಂದ ಒಬ್ಬರಿಂದ ಮತ್ತೊಬ್ಬರಿಗೆ ಪಸರಿಸುವ ಮೂಲಕ ಜಾನಪದ ಸಾಹಿತ್ಯವನ್ನು ಬೆಳೆಸಿದ್ದಾರೆ. ಆಧುನಿಕ ತಂತ್ರಜ್ಞಾನ ಯುಗದಲ್ಲಿ ಇಂತಹ ಅಮೂಲ್ಯ ಸಾಹಿತ್ಯವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಜಾನಪದ ವಿದ್ವಾಂಸರಾದ ಗದ್ಗಿಮಠ, ಎಂ.ಎಸ್. ಸುಂಕಾಪೂರ ಸೇರಿದಂತೆ ಅನೇಕರು ಜಾನಪದ ಸಾಹಿತ್ಯದ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದಾರೆ. ಕಿವಿಗೆ ಇಂಪು ನೀಡುವ ಜಾನಪದ ಗೀತೆಗಳು ದೇಹದ ದಣಿವನ್ನು ನೀಗಿಸಿ ಕೆಲಸದಲ್ಲಿ ಉತ್ಸಾಹವನ್ನು ಇಮ್ಮಡಿಗೊಳಿಸುವ ಶಕ್ತಿ ಹೊಂದಿವೆ. ಜಾನಪದ ವಿಶ್ವವಿದ್ಯಾಲಯವು ಹೊಸ ಪ್ರಯೋಗಗಳ ಮೂಲಕ ಈ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿಪಡಿಸಬೇಕು ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನ ಪರಿಷತ್ತಿಗೆ ಮೂರನೇ ಬಾರಿಗೆ ಆಯ್ಕೆಯಾದ ಪ್ರೊ. ಎಸ್.ವಿ. ಸಂಕನೂರ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದ ಪಾಂಡಪ್ಪ ಲವಾಣಿ ಅವರನ್ನು ಸನ್ಮಾನಿಸಲಾಯಿತು. ಗದಗ ಪರಿಸರದ ಜಾನಪದ ಕಲಾವಿದರಾದ ಕೋಟುಮಚಗಿಯ ಇಮಾಮಸಾಬ ಹುಯಿಲಗೋಳ ಹಾಗೂ ಲಕ್ಕುಂಡಿಯ ಅನುಸೂಯ ಭೂಮಣ್ಣವರ ಅವರನ್ನೂ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರೊ. ಎಸ್.ವಿ. ಸಂಕನೂರ ಅವರು, ರಾಜ್ಯ ಸರ್ಕಾರದಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಭರ್ತಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಗದಗ ಜಿಲ್ಲೆಗೆ ಕೈಗಾರಿಕಾ ಯೋಜನೆಗಳು ಬಂದರೆ ಉದ್ಯೋಗವಂಚಿತ ಯುವಕರಿಗೆ ಜೀವನಾಧಾರವಾಗಲಿದೆ. ಈ ನಿಟ್ಟಿನಲ್ಲಿ ತಾವು ಕೂಡ ಪ್ರಯತ್ನಿಸುವುದಾಗಿ ತಿಳಿಸಿದರು.
ಜಾನಪದ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯ ಕಲಾವಿದ ಪಾಂಡಪ್ಪ ಲವಾಣಿ ಅವರು ವಿವಿಧ ಜಾನಪದ ಗೀತೆಗಳನ್ನು ಹಾಡಿ ಸಭಿಕರನ್ನು ರಂಜಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಮು ಮೂಲಗಿ ಮಾತನಾಡಿ, ಕನ್ನಡ ಸಾಹಿತ್ಯ ಮೌಖಿಕ ಪರಂಪರೆಯ ಮೂಲಕ ಬೆಳೆದು ಬಂದಿದೆ. ಜಾನಪದ ಗೀತೆಗಳು ನಮ್ಮ ನಾಡಿನ ಸಂಸ್ಕೃತಿ ಮತ್ತು ಬದುಕಿನ ಪ್ರತಿಬಿಂಬವಾಗಿವೆ. ಕನ್ನಡದ ಹಿರಿಯ ಸಾಹಿತಿ ಕೆ.ವಿ. ನಾರಾಯಣ ಅವರ ಅನಿರೀಕ್ಷಿತ ಅಗಲಿಕೆಯಿಂದ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ವಿಷಾದಿಸಿದರು.
ಕಾರ್ಯಕ್ರಮದಲ್ಲಿ ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ಅವರಿಂದ ವಚನ ಸಂಗೀತ, ಸಾಗರ ಕದ್ನಳ್ಳಿ ಅವರಿಂದ ಧರ್ಮಗ್ರಂಥ ಪಠಣ ಹಾಗೂ ಯಶವಂತ ದಳವಾಯಿ ಅವರಿಂದ ವಚನ ಚಿಂತನ ನಡೆಯಿತು. ಧಾರವಾಡದ ಸುರೇಶ ದಾನಪ್ಪ ಹಾಲಬಾವಿ ಅವರು ದಾಸೋಹ ಸೇವೆ ವಹಿಸಿಕೊಂಡಿದ್ದರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಡಾ. ಉಮೇಶ ಪುರದ ಸ್ವಾಗತಿಸಿದರು. ಡಾ. ಕಲ್ಲನಗೌಡರ ಹಾಗೂ ವಿದ್ಯಾ ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು. ವಚನಮಂಗಲದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
ಈ ಸಂದರ್ಭದಲ್ಲಿ ಡಾ. ಆದೇಶ ಅಂಗಡಿ, ಡಾ. ಪ್ರಭು ಗಂಜಿಹಾಳ, ಸೋಮು ಪುರಾಣಿಕ, ಸುನಂದಾ ಪಿಳ್ಳಿ, ಶ್ರೀಮಠದ ಆಡಳಿತಾಧಿಕಾರಿಗಳಾದ ಪ್ರೊ. ಎಸ್.ಎಸ್. ಪಟ್ಟಣಶೆಟ್ಟರ, ಎಸ್.ಎಸ್. ಜೋಶಿ, ಜಿ.ಬಿ. ಪಾಟೀಲ, ರಾಜೇಂದ್ರ ಗಡಾದ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / lalita MP