
ಗದಗ, 13 ನವೆಂಬರ್ (ಹಿ.ಸ.)
ಕಾರ್ಯಕ್ರಮದ ವೇದಿಕೆಯಲ್ಲಿ ಭಾಷಣ ಮಾಡಲು ತೆರಳುತ್ತಿದ್ದ ವೇಳೆ ಮಾಜಿ ಸಚಿವ ಎಚ್.ಕೆ. ಪಾಟೀಲ ಅವರು ಆಯತಪ್ಪಿ ಕೆಳಗೆ ಬಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಗದಗ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ನಿನ್ನೆ ಮುಂಡರಗಿ ತಾಲೂಕು ನಾಗರಿಕರ ವೇದಿಕೆ ವತಿಯಿಂದ ಆಯೋಜಿಸಿದ್ದ ವಿಧಾನಸಭೆ ಹಾಗೂ ವಿಧಾನಪರಿಷತ್ ಸಭಾಪತಿಗಳ ಸನ್ಮಾನ ಸಮಾರಂಭದಲ್ಲಿ ಈ ಘಟನೆ ನಡೆದಿದೆ. ವಿಧಾನಸಭೆಯ ಸಭಾಧ್ಯಕ್ಷ ಜಿ.ಎಸ್. ಪಾಟೀಲ ಹಾಗೂ ವಿಧಾನಪರಿಷತ್ ಸಭಾಪತಿ ಸಲೀಂ ಅಹ್ಮದ್ ಅವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಭಾಷಣ ಮಾಡಲು ವೇದಿಕೆಗೆ ತೆರಳುತ್ತಿದ್ದ ಮಾಜಿ ಸಚಿವ ಎಚ್.ಕೆ. ಪಾಟೀಲ ಅವರ ಕಾಲಿಗೆ ಟೇಬಲ್ ತಾಗಿದ್ದು, ಆಯತಪ್ಪಿ ವೇದಿಕೆಯ ಮೇಲೆಯೇ ಕೆಳಗೆ ಕುಳಿತಿದ್ದಾರೆ. ತಕ್ಷಣವೇ ವೇದಿಕೆಯಲ್ಲಿದ್ದ ಮುಖಂಡರು ಧಾವಿಸಿ ಅವರನ್ನು ಮೇಲಕ್ಕೆ ಎಬ್ಬಿಸಿದ್ದಾರೆ. ಬಳಿಕ ಯಾವುದೇ ತೊಂದರೆಯಿಲ್ಲದೆ ಎಚ್.ಕೆ. ಪಾಟೀಲ ಅವರು ತಮ್ಮ ಭಾಷಣವನ್ನು ಮುಂದುವರಿಸಿದ್ದಾರೆ.
ಈ ವೇಳೆ ವೇದಿಕೆಯ ಮೇಲಿದ್ದ ಸ್ವಾಮೀಜಿಯೊಬ್ಬರು, 'ನನಗೇನೂ ಆಗಿಲ್ಲ' ಎಂದು ಹೇಳುವಂತೆ ಸೂಚಿಸಿದ್ದಾರೆ. ಇದಕ್ಕೆ ಹಾಸ್ಯಭರಿತವಾಗಿ ಪ್ರತಿಕ್ರಿಯಿಸಿದ ಎಚ್.ಕೆ. ಪಾಟೀಲ, 'ನನಗೇನೂ ಆಗಿಲ್ಲ ಎಂದರೆ ದೈಹಿಕವಾಗಿಯೋ ಅಥವಾ ರಾಜಕೀಯವಾಗಿಯೋ?' ಎಂದು ಪ್ರಶ್ನಿಸಿ ನೆರೆದವರಲ್ಲಿ ನಗೆ ಚಿಮ್ಮಿಸಿದ್ದಾರೆ.
ಮುಂದುವರಿದು, 'ನಿಮ್ಮೆಲ್ಲರ ಪ್ರೀತಿ ಹಾಗೂ ಆಶೀರ್ವಾದ ಇರುವವರೆಗೂ ನನಗೇನೂ ಆಗುವುದಿಲ್ಲ' ಎಂದು ಹೇಳುವ ಮೂಲಕ ಅಭಿಮಾನಿಗಳ ಪ್ರೀತಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಅಷ್ಟೇ ಅಲ್ಲದೆ, ಬಿಜೆಪಿ ಮುಖಂಡ ಕೆ.ವಿ. ಹಂಚಿನಾಳ ಅವರ ಹೆಸರನ್ನು ಪ್ರಸ್ತಾಪಿಸಿ, 'ಹಂಚಿನಾಳರು ಟೇಬಲ್ ಸರಿಸಿದರು, ಅದಕ್ಕೆ ನಾನು ಎಡವಿದೆ' ಎಂದು ತಮಾಷೆ ಮಾಡಿದ್ದಾರೆ. ವೇದಿಕೆ ಮೇಲೆ ಆಯತಪ್ಪಿ ಬಿದ್ದರೂ ಹಾಸ್ಯಚಟಾಕಿ ಹಾರಿಸುತ್ತಾ ಭಾಷಣ ಮುಂದುವರಿಸಿದ ಎಚ್.ಕೆ. ಪಾಟೀಲ ಅವರ ಈ ಸ್ವಾರಸ್ಯಕರ ಪ್ರಸಂಗದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP