
ಗದಗ, 13 ನವೆಂಬರ್ (ಹಿ.ಸ.)
ಗದಗ ನಗರದ ಹಿರಿಯ ಉದ್ಯಮಿ ಪ್ರೇಮನಾಥಸಾ ನಾರಾಯಣಸಾ ಕಾಟೀಗರ ಅವರ ಪುತ್ರಿ ಹಾಗೂ ಬೆಂಗಳೂರಿನಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿ ಸೇವೆ ಸಲ್ಲಿಸುತ್ತಿರುವ ಸಿಎ ಪೂಜಾ ಸಂದೀಪ ದಾನಿ ಅವರು ಯುನೈಟೆಡ್ ಕಿಂಗ್ಡಮ್ನ ಅಸೋಸಿಯೇಷನ್ ಆಫ್ ಚಾರ್ಟರ್ಡ್ ಸರ್ಟಿಫೈಡ್ ಅಕೌಂಟೆಂಟ್ಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಸಾಧನೆ ಮಾಡಿದ್ದಾರೆ.
ಮೊದಲಿನಿಂದಲೂ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದ ಪೂಜಾ ದಾನಿ ಅವರು ಗದಗದ ಆದರ್ಶ ಶಿಕ್ಷಣ ಸಮಿತಿಯ ದೇವದತ್ತ ಕುರ್ತಕೋಟಿ ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಪಿಯುಸಿ ಶಿಕ್ಷಣ ಪೂರೈಸಿದ್ದಾರೆ. ನಂತರ ಜೆ.ಟಿ. ಕಾಲೇಜಿನಲ್ಲಿ ಬಿಬಿಎ ಪದವಿ ಪಡೆದಿದ್ದಾರೆ. ಬಳಿಕ ನಾಡಿನ ಹಿರಿಯ ಚಾರ್ಟರ್ಡ್ ಅಕೌಂಟೆಂಟ್ ಆನಂದ ಎಲ್. ಪೊತ್ನೀಸ್ ಅವರ ಮಾರ್ಗದರ್ಶನದಲ್ಲಿ ಆರ್ಟಿಕಲ್ಶಿಪ್ ಪೂರ್ಣಗೊಳಿಸಿದ್ದಾರೆ.
ಪ್ರಸ್ತುತ ಬೆಂಗಳೂರಿನಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿ ವೃತ್ತಿ ನಿರ್ವಹಿಸುತ್ತಿರುವ ಪೂಜಾ ದಾನಿ ಅವರು ಅಂತರರಾಷ್ಟ್ರೀಯ ಮಟ್ಟದ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ತಮ್ಮ ಶೈಕ್ಷಣಿಕ ಸಾಧನೆಗೆ ಮತ್ತೊಂದು ಗರಿ ಮೂಡಿಸಿಕೊಂಡಿದ್ದಾರೆ. ಅವರ ಪತಿ ಕೂಡ ಬೆಂಗಳೂರಿನಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪೂಜಾ ಸಂದೀಪ ದಾನಿ ಅವರ ಸಾಧನೆಗೆ ಎಸ್ಎಸ್ಕೆ ಸಮಾಜದ ಪಂಚ ಕಮಿಟಿ ಅಧ್ಯಕ್ಷ ಫಕೀರಸಾ ಭಾಂಡಗೆ, ಉದ್ಯಮಿ ಈಶ್ವರಸಾ ಮೆಹರವಾಡೆ, ಬಿ.ಎಚ್. ಲದವಾ ಸೇರಿದಂತೆ ಹಲವು ಗಣ್ಯರು ಅಭಿನಂದನೆ ಸಲ್ಲಿಸಿ, ಮುಂದಿನ ವೃತ್ತಿಜೀವನದಲ್ಲಿ ಇನ್ನಷ್ಟು ಯಶಸ್ಸು ಗಳಿಸಲಿ ಎಂದು ಹಾರೈಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP