

ಗದಗ, 13 ನವೆಂಬರ್ (ಹಿ.ಸ.)
ರಾಜ್ಯದಲ್ಲಿ ಮಳೆಯ ಕೊರತೆ, ಬೆಳೆ ನಷ್ಟ ಹಾಗೂ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ರೈತರು ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ, ಅನ್ನದಾತರೊಂದಿಗೆ ದೀಪಾವಳಿ ಹಬ್ಬ ಆಚರಿಸುವ ಮೂಲಕ ಬಿಜೆಪಿ ನಾಯಕರು ರೈತರಲ್ಲಿ ಹೊಸ ಭರವಸೆ ಮೂಡಿಸುವ ಪ್ರಯತ್ನ ಮಾಡಿದರು.
ಗದಗ ತಾಲೂಕಿನ ಹರ್ತಿ ಗ್ರಾಮದ ತೇರಿನ ಬಯಲಿನಲ್ಲಿ ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ಅವರ ನೇತೃತ್ವದಲ್ಲಿ ರೈತರೊಂದಿಗೆ ದೀಪಾವಳಿ ಸಂಭ್ರಮ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪಟಾಕಿ ಸಿಡಿಸಿ, ಸಡಗರದಿಂದ ಹಬ್ಬ ಆಚರಿಸುವುದಕ್ಕಿಂತ ರೈತರೊಂದಿಗೆ ಸಂತಸ ಹಂಚಿಕೊಂಡು, ಅವರ ಬದುಕಿನಲ್ಲಿ ಸಮೃದ್ಧಿ ನೆಲೆಸಲಿ ಎಂಬ ಆಶಯದೊಂದಿಗೆ ಈ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಂಗವಾಗಿ ಗ್ರಾಮದೇವತೆ ದ್ಯಾಮವ್ವ ದೇವಿ ದೇವಸ್ಥಾನದಿಂದ ತೇರಿನ ಬಯಲಿನವರೆಗೆ ಮಹಿಳೆಯರು ಪೂರ್ಣಕುಂಭ ಹೊತ್ತು ಸಾಗಿದ ಬೃಹತ್ ಕುಂಭಮೇಳ ಗಮನ ಸೆಳೆಯಿತು. ವಿವಿಧ ಜಾನಪದ ಕಲಾತಂಡಗಳ ಪ್ರದರ್ಶನ ಮೆರವಣಿಗೆಗೆ ವಿಶೇಷ ಮೆರುಗು ನೀಡಿತು. ರೈತರು ಹಸಿರು ಶಾಲು ಧರಿಸಿ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಹರ್ತಿ ಗ್ರಾಮದ ಜೊತೆಗೆ ಕುರ್ತಕೋಟಿ, ಅಂತೂರ-ಬೆಂತೂರ, ಮುಳಗುಂದ, ಚಿಂಚಲಿ, ಕಣವಿ, ಹೊಸೂರು ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಗ್ರಾಮಗಳಿಂದ ಸಾವಿರಾರು ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ರೈತ ಮಹಿಳೆಯರಿಗೆ ಉಡಿ ತುಂಬಿ ಗೌರವ ಸಲ್ಲಿಸಲಾಯಿತು. ರೈತರಿಗೆ ಮಡಿ ನೀಡಿ ಸನ್ಮಾನಿಸುವ ಮೂಲಕ ಅನ್ನದಾತರ ಶ್ರಮ ಹಾಗೂ ಕೃಷಿ ಬದುಕಿಗೆ ಗೌರವ ಅರ್ಪಿಸಲಾಯಿತು. ಮಾಜಿ ಸಚಿವ ಶ್ರೀರಾಮುಲು, ಕಳಕಪ್ಪ ಬಂಡಿ ಸೇರಿದಂತೆ ಹಲವು ಬಿಜೆಪಿ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿ ರೈತರೊಂದಿಗೆ ಹಬ್ಬದ ಸಂಭ್ರಮ ಹಂಚಿಕೊಂಡರು.
ಇನ್ನು ಕಾರ್ಯಕ್ರಮವು ಕೇವಲ ದೀಪಾವಳಿ ಆಚರಣೆಗೆ ಸೀಮಿತವಾಗಿರದೆ, ರೈತರ ಒಳಿತಿಗಾಗಿ ಧಾರ್ಮಿಕ ವಿಧಿವಿಧಾನಗಳನ್ನೂ ಒಳಗೊಂಡಿತ್ತು. ಕೊಲ್ಲಾಪುರದಿಂದ ತರಿಸಲಾದ ಮಹಾಲಕ್ಷ್ಮಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಉತ್ತಮ ಮಳೆಯಾಗಿ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಇಂದ್ರದೇವನಿಗೆ ವಿಶೇಷ ಯಜ್ಞ ಹಾಗೂ ಹೋಮ-ಹವನಗಳನ್ನು ನೆರವೇರಿಸಲಾಯಿತು. ಹಾಲುಮತ ಸಮಾಜದ ಸಂಪ್ರದಾಯದಂತೆ ಹಟ್ಟಿ ಪೂಜೆ, ಗೋಪೂಜೆ ಹಾಗೂ ಕೃಷಿ ಪರಿಕರಗಳಿಗೂ ಪೂಜೆ ಸಲ್ಲಿಸುವ ಮೂಲಕ ಕೃಷಿ ಬದುಕಿನ ಅವಿಭಾಜ್ಯ ಅಂಗಗಳಾದ ಎತ್ತು, ಹಸು ಮತ್ತು ಕೃಷಿ ಉಪಕರಣಗಳಿಗೆ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಯಕ್ರಮದ ಆಯೋಜಕ ಅನಿಲ್ ಮೆಣಸಿನಕಾಯಿ, ರೈತರು ದೇಶದ ಬೆನ್ನೆಲುಬಾಗಿದ್ದು, ಅವರ ಬದುಕಿನಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸಬೇಕು. ಮಳೆಯ ಕೊರತೆ ಹಾಗೂ ಬೆಳೆ ನಷ್ಟದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರೊಂದಿಗೆ ಹಬ್ಬದ ಸಂಭ್ರಮ ಹಂಚಿಕೊಳ್ಳಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ರೈತರಿಗೆ ಮೂರು ಹೊತ್ತು ದಾಸೋಹದ ವ್ಯವಸ್ಥೆ ಮಾಡಲಾಗಿತ್ತು. ರೈತರೊಂದಿಗೆ ಹಬ್ಬ ಆಚರಿಸುವ ಮೂಲಕ ಅವರ ಕಷ್ಟ-ನೋವುಗಳಿಗೆ ಸ್ಪಂದಿಸುವ ಪ್ರಯತ್ನಕ್ಕೆ ರೈತರಿಂದಲೂ ಮೆಚ್ಚುಗೆ ವ್ಯಕ್ತವಾಯಿತು. ಮಳೆಯ ಕೊರತೆಯಿಂದ ಹೊಲಗಳು ಒಣಗಿದ್ದು, ಬೆಳೆ ನಷ್ಟದಿಂದ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಹಿಂಗಾರು ಮಳೆಯೂ ಕೈಕೊಟ್ಟರೆ ಕೃಷಿ ಚಟುವಟಿಕೆಗಳಿಗೆ ಮತ್ತಷ್ಟು ಹೊಡೆತ ಬೀಳಲಿದೆ ಎಂಬ ಆತಂಕ ರೈತರನ್ನು ಕಾಡುತ್ತಿದೆ. ಇಂತಹ ಸಂದರ್ಭದಲ್ಲಿ ರೈತರ ಒಳಿತಿಗಾಗಿ ವಿಶೇಷ ಪೂಜೆ ಹಾಗೂ ಯಜ್ಞ ಹಮ್ಮಿಕೊಂಡಿರುವುದು ಸಂತಸ ತಂದಿದೆ. ದೇವರ ಕೃಪೆಯಿಂದ ಉತ್ತಮ ಮಳೆಯಾಗಿ ರೈತರ ಬದುಕು ಹಸನಾಗಲಿ ಎಂದು ರೈತರು ಆಶಯ ವ್ಯಕ್ತಪಡಿಸಿದರು.
ಒಟ್ಟಾರೆ, ಹರ್ತಿ ಗ್ರಾಮದಲ್ಲಿ ನಡೆದ ರೈತರೊಂದಿಗಿನ ದೀಪಾವಳಿ ಆಚರಣೆಯಲ್ಲಿ ಕುಂಭಮೇಳ, ಧಾರ್ಮಿಕ ವಿಧಿವಿಧಾನಗಳು, ರೈತ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ರೈತರಿಗೆ ಗೌರವ ಸಲ್ಲಿಸುವ ಮೂಲಕ ಹಬ್ಬಕ್ಕೆ ವಿಶೇಷ ಮೆರುಗು ನೀಡಲಾಯಿತು. ಮುಂದಿನ ದೀಪಾವಳಿಯ ವೇಳೆಗೆ ಬರದ ಕತ್ತಲು ದೂರವಾಗಿ ಹೊಲಗಳಲ್ಲಿ ಹಸಿರು ಬೆಳೆದು, ಅನ್ನದಾತರ ಬದುಕಿನಲ್ಲಿ ಸಮೃದ್ಧಿಯ ಬೆಳಕು ಮೂಡಲಿ ಎಂಬುದು ಎಲ್ಲರ ಆಶಯವಾಗಿತ್ತು.
---------------
ಹಿಂದೂಸ್ತಾನ್ ಸಮಾಚಾರ್ / lalita MP