
ಬಳ್ಳಾರಿ, 12 ನವೆಂಬರ್ (ಹಿ.ಸ.)
ಬಳ್ಳಾರಿ ನಗರದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳಿಗೆ ಕಡಿವಾಣ ಹಾಕಲು ಮತ್ತು ಸಾರ್ವಜನಿಕರ ಸುರಕ್ಷತೆಗಾಗಿ ಭಾರಿ ವಾಹನಗಳ ಸಂಚಾರಕ್ಕೆ ಸಂಬಂಧಿಸಿದಂತೆ ಹೊಸ ಮಾರ್ಗಗಳ ಪರಿಷ್ಕೃತ ಆದೇಶವನ್ನು ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ಅವರು ತಿಳಿಸಿದ್ದಾರೆ.
ಬಳ್ಳಾರಿ ನಗರ ವ್ಯಾಪ್ತಿಯಲ್ಲಿ 2026ರ ಜನವರಿಯಿಂದ ಅಕ್ಟೋಬರ್ ಅಂತ್ಯದವರೆಗೆ ಒಟ್ಟು 121 ರಸ್ತೆ ಅಪಘಾತಗಳು ಸಂಭವಿಸಿದ್ದು, ಈ ದುರ್ಘಟನೆಗಳಲ್ಲಿ 44 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕಾರಣ ಜಿಲ್ಲಾ ಪೋಲೀಸ್ ಅಧೀಕ್ಷಕರ ವರದಿಯನ್ನು ಪರಿಗಣಿಸಿ, ಈ ಹಿಂದೆ ನೀಡಿದ್ದ ಅಧಿಸೂಚನೆಗಳನ್ನು ಹಿಂಪಡೆದು ಇದೀಗ ಹೊಸ ಆದೇಶವನ್ನು ಜಾರಿಗೊಳಿಸಲಾಗಿದೆ.
ತೋರಣಗಲ್ಲು/ಕುಡತಿನಿ ಕಡೆಯಿಂದ ಸಿರುಗುಪ್ಪ ಕಡೆಗೆ: ಹೊಸಪೇಟೆ ರಸ್ತೆ ಬೈಪಾಸ್, ಹಲಕುಂದಿ ಬೈಪಾಸ್, ಎ.ಪಿ.ಎಂ.ಸಿ. ಸರ್ಕಲ್, ಹೆಚ್.ಆರ್.ಗವಿಯಪ್ಪ ಸರ್ಕಲ್, ಅಂಬೇಡ್ಕರ್ ಸರ್ಕಲ್, ವಾಲ್ಮೀಕಿ ಸರ್ಕಲ್ ಹಾಗೂ ಹವಂಬಾವಿ ಮುಖಾಂತರ ಸಂಚರಿಸಬೇಕು.
ಮೋಕಾ/ಆಲೂರು ಕಡೆಯಿಂದ ಸಿರುಗುಪ್ಪ ಕಡೆಗೆ: ಕೆ.ಇ.ಬಿ ಸರ್ಕಲ್, ಸಂಗಂ ಸರ್ಕಲ್, ಅನಂತಪುರ ಬೈಪಾಸ್, ಹಲಕುಂದಿ ಬೈಪಾಸ್, ಎ.ಪಿ.ಎಂ.ಸಿ. ಸರ್ಕಲ್, ಹೆಚ್.ಆರ್.ಗವಿಯಪ್ಪ ಸರ್ಕಲ್, ಅಂಬೇಡ್ಕರ್ ಸರ್ಕಲ್, ವಾಲ್ಮೀಕಿ ಸರ್ಕಲ್ ಮತ್ತು ಹವಂಬಾವಿ ಮೂಲಕ ವಾಹನಗಳು ಸಾಗಬೇಕು.
ಬೆಂಗಳೂರು/ಚಳ್ಳಕೆರೆ ಕಡೆಯಿಂದ ಬಳ್ಳಾರಿ ಮೂಲಕ ತೋರಣಗಲ್ಲು ಕಡೆಗೆ: ಎನ್.ಹೆಚ್. 67 ಅಂಕೋಲ-ಗುತ್ತಿ ಬೈಪಾಸ್ ಹೆದ್ದಾರಿ ಹಾಗೂ ಹೊಸಪೇಟೆ ಬೈಪಾಸ್ ರಸ್ತೆ ಮುಖಾಂತರ ಸಂಚರಿಸಲು ಸೂಚಿಸಲಾಗಿದೆ.
ಗುತ್ತಿ, ಪಿ.ಡಿ.ಹಳ್ಳಿ ಮತ್ತು ಅನಂತಪುರದಿಂದ ಸಿರುಗುಪ್ಪ ಕಡೆಗೆ: ಹಲಕುಂದಿ ಬೈಪಾಸ್, ಎ.ಪಿ.ಎಂ.ಸಿ. ಸರ್ಕಲ್, ಮೋತಿ ಸರ್ಕಲ್, ಅಂಬೇಡ್ಕರ್ ಸರ್ಕಲ್, ವಾಲ್ಮೀಕಿ ಸರ್ಕಲ್ ಹಾಗೂ ಹವಂಬಾವಿ ಮುಖಾಂತರ ಸಂಚರಿಸಲು ಸೂಚಿಸಲಾಗಿದೆ.
ಬೆಂಗಳೂರು/ಚಳ್ಳಕೆರೆ ಕಡೆಯಿಂದ ಅನಂತಪುರಕ್ಕೆ: ಎನ್.ಹೆಚ್. 67 ಅಂಕೋಲ-ಗುತ್ತಿ ಬೈಪಾಸ್ ರಸ್ತೆ ಪಿ.ಡಿ.ಹಳ್ಳಿ ಮುಖಾಂತರ ವಾಹನಗಳು ಸಂಚರಿಸಬೇಕು.
ಕರ್ನೂಲ್/ಆಲೂರು ಕಡೆಯಿಂದ ಬಳ್ಳಾರಿ ಮೂಲಕ ತೋರಣಗಲ್ಲು ಕಡೆಗೆ: ಛತ್ರಗುಡಿ ಮತ್ತು ಪಿ.ಡಿ.ಹಳ್ಳಿ ಅನಂತಪುರ ಬೈಪಾಸ್ ರಸ್ತೆ ಹೊಸಪೇಟೆ ರಸ್ತೆ ಬೈಪಾಸ್ ಮುಖಾಂತರ ಲಾರಿಗಳು ಸಾಗಬೇಕು.
ಭಾರಿ ವಾಹನಗಳ ವೇಗಮಿತಿ: ನಗರ ವ್ಯಾಪ್ತಿಯಲ್ಲಿ ಸಂಚರಿಸುವ ಎಲ್ಲಾ ಭಾರಿ ವಾಹನಗಳಿಗೆ ಗರಿಷ್ಠ 30 ಕಿ.ಮೀ ಪ್ರತಿ ಗಂಟೆಗೆ ವೇಗ ಮಿತಿಯನ್ನು ಕಡ್ಡಾಯಗೊಳಿಸಲಾಗಿದೆ.
ಅಗತ್ಯ ವಸ್ತುಗಳ ಸಾಗಾಣಿಕೆಗೆ ವಿನಾಯಿತಿ:
ಅಗತ್ಯ ವಸ್ತುಗಳ ಅಧಿನಿಯಮ 1955ರನ್ವಯ ವೈದ್ಯಕೀಯ ಸಾಮಗ್ರಿಗಳು, ಔಷಧಿಗಳು, ಹಣ್ಣು, ತರಕಾರಿ, ಹಾಲು, ಇಂಧನ, ಗೊಬ್ಬರ, ಗ್ಯಾಸ್, ಪಡಿತರ ಅಕ್ಕಿ, ಕೋರಿಯರ್, ಪೆÇೀಸ್ಟಲ್ ವಾಹನಗಳು ಹಾಗೂ ಕೃಷಿ ಉತ್ಪನ್ನಗಳನ್ನು ಸಾಗಿಸುವ ವಾಹನಗಳ ನಗರ ಪ್ರವೇಶಕ್ಕೆ ಯಾವುದೇ ನಿರ್ಭಂಧವಿರುವುದಿಲ್ಲ.
ಟಿಪ್ಪರ್ ಹಾಗೂ ಸಿವಿಲ್ ಲಾರಿಗಳ ಸಂಚಾರ ಸಮಯ:
ಸಾಮಾನ್ಯ ಸಿವಿಲ್ ಲಾರಿಗಳು (ಟಿಪ್ಪರ್ ಹೊರತುಪಡಿಸಿ): ಮಧ್ಯಾಹ್ನ 12 ರಿಂದ ಮಧ್ಯಾಹ್ನ 3 ಗಂಟೆಯೊಳಗೆ ಮಾತ್ರ ನಿರ್ದಿಷ್ಟ ಮಾರ್ಗಗಳಲ್ಲಿ ನಗರದೊಳಗೆ ಸಂಚರಿಸಲು ಅವಕಾಶ ನೀಡಲಾಗಿದೆ.
ಮರಳು, ಜಲ್ಲಿ, ಸಿಮೆಂಟ್, ಟಿಪ್ಪರ್ ಇತ್ಯಾದಿ ನಿರ್ಮಾಣ ಸಾಮಗ್ರಿ ವಾಹನಗಳು ರಾತ್ರಿ 11 ರಿಂದ ಬೆಳಿಗ್ಗೆ 06 ಗಂಟೆಯವರೆಗೆ ಮಾತ್ರ ನಗರದೊಳಗೆ ಪ್ರವೇಶಿಸಿ ಸಂಚರಿಸಲು ಅವಕಾಶವಿರುತ್ತದೆ ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಹೊರಡಿಸಿರುವ ಪರಿಷ್ಕೃತ ಆದೇಶದಲ್ಲಿ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್