



ಬಳ್ಳಾರಿ, 12 ನವೆಂಬರ್ (ಹಿ.ಸ.)
ಮಕ್ಕಳನ್ನು ದತ್ತು ಪಡೆಯಲು ಇಚ್ಛಿಸುವವರು ಕಾನೂನುಬದ್ಧ ಮಾರ್ಗವನ್ನು ಕಡ್ಡಾಯವಾಗಿ ಅನುಸರಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್. ಹೊಸಮನೆ ಅವರು ತಿಳಿಸಿದ್ದಾರೆ.
ಮಕ್ಕಳ ರಕ್ಷಣಾ ನಿರ್ದೇಶನಾಲಯ (ಬೆಂಗಳೂರು), ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ಸಂಯುಕ್ತಾಶ್ರಯದಲ್ಲಿ ‘ಅಂತರಾಷ್ಟ್ರೀಯ ದತ್ತು ಮಾಸಾಚರಣೆ-2026’ ರ ಅಂಗವಾಗಿ ಹಳೆಯ ಜಿಲ್ಲಾಧಿಕಾರಿಗಳ ಆವರಣದಲ್ಲಿ ಗುರುವಾರ ನಡೆದ ಜಾಗೃತಿ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.
ತೊಟ್ಟಲಲ್ಲಿ ಬೆಳೆಯಬೇಕಾದ ಮಗು ಎಲ್ಲೂ ಅಕ್ರಮವಾಗಿ ಕಳ್ಳಸಾಗಣೆಯಾಗಬಾರದು. ಸಿಂಗಲ್ ಪೇರೆಂಟ್ ಅಥವಾ ಯಾವುದೇ ಕಾರಣದಿಂದ ಜನಿಸಿದ ಮಕ್ಕಳನ್ನು ಕಾನೂನುಬದ್ಧವಾಗಿ ದತ್ತು ಪಡೆಯಲು ಸರ್ಕಾರಿ ಯೋಜನೆಗಳಿದ್ದರೂ, ಹಲವರು ಅಕ್ರಮ ಮಾರ್ಗಗಳನ್ನು ಅನುಸರಿಸುತ್ತಿರುವುದು ಕಂಡುಬರುತ್ತಿದೆ ಎಂದು ಅಭಿಪ್ರಾಯಪಟ್ಟರು.
ಮಕ್ಕಳನ್ನು ಅಕ್ರಮವಾಗಿ ಕಳ್ಳಸಾಗಣೆ ಮಾಡುವವರಿಗೆ ಸುಮಾರು 5 ವರ್ಷಗಳ ಶಿಕ್ಷೆ ಹಾಗೂ 1 ಲಕ್ಷ ರೂಪಾಯಿ ದಂಡ ವಿಧಿಸಲಾಗುತ್ತದೆ. ಅಲ್ಲದೆ, ಆಸ್ಪತ್ರೆಗಳಲ್ಲಿ ಅನಾಥ ಮಕ್ಕಳನ್ನು ಯಾರಾದರೂ ಅಕ್ರಮವಾಗಿ ದತ್ತು ಪಡೆಯಲು ಸಹಾಯ ಮಾಡಿದರೆ ಅಂಥವರಿಗೂ 3 ವರ್ಷಗಳ ಶಿಕ್ಷೆ ಮತ್ತು 1 ಲಕ್ಷ ರೂಪಾಯಿ ದಂಡ ವಿಧಿಸುವ ಕಾನೂನು ಇದೆ ಎಂದು ತಿಳಿಸಿದರು.
ಅನಾಥ ಮತ್ತು ವಿಶೇಷಚೇತನ ಮಕ್ಕಳಿಗೆ ಕಾನೂನುಬದ್ಧವಾಗಿ ಸೂಕ್ತ ಪೆÇೀಷಕರು ದೊರೆತು, ಅವರ ಭವಿಷ್ಯ ಸುರಕ್ಷಿತವಾಗಬೇಕೆಂಬುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಮಕೃಷ್ಣ ನಾಯಕ ಎಂ. ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳ ದತ್ತು ಪಡೆಯುವಿಕೆ ಮತ್ತು ಆರೈಕೆ ಕಾಯ್ದೆ-2015ರ (ದತ್ತು ಮಾಸಾಚರಣೆ-2024) ಪ್ರಕಾರ, ಪ್ರತಿಯೊಬ್ಬ ಪೆÇೀಷಕರು ಮಕ್ಕಳನ್ನು ದತ್ತು ಪಡೆಯಬೇಕಾದರೆ ಕಾನೂನಿನ ಅಡಿಯಲ್ಲಿ ಮಾರ್ಗಸೂಚಿಗಳ ಪ್ರಕಾರವೇ ದತ್ತು ಪಡೆಯಬೇಕು. ಪರಿತ್ಯಕ್ತ ಮಕ್ಕಳು, ಏಕಪೆÇೀಷಕರ ಮಕ್ಕಳು ಅಥವಾ ತಂದೆ-ತಾಯಿಯನ್ನು ಕಳೆದುಕೊಂಡ ಅನಾಥ ಮಕ್ಕಳನ್ನು ಕಾನೂನುಬದ್ಧವಾಗಿ ದತ್ತು ಪಡೆದುಕೊಳ್ಳುವ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಜಾಗೃತಿ ಜಾಥಾವು ಹಳೆಯ ಜಿಲ್ಲಾಧಿಕಾರಿಗಳ ಆವರಣದಿಂದ ಆರಂಭಗೊಂಡು ಗಡಿಗಿ ಚೆನ್ನಪ್ಪ ವೃತ್ತದ ಮೂಲಕ ಮರಳಿ ಹಳೆಯ ಜಿಲ್ಲಾಧಿಕಾರಿಗಳ ಆವರಣಕ್ಕೆ ತಲುಪಿ ಅಂತ್ಯಗೊಂಡಿತು. ಶಾಲಾ- ಕಾಲೇಜು ಮಕ್ಕಳ ಕೈಯಲ್ಲಿ ಘೋಷ ವಾಕ್ಯಗಳ ಫಲಕಗಳು ಗಮನಸೆಳೆದವು.
ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ತ್ರಿವೇಣಿ ಪತ್ತಾರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿಂಧೆ ನಂದಿನಿ, ಜಿಲ್ಲಾ ಬಾಲ ಕಾರ್ಮಿಕ ಯೋಜನೆಯ ಯೋಜನಾಧಿಕಾರಿ ಮೌನೇಶ್, ಜಿಲ್ಲಾಡಳಿತ ಕಚೇರಿಯ ಅಧಿಕಾರಿಗಳು ಸೇರಿದಂತೆ ಇಲಾಖೆಯ ಸಿಬ್ಬಂದಿ ಹಾಗೂ ಶಾಲಾ- ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್