ಮೈಸೂರು ಅರಮನೆ ಮಾಲೀಕತ್ವ ವಿವಾದ ನ್ಯಾಯಾಲಯದಲ್ಲಿದೆ, ಚರ್ಚೆ ಅನಗತ್ಯ: ಯದುವೀರ್ ಒಡೆಯರ್
ಮೈಸೂರು ಅರಮನೆಯ ಮಾಲೀಕತ್ವದ ವಿವಾದ ನ್ಯಾಯಾಲಯದ ಅಂಗಳದಲ್ಲಿದ್ದು, ಈ ಹಂತದಲ್ಲಿ ಚರ್ಚೆ ಅನಗತ್ಯ ಎಂದು ಸಂಸದ ಯದುವೀರ್ ಒಡೆಯರ್ ಹೇಳಿದ್ದಾರೆ.
yaduveer-wodeyar-mysore-palace-ownership-dispute-court


ಮೈಸೂರು, 10 ನವೆಂಬರ್ (ಹಿ.ಸ.):

ಮೈಸೂರು ಅರಮನೆಯ ಮಾಲೀಕತ್ವಕ್ಕೆ ಸಂಬಂಧಿಸಿದ ವಿವಾದ ನ್ಯಾಯಾಲಯದ ಅಂಗಳದಲ್ಲಿದ್ದು, ಈ ಹಂತದಲ್ಲಿ ಅದರ ಬಗ್ಗೆ ಚರ್ಚೆ ನಡೆಸುವುದು ಅನಗತ್ಯ.

ಅರಮನೆ ರಾಜಮನೆತನಕ್ಕೆ ಸೇರಿದ್ದೇ ಅಥವಾ ಇಲ್ಲವೇ ಎಂಬುದರ ಕುರಿತು ಅಂತಿಮ ತೀರ್ಮಾನ ಕೈಗೊಳ್ಳುವುದು ನ್ಯಾಯಾಂಗಕ್ಕೆ ಬಿಟ್ಟ ವಿಚಾರ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರಮನೆಯ ಮಾಲೀಕತ್ವದ ವಿವಾದ ನ್ಯಾಯಾಲಯದಲ್ಲಿದೆ.

ನ್ಯಾಯಾಲಯವೇ ಈ ಬಗ್ಗೆ ಸೂಕ್ತ ತೀರ್ಪು ನೀಡಲಿದೆ. ಹೀಗಾಗಿ ಸದ್ಯಕ್ಕೆ ಈ ವಿಚಾರವಾಗಿ ಹೆಚ್ಚಿನ ಚರ್ಚೆ ನಡೆಸುವ ಅಗತ್ಯವಿಲ್ಲ ಎಂದು ಹೇಳಿದರು.

“ರಾಜಕಾರಣಿಯಾಗಿ ಹೇಳುವುದಾದರೆ, ಕಾರ್ಯಾಂಗ ಮತ್ತು ಶಾಸಕಾಂಗವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ.

ನಮಗೆ ಸೇರಿದ್ದನ್ನು ರಕ್ಷಿಸಿಕೊಳ್ಳಲು ನಾವೇ ಹೋರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಯದುವೀರ್ ಒಡೆಯರ್ ಅಸಮಾಧಾನ ವ್ಯಕ್ತಪಡಿಸಿದರು.

ಇನ್ನು ದಸರಾ ಆಚರಣೆಗೆ ಸಂಬಂಧಿಸಿದಂತೆ ಚಿನ್ನದ ಅಂಬಾರಿ, ರಾಜಸಿಂಹಾಸನ ಹಾಗೂ ಅರಮನೆಯ ವಿಚಾರಗಳ ಕುರಿತು ಪ್ರತಿಕ್ರಿಯಿಸಿದ ಅವರು, ಈ ಎಲ್ಲ ವಿಷಯಗಳಲ್ಲಿ ತಮ್ಮ ತಾಯಿ ಪ್ರಮೋದಾದೇವಿ ಒಡೆಯರ್ ಅವರೇ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಈ ವಿಚಾರಗಳ ಬಗ್ಗೆ ಅವರಿಗೆ ಹೆಚ್ಚಿನ ಮಾಹಿತಿ ಇದೆ. ಈಗಾಗಲೇ ಅವರು ಸವಿಸ್ತಾರವಾಗಿ ವಿವರಣೆ ನೀಡಿದ್ದಾರೆ.

ಅವರ ನಿರ್ಧಾರಕ್ಕೆ ಅನುಗುಣವಾಗಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಅಗತ್ಯವಿದ್ದರೆ ಅವರೇ ಈ ಬಗ್ಗೆ ಪ್ರತಿಕ್ರಿಯಿಸಲಿದ್ದಾರೆ ಎಂದು ತಿಳಿಸಿದರು.

ದಸರಾ ವ್ಯವಸ್ಥೆಗಳ ಬಗ್ಗೆ ಅಸಮಾಧಾನ

ಈ ಬಾರಿಯ ದಸರಾ ಆಚರಣೆಯಲ್ಲಿ ಕಂಡುಬಂದ ಲೋಪದೋಷಗಳ ಬಗ್ಗೆಯೂ ಮಾತನಾಡಿದ ಯದುವೀರ್ ಒಡೆಯರ್, ಆಹಾರ ಮೇಳ ಮತ್ತು ವಿದ್ಯುತ್ ದೀಪಾಲಂಕಾರ ಸೇರಿದಂತೆ ಹಲವು ವಿಭಾಗಗಳಲ್ಲಿ ನಿರೀಕ್ಷಿತ ಮಟ್ಟದ ವ್ಯವಸ್ಥೆ ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಸಣ್ಣಪುಟ್ಟ ಲೋಪದೋಷಗಳನ್ನು ಗುರುತಿಸಿ ಸರಿಪಡಿಸಬೇಕು. ಮುಂದಿನ ವರ್ಷ ಇಂತಹ ಸಮಸ್ಯೆಗಳು ಮರುಕಳಿಸದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು.

ಕಳೆದ ವರ್ಷ ನಮಗೆ ಒಳಗೆ ಪ್ರವೇಶಿಸಲು ಕೂಡ ಅವಕಾಶ ನೀಡಿರಲಿಲ್ಲ. ಈ ಬಾರಿ ಕಂಡುಬಂದಿರುವ ನ್ಯೂನತೆಗಳನ್ನು ಸರಿಪಡಿಸುವ ಅಗತ್ಯವಿದೆ ಎಂದು ಹೇಳಿದರು.

ಮುಂದಿನ ವರ್ಷದ ದಸರಾ ಆಚರಣೆಯನ್ನು ಇನ್ನಷ್ಟು ವ್ಯವಸ್ಥಿತವಾಗಿ ನಡೆಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸಭೆ ನಡೆಸಲಾಗುವುದು.

ಬಳಿಕ ಅಗತ್ಯ ನಿರ್ಧಾರಗಳನ್ನು ಕೈಗೊಂಡು ಉತ್ತಮ ವ್ಯವಸ್ಥೆ ಕಲ್ಪಿಸಲು ಕ್ರಮ ವಹಿಸಲಾಗುವುದು ಎಂದು ಯದುವೀರ್ ಒಡೆಯರ್ ತಿಳಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande