
ಬೆಂಗಳೂರು, 10 ನವೆಂಬರ್ (ಹಿ.ಸ.):
ನಗರದ ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಉದ್ದೇಶದಿಂದ ಬೆಂಗಳೂರು ಉತ್ತರ ನಗರ ಪಾಲಿಕೆ ಐದನೇ ವಿಶೇಷ ದೂರವಾಣಿ ಸಂವಾದ ಕಾರ್ಯಕ್ರಮವನ್ನು ನಡೆಸಿತು.
ಆಯುಕ್ತ ಪೊಮ್ಮಲ ಸುನಿಲ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಹಾಗೂ ಜಂಟಿ ಆಯುಕ್ತ ಮೊಹಮ್ಮದ್ ನಯೀಮ್ ಮೊಮಿನ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಟ್ಟು 12 ಕರೆಗಳು ಸ್ವೀಕೃತವಾಗಿದ್ದು, 8 ದೂರುಗಳನ್ನು ದಾಖಲಿಸಿಕೊಳ್ಳಲಾಗಿದೆ. ಈ ಪೈಕಿ ಎರಡು ದೂರುಗಳನ್ನು ಪರಿಹರಿಸಲಾಗಿದ್ದು, ಉಳಿದ ಆರು ದೂರುಗಳನ್ನು ಮುಂದಿನ ಕ್ರಮಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ವಹಿಸಲಾಗಿದೆ.
ಕಸ ವಿಲೇವಾರಿ ಕುರಿತು ಹೆಚ್ಚು ದೂರು
ಸಾರ್ವಜನಿಕ ಸ್ಥಳಗಳಲ್ಲಿ ಕಸ ಸುರಿಯುತ್ತಿರುವ ಕುರಿತು ನಾಲ್ಕು ದೂರುಗಳು, ಕಸ ಸಂಗ್ರಹಿಸುವ ವಾಹನಗಳು ಸಮಯಕ್ಕೆ ಸರಿಯಾಗಿ ಬಾರದಿರುವ ಕುರಿತು ಮೂರು ದೂರುಗಳು ಹಾಗೂ ರಸ್ತೆ ಗುಡಿಸುವ ಕಾರ್ಯ ನಡೆಯದಿರುವ ಕುರಿತು ಒಂದು ದೂರು ದಾಖಲಾಗಿದೆ.
ಏಳು ವಿಭಾಗಗಳಲ್ಲಿ ಸೂಕ್ಷ್ಮ ಯೋಜನೆ
ನಗರದ ಘನತ್ಯಾಜ್ಯ ನಿರ್ವಹಣೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ಏಳು ವಿಭಾಗಗಳಲ್ಲಿ ಬ್ಲಾಕ್ವಾರು ಸೂಕ್ಷ್ಮ ಯೋಜನೆ ಜಾರಿಗೊಳಿಸಲಾಗುತ್ತಿದೆ. ಮನೆಮನೆಗೆ ತೆರಳಿ ಕಸ ಸಂಗ್ರಹಿಸುವುದು, ಕಸ ಸಂಗ್ರಹಿಸುವ ಆಟೊ ಟಿಪ್ಪರ್ಗಳ ಸಂಚಾರ ಮಾರ್ಗ ಗುರುತಿಸುವುದು, ಪೌರಕಾರ್ಮಿಕರ ರಸ್ತೆವಾರು ಕಾರ್ಯಯೋಜನೆ ರೂಪಿಸುವುದು ಹಾಗೂ ಹೆಚ್ಚಿನ ಪ್ರಮಾಣದಲ್ಲಿ ತ್ಯಾಜ್ಯ ಉತ್ಪಾದಿಸುವ ಸಂಸ್ಥೆಗಳ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ.
ಪ್ರತಿ ಮಂಗಳವಾರ ಬೆಳಿಗ್ಗೆ 7.30ರಿಂದ 9.30ರವರೆಗೆ ವಿಶೇಷ ದೂರವಾಣಿ ಕಾರ್ಯಕ್ರಮ ನಡೆಯಲಿದೆ. ಕಸ ಸಂಗ್ರಹ ವಿಳಂಬ, ವಾಹನಗಳ ಅನಿಯಮಿತ ಸಂಚಾರ, ಸ್ವಚ್ಛತಾ ಕಾರ್ಯ ಹಾಗೂ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಾಗರಿಕರು ಈ ಸಂದರ್ಭದಲ್ಲಿ ತಿಳಿಸಬಹುದು.
ಇದಲ್ಲದೆ, ಇತರೆ ನಾಗರಿಕ ಸೌಲಭ್ಯಗಳ ಸಮಸ್ಯೆಗಳನ್ನು ಆಲಿಸಲು ಆಯುಕ್ತರ ನೇತೃತ್ವದ ನಿಯಮಿತ ದೂರವಾಣಿ ಸಂವಾದ ಪ್ರತಿ ಶುಕ್ರವಾರ ಮುಂದುವರಿಯಲಿದೆ. ನಗರವನ್ನು ಸ್ವಚ್ಛವಾಗಿಡುವ ನಿಟ್ಟಿನಲ್ಲಿ ನಾಗರಿಕರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಹಕರಿಸುವಂತೆ ಬೆಂಗಳೂರು ಉತ್ತರ ನಗರ ಪಾಲಿಕೆ ಪ್ರಕಟಣೆಯಲ್ಲಿ ಮನವಿ ಮಾಡಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.