
ಬೆಂಗಳೂರು, 10 ನವೆಂಬರ್ (ಹಿ.ಸ.):
ರಾಜ್ಯದಲ್ಲಿ ನಾಗರಿಕ ವಿಮಾನಯಾನ ಕ್ಷೇತ್ರವನ್ನು ಬಲಪಡಿಸುವ ಉದ್ದೇಶದಿಂದ ಸರ್ಕಾರ ಸಮಗ್ರವಾದ ಹೊಸ ನೀತಿಯನ್ನು ಸಿದ್ಧಪಡಿಸಿದ್ದು, ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಅನುಮೋದನೆ ಪಡೆಯಲಾಗುವುದು ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಅಧೀನದಲ್ಲಿಯೇ ಕಾರ್ಯನಿರ್ವಹಿಸಲಿರುವ ವಿಮಾನ ನಿಲ್ದಾಣಗಳಿಗೆ ಅಗತ್ಯವಿರುವ ಅನುದಾನ, ವಯಾಬಿಲಿಟಿ ಗ್ಯಾಪ್ ಫಂಡಿಂಗ್ ಹಾಗೂ ಸಮರ್ಥ ನಿರ್ವಹಣಾ ವ್ಯವಸ್ಥೆಯ ಕುರಿತು ಈ ನೀತಿಯಲ್ಲಿ ವಿಶೇಷ ಒತ್ತು ನೀಡಲಾಗಿದೆ.
ಈ ನೂತನ ನೀತಿಯು ದೇಶದ ಇತರ ರಾಜ್ಯಗಳಿಗೂ ಮಾದರಿಯಾಗಿ ಹೊರಹೊಮ್ಮಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ ಸ್ಥಗಿತಗೊಳ್ಳಲು ಕೇಂದ್ರ ಸರ್ಕಾರದ 'ಉಡಾನ್-2' ಯೋಜನೆಯಲ್ಲಿರುವ ಲೋಪಗಳೇ ನೇರ ಕಾರಣ ಎಂದು ಸಚಿವರು ದೂರಿದರು.
ಮಂಗಳೂರು ವಿಮಾನ ನಿಲ್ದಾಣವನ್ನು ಅದಾನಿ ಸಮೂಹಕ್ಕೆ ಹಸ್ತಾಂತರಿಸಿದ ಕೇಂದ್ರ ಸರ್ಕಾರ, ಇದೀಗ ಹುಬ್ಬಳ್ಳಿ ನಿಲ್ದಾಣವನ್ನೂ ಖಾಸಗೀಕರಣಗೊಳಿಸಲು ಮುಂದಾಗಿದೆ.
ಕಲಬುರಗಿ ವಿಮಾನ ನಿಲ್ದಾಣಕ್ಕಾಗಿ ರಾಜ್ಯದಿಂದ 1,000 ಕೋಟಿ ರೂ. ವೆಚ್ಚ ಮಾಡಿ ಕೇಂದ್ರಕ್ಕೆ ಹಸ್ತಾಂತರಿಸಿದರೂ ರಾಜ್ಯಕ್ಕೆ ಯಾವುದೇ ಆದಾಯ ಸಿಗುತ್ತಿಲ್ಲ.
ರಾಜ್ಯ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿರುವ ಸಂಸದ ಬಿ.ವೈ. ರಾಘವೇಂದ್ರ ಅವರು ಮೊದಲು ಈ ವಾಸ್ತವಗಳನ್ನು ಅರಿಯಬೇಕು ಎಂದು ತಿರುಗೇಟು ನೀಡಿದರು.
ಉಡಾನ್ ಯೋಜನೆಯ ಅವಧಿಯನ್ನು 3 ರಿಂದ 5 ವರ್ಷಗಳಿಗೆ ವಿಸ್ತರಿಸಿ, ಆ ಬಳಿಕದ ಐದು ವರ್ಷಗಳ ಕಾಲ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 50:50 ಅನುಪಾತದಲ್ಲಿ ವೆಚ್ಚ ಭರಿಸುವಂತೆ ನಾವು ಸಲಹೆ ನೀಡಿದ್ದೆವು.
ಆದರೆ ಕೇಂದ್ರ ಸರ್ಕಾರ ಇದನ್ನು ನಿರ್ಲಕ್ಷಿಸಿದ ಪರಿಣಾಮ ಇಂದು ದೇಶಾದ್ಯಂತ 17 ವಿಮಾನ ನಿಲ್ದಾಣಗಳು ಬಾಗಿಲು ಮುಚ್ಚುವಂತಾಗಿದೆ ಎಂದರು.
ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ನಿಲ್ದಾಣಗಳನ್ನು ಕೇಂದ್ರಕ್ಕೆ ಬಿಟ್ಟುಕೊಡುವುದು ಸರಿಯಲ್ಲ ಎಂಬ ಕಾರಣಕ್ಕೆ ರಾಯಚೂರು ಹಾಗೂ ವಿಜಯಪುರ ವಿಮಾನ ನಿಲ್ದಾಣಗಳನ್ನು ರಾಜ್ಯವೇ ನಿರ್ವಹಿಸುತ್ತಿದೆ.
ಸ್ಥಗಿತಗೊಂಡಿದ್ದ ಕಲಬುರಗಿ ನಿಲ್ದಾಣಕ್ಕೆ ಕೆಕೆಆರ್ಡಿಬಿಯಿಂದ ಶೇ. 80 ಹಾಗೂ ರಾಜ್ಯ ಸರ್ಕಾರದಿಂದ ಶೇ. 20ರಷ್ಟು ಅನುದಾನ ನೀಡಿ ಸೇವೆಯನ್ನು ಪುನರಾರಂಭಿಸಲಾಗಿದೆ.
ಸಂಸದ ರಾಘವೇಂದ್ರ ಅವರಿಗೆ ಶಕ್ತಿ ಇದ್ದರೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೂ ಇದೇ ಮಾದರಿಯಲ್ಲಿ ಅನುದಾನ ತರಲಿ ಎಂದು ಸವಾಲು ಹಾಕಿದರು.
ಎಥೆನಾಲ್ ಗೊಂದಲಕ್ಕೆ ನಿತಿನ್ ಗಡ್ಕರಿ ಕಾರಣ
ಪೆಟ್ರೋಲ್ನಲ್ಲಿ ಮಿತಿಮೀರಿ ಎಥೆನಾಲ್ ಮಿಶ್ರಣ ಮಾಡುತ್ತಿರುವುದರಿಂದ ಗಂಭೀರ ಸಮಸ್ಯೆಗಳು ಎದುರಾಗಿದ್ದು, ಈ ಅನಾಹುತಕ್ಕೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರೇ ನೇರ ಹೊಣೆ ಎಂದು ಎಂ.ಬಿ. ಪಾಟೀಲ್ ಆರೋಪಿಸಿದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಈ ನಡೆಯನ್ನು ಸಮರ್ಥಿಸಿಕೊಳ್ಳುತ್ತಿರುವುದು ಸರಿಯಲ್ಲ, ಈ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ನಾನು ಹೇಳುವ ಸತ್ಯವನ್ನು ನಂಬದಿದ್ದರೆ, ಸಕ್ಕರೆ ಕಾರ್ಖಾನೆಗಳನ್ನು ನಡೆಸುತ್ತಿರುವ ಮುರುಗೇಶ್ ನಿರಾಣಿ ಮತ್ತು ಪ್ರಭಾಕರ್ ಕೋರೆ ಅವರನ್ನೇ ಕೇಳಿ ತಿಳಿದುಕೊಳ್ಳಲಿ. ನಾವು ಪೆಟ್ರೋಲ್ ಮಾದರಿಗಳನ್ನು ಪರೀಕ್ಷೆಗಾಗಿ ಕೇಂದ್ರ ಸರ್ಕಾರದ ಪ್ರಯೋಗಾಲಯಗಳಿಗೇ ಕಳುಹಿಸಿದ್ದೇವೆ. ಅಲ್ಲಿಂದ ಬಂದ ವರದಿಯ ಮೇಲೆಯೇ ಅವರಿಗೆ ಅನುಮಾನವೇಕೆ? ಎಂದು ಪ್ರಶ್ನಿಸಿದರು.
ಸಕ್ಕರೆ ಕಾರ್ಖಾನೆಗಳಲ್ಲಿ ಎಥೆನಾಲ್ ಸಂಗ್ರಹಣೆ ಮಿತಿ ಮೀರಿದ್ದು, ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರದಲ್ಲೂ ಇದೇ ಪರಿಸ್ಥಿತಿ ಇದೆ.
ಉತ್ಪಾದನೆಗೆ ಭಾರಿ ಉತ್ತೇಜನ ನೀಡಿದ ಕೇಂದ್ರ ಸರ್ಕಾರ, ಅದರ ಖರೀದಿಗೆ ಮುಂದಾಗುತ್ತಿಲ್ಲ. ಈ ಯೋಜನೆಯನ್ನು ದೇಶದ ನಾಲ್ಕೈದು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ (ಪೈಲಟ್ ಪ್ರಾಜೆಕ್ಟ್) ಜಾರಿಗೊಳಿಸಿ ಸಾಧಕ-ಬಾಧಕಗಳನ್ನು ಪರಿಶೀಲಿಸಬೇಕಿತ್ತು.
ಆದರೆ ಗಡ್ಕರಿ ಅವರು ಏಕಾಏಕಿ ಎಥೆನಾಲ್ ಮಿಶ್ರಣವನ್ನು ಹೇರಿದ್ದರಿಂದಲೇ ಇಷ್ಟೆಲ್ಲಾ ಗೊಂದಲ ಸೃಷ್ಟಿಯಾಗಿದೆ ಎಂದು ಸಚಿವರು ಕಿಡಿಕಾರಿದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R