ಬಸ್ ಪ್ರಯಾಣಿಕರಿಗೆ ಕೆಎಸ್ಆರ್ಟಿಸಿಯಿಂದ ಮತ್ತೊಂದು ಹೊರೆ: ಲಗೇಜ್ ಶುಲ್ಕ ಹೆಚ್ಚಳ
ಕೆಲವು ವಿಭಾಗಗಳಲ್ಲಿ ಶುಲ್ಕ ದುಪ್ಪಟ್ಟು; ಪರಿಷ್ಕೃತ ದರ ಇಂದಿನಿಂದಲೇ ಜಾರಿ
ksrtc-doubles-luggage-charges-after-bus-fare-hike-new-rates-come-into-effect


ಬೆಂಗಳೂರು, 10 ನವೆಂಬರ್ (ಹಿ.ಸ.):

ಈಗಾಗಲೇ ಬಸ್ ಪ್ರಯಾಣ ದರ ಏರಿಕೆಯಿಂದ ಸಂಕಷ್ಟ ಎದುರಿಸುತ್ತಿರುವ ರಾಜ್ಯದ ಪ್ರಯಾಣಿಕರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮತ್ತೊಂದು ಹೊರೆ ವಿಧಿಸಿದೆ. ಬಸ್‌ಗಳಲ್ಲಿ ಸಾಗಿಸುವ ಲಗೇಜ್‌ಗಳ ಶುಲ್ಕವನ್ನು ಪರಿಷ್ಕರಿಸಲಾಗಿದ್ದು, ನೂತನ ದರಗಳು ಇಂದಿನಿಂದಲೇ ಜಾರಿಗೆ ಬಂದಿವೆ. ಕೆಲವು ಪ್ರಯಾಣದ ವಿಭಾಗಗಳಲ್ಲಿ ಲಗೇಜ್ ಸಾಗಣೆ ಶುಲ್ಕ ಹೆಚ್ಚಿಸಿರುವುದರಿಂದ ದೂರದ ಪ್ರಯಾಣಿಕರು ಹಾಗೂ ಸಣ್ಣ ವ್ಯಾಪಾರಿಗಳಿಗೆ ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದೆ.

ಬಸ್ ಪ್ರಯಾಣ ದರ ಹೆಚ್ಚಳದ ಬೆನ್ನಲ್ಲೇ ಇದೀಗ ಲಗೇಜ್ ಸಾಗಣೆ ಶುಲ್ಕವನ್ನೂ ನಿಗಮ ಹೆಚ್ಚಿಸಿದೆ. ಪ್ರಯಾಣದ ದೂರದ ಆಧಾರದ ಮೇಲೆ ದರಗಳನ್ನು ಪರಿಷ್ಕರಿಸಲಾಗಿದೆ.

ಮೊದಲ ಐದು ಹಂತಗಳ ಪ್ರಯಾಣಕ್ಕೆ ಈ ಹಿಂದೆ ಇದ್ದ 6 ರೂ. ಶುಲ್ಕವನ್ನು 10 ರೂ.ಗೆ ಹೆಚ್ಚಿಸಲಾಗಿದೆ. ಆರರಿಂದ ಹತ್ತು ಹಂತಗಳವರೆಗಿನ ಪ್ರಯಾಣಕ್ಕೆ 10 ರೂ. ಇದ್ದ ಶುಲ್ಕವನ್ನು 15 ರೂ.ಗೆ ಏರಿಸಲಾಗಿದೆ. 11ರಿಂದ 15 ಹಂತಗಳವರೆಗಿನ ಪ್ರಯಾಣಕ್ಕೆ ಈ ಹಿಂದೆ ವಿಧಿಸುತ್ತಿದ್ದ 20 ರೂ. ಶುಲ್ಕವನ್ನು 25 ರೂ.ಗೆ ಪರಿಷ್ಕರಿಸಲಾಗಿದೆ.

10 ಕೆ.ಜಿ.ವರೆಗೆ ಉಚಿತ ಸಾಗಣೆ

ಪ್ರಯಾಣಿಕರಿಗೆ ಸಂಪೂರ್ಣ ಹೊರೆಯಾಗದಂತೆ ನಿಗಮವು ಉಚಿತ ಲಗೇಜ್ ಸಾಗಣೆಯ ಮಿತಿಯನ್ನೂ ನಿಗದಿಪಡಿಸಿದೆ. ನಿಯಮಗಳ ಪ್ರಕಾರ 10 ಕೆ.ಜಿ.ವರೆಗಿನ ಲಗೇಜ್ ಅನ್ನು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಸಾಗಿಸಲು ಅವಕಾಶವಿದೆ.

ಇದಲ್ಲದೆ, 20 ಕೆ.ಜಿ.ವರೆಗಿನ ಕೆಲವು ನಿಗದಿತ ಸಾಮಗ್ರಿಗಳ ಸಾಗಣೆಗೂ ಉಚಿತ ಅವಕಾಶ ಕಲ್ಪಿಸಲಾಗಿದೆ. ಆದರೆ ನಿಗದಿತ ತೂಕ ಮತ್ತು ಅಳತೆಯ ಮಿತಿಯನ್ನು ಮೀರಿದ ಲಗೇಜ್‌ಗಳಿಗೆ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ.

ಪ್ರಯಾಣಿಕರಿಗೆ ಹೆಚ್ಚುವರಿ ಆರ್ಥಿಕ ಹೊರೆ

ಇತ್ತೀಚಿನ ದಿನಗಳಲ್ಲಿ ಬಸ್ ಟಿಕೆಟ್ ದರ, ಇಂಧನ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಸಂಕಷ್ಟ ಎದುರಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಲಗೇಜ್ ಶುಲ್ಕ ಹೆಚ್ಚಳವೂ ಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾಗುವ ಸಾಧ್ಯತೆಯಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande