
ಬೆಂಗಳೂರು, 10 ನವೆಂಬರ್ (ಹಿ.ಸ.):
ಮದುವೆ ಮತ್ತು ತಾಯ್ತನ ಮಹಿಳೆಯರ ವೃತ್ತಿಜೀವನಕ್ಕೆ ಅಡ್ಡಿಯಾಗಬಾರದು. ಕುಟುಂಬದ ಜವಾಬ್ದಾರಿಗಳಿಗಾಗಿ ಮಹಿಳೆಯರು ತಮ್ಮ ವೃತ್ತಿಪರ ಕನಸುಗಳನ್ನು ತ್ಯಜಿಸಬೇಕಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ಯುಕೆಯಲ್ಲಿ ಉದ್ಯೋಗ ಪಡೆದ ನೇತ್ರ ತಜ್ಞೆಯೊಬ್ಬರಿಗೆ ತಮ್ಮ ಮಗನೊಂದಿಗೆ ಬ್ರಿಟನ್ಗೆ ತೆರಳಲು ಅನುಮತಿ ನೀಡಿರುವ ನ್ಯಾಯಾಲಯ, ಮಹಿಳೆಯ ವೃತ್ತಿಜೀವನದ ಹಕ್ಕಿನ ಜೊತೆಗೆ ತಂದೆ ಮತ್ತು ಮಗುವಿನ ನಡುವಿನ ಬಾಂಧವ್ಯಕ್ಕೂ ಆದ್ಯತೆ ನೀಡಿದೆ.
ಮಹಿಳೆಯರು ಮದುವೆಯಾದ ಬಳಿಕ ಅಥವಾ ತಾಯಿಯಾದ ನಂತರ ತಮ್ಮ ವೃತ್ತಿಜೀವನಕ್ಕೆ ಪೂರ್ಣವಿರಾಮ ಹಾಕಬೇಕಾದ ಅನಿವಾರ್ಯತೆ ಇರಬಾರದು. ಮದುವೆ, ಮಾತೃತ್ವ ಹಾಗೂ ಮಕ್ಕಳನ್ನು ಬೆಳೆಸುವ ಜವಾಬ್ದಾರಿಗಳು ಮಹಿಳೆಯರನ್ನು ಒಂದೇ ಸ್ಥಳಕ್ಕೆ ಸೀಮಿತಗೊಳಿಸಬಾರದು ಎಂಬ ಮಹತ್ವದ ಸಂದೇಶವನ್ನು ನ್ಯಾಯಾಲಯ ನೀಡಿದೆ.
ಯುಕೆಯಲ್ಲಿ ಉದ್ಯೋಗ ಪಡೆದ ನೇತ್ರ ತಜ್ಞೆ
ನ್ಯಾಯಮೂರ್ತಿ ಲಲಿತಾ ಕನ್ನೆಗಂಟಿ ಅವರು ಅಕ್ಟೋಬರ್ 29ರಂದು ಈ ಪ್ರಕರಣದ ಅರ್ಜಿಯನ್ನು ಇತ್ಯರ್ಥಪಡಿಸಿದ್ದಾರೆ. ಮುಂಬೈನಲ್ಲಿ ವಾಸವಿರುವ ಮಹಿಳೆಯ ಪತಿ, ಬೆಂಗಳೂರಿನ ಕುಟುಂಬ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಅಪ್ರಾಪ್ತ ಮಗುವಿನ ಮೂಲ ಪಾಸ್ಪೋರ್ಟ್ ಅನ್ನು ತಾಯಿಗೆ ನೀಡಬೇಕು ಹಾಗೂ ಮಗುವಿನ ವೀಸಾ ಪಡೆಯಲು ಒಪ್ಪಿಗೆ ನೀಡಬೇಕು ಎಂದು ಕುಟುಂಬ ನ್ಯಾಯಾಲಯ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಪತಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಆದರೆ, 2019ರಿಂದ ಮಗುವಿನ ಆರೈಕೆಯ ಸಂಪೂರ್ಣ ಜವಾಬ್ದಾರಿಯನ್ನು ತಾನೇ ನಿರ್ವಹಿಸುತ್ತಿರುವುದಾಗಿ ಮಹಿಳೆ ನ್ಯಾಯಾಲಯಕ್ಕೆ ತಿಳಿಸಿದ್ದರು.
ಯುಕೆಯಲ್ಲಿ ನೇತ್ರ ತಜ್ಞೆಯಾಗಿ ಉದ್ಯೋಗ ದೊರೆತಿದ್ದು, ಅಲ್ಲಿಗೆ ಮಗುವಿನೊಂದಿಗೆ ತೆರಳುವುದರಿಂದ ಉತ್ತಮ ವಸತಿ, ಶಿಕ್ಷಣ, ಆರೋಗ್ಯ ಸೇವೆ ಹಾಗೂ ಆರ್ಥಿಕ ಭದ್ರತೆ ಒದಗಿಸಲು ಸಾಧ್ಯವಾಗಲಿದೆ ಎಂದು ವಾದಿಸಿದ್ದರು.
ತಂದೆ-ಮಗನ ಬಾಂಧವ್ಯಕ್ಕೂ ಆದ್ಯತೆ
ಮಹಿಳೆಯ ವೃತ್ತಿಜೀವನದ ಅವಕಾಶಗಳಿಗೆ ಅಡ್ಡಿಯಾಗಬಾರದು ಎಂಬ ನಿಲುವು ತಳೆದಿರುವ ನ್ಯಾಯಾಲಯ, ತಂದೆ ಮತ್ತು ಮಗುವಿನ ನಡುವಿನ ಸಂಬಂಧವೂ ಮುಂದುವರಿಯಬೇಕು ಎಂದು ಸ್ಪಷ್ಟಪಡಿಸಿದೆ.
ಇದಕ್ಕಾಗಿ ಹಲವು ಷರತ್ತುಗಳನ್ನು ವಿಧಿಸಿದೆ. ಪ್ರತಿದಿನ ಕನಿಷ್ಠ 20 ನಿಮಿಷಗಳ ಕಾಲ ತಂದೆ ಮಗುವಿನೊಂದಿಗೆ ಆಡಿಯೋ ಅಥವಾ ವಿಡಿಯೋ ಕರೆ ಮೂಲಕ ಮಾತನಾಡಲು ತಾಯಿ ಅವಕಾಶ ಕಲ್ಪಿಸಬೇಕು ಎಂದು ಸೂಚಿಸಿದೆ.
ಜತೆಗೆ, ಮಗುವಿನ ಶಾಲಾ ರಜೆಗಳ ಸಂದರ್ಭದಲ್ಲಿ ತಂದೆಗೆ ಭೇಟಿಯಾಗುವ ಅವಕಾಶ ನೀಡಬೇಕು. ವರ್ಷದಲ್ಲಿ ಎರಡು ಬಾರಿ ರಜೆಯ ಅವಧಿಯಲ್ಲಿ ಮಗು ಭಾರತಕ್ಕೆ ಬಂದು ತನ್ನ ರಜೆಯ ಶೇಕಡಾ 75ರಷ್ಟು ಸಮಯವನ್ನು ತಂದೆಯೊಂದಿಗೆ ಕಳೆಯಬೇಕು. ತಂದೆಯೂ ಯುಕೆಗೆ ತೆರಳಿ ಮಗುವಿನೊಂದಿಗೆ ರಜೆಯ ಶೇಕಡಾ 75ರಷ್ಟು ಸಮಯ ಕಳೆಯಲು ಅವಕಾಶ ಕಲ್ಪಿಸಲಾಗಿದೆ.
ಮಹಿಳೆಯರ ಸ್ವಾವಲಂಬನೆಗೆ ನ್ಯಾಯಾಂಗದ ಬೆಂಬಲ
ಮಹಿಳೆಯರ ವೃತ್ತಿಪರ ಬೆಳವಣಿಗೆ, ಆರ್ಥಿಕ ಸ್ವಾವಲಂಬನೆ ಹಾಗೂ ಮಾತೃತ್ವದ ಜವಾಬ್ದಾರಿಗಳ ನಡುವೆ ಸಮತೋಲನ ಸಾಧಿಸುವ ಅಗತ್ಯವನ್ನು ಈ ತೀರ್ಪು ಎತ್ತಿಹಿಡಿದಿದೆ.
ಅದೇ ವೇಳೆ, ಮಗುವಿನ ಹಿತಾಸಕ್ತಿ ಮತ್ತು ತಂದೆಯೊಂದಿಗಿನ ಭಾವನಾತ್ಮಕ ಸಂಬಂಧವನ್ನು ಕಾಪಾಡುವ ಮಹತ್ವವನ್ನೂ ನ್ಯಾಯಾಲಯ ಒತ್ತಿಹೇಳಿದೆ.
ಹೀಗಾಗಿ ಮಹಿಳೆಯರ ವೃತ್ತಿಜೀವನ ಮತ್ತು ಹಕ್ಕುಗಳ ದೃಷ್ಟಿಯಿಂದ ಕರ್ನಾಟಕ ಹೈಕೋರ್ಟ್ನ ಈ ತೀರ್ಪು ಮಹತ್ವ ಪಡೆದುಕೊಂಡಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R