ಒಂಬತ್ತು ಮದುವೆಗಳ ಆರೋಪ ಎದುರಿಸಿದ ಮಹಿಳೆ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣ ರದ್ದು ಪಡಿಸಿದ ಉಚ್ಚ ನ್ಯಾಯಾಲಯ
ಬೆಂಗಳೂರು, 10 ನವೆಂಬರ್ (ಹಿ.ಸ.): ಕೇವಲ 30ನೇ ವಯಸ್ಸಿನಲ್ಲಿ ಒಂಬತ್ತು ಮದುವೆಯಾಗಿದ್ದಾರೆ ಎನ್ನಲಾದ ಮಹಿಳೆಯೊಬ್ಬರು ತಮ್ಮ ಏಳನೇ ಪತಿ ಹಾಗೂ ಹೊಸಪೇಟೆಯ ರಾಜಕಾರಣಿ ರಾಜಾ ಹುಸೇನ್ ವಿರುದ್ಧ ದಾಖಲಿಸಿದ್ದ ಕೌಟುಂಬಿಕ ಕ್ರೌರ್ಯ ಮತ್ತು ವರದಕ್ಷಿಣೆ ಕಿರುಕುಳದ ಕ್ರಿಮಿನಲ್ ಪ್ರಕರಣವನ್ನು ಕರ್ನಾಟಕ ಉಚ್ಚ ನ್
karnataka-high-court-quashes-criminal-case-against-hospet-politician-raja-hussain-over-alleged-marital-cruelty


ಬೆಂಗಳೂರು, 10 ನವೆಂಬರ್ (ಹಿ.ಸ.):

ಕೇವಲ 30ನೇ ವಯಸ್ಸಿನಲ್ಲಿ ಒಂಬತ್ತು ಮದುವೆಯಾಗಿದ್ದಾರೆ ಎನ್ನಲಾದ ಮಹಿಳೆಯೊಬ್ಬರು ತಮ್ಮ ಏಳನೇ ಪತಿ ಹಾಗೂ ಹೊಸಪೇಟೆಯ ರಾಜಕಾರಣಿ ರಾಜಾ ಹುಸೇನ್ ವಿರುದ್ಧ ದಾಖಲಿಸಿದ್ದ ಕೌಟುಂಬಿಕ ಕ್ರೌರ್ಯ ಮತ್ತು ವರದಕ್ಷಿಣೆ ಕಿರುಕುಳದ ಕ್ರಿಮಿನಲ್ ಪ್ರಕರಣವನ್ನು ಕರ್ನಾಟಕ ಉಚ್ಚ ನ್ಯಾಯಾಲಯ ರದ್ದುಗೊಳಿಸಿದೆ.

ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಈ ಮಹತ್ವದ ಆದೇಶ ನೀಡಿದ್ದು, ವೈಯಕ್ತಿಕ ದ್ವೇಷ ಅಥವಾ ಹಣಕಾಸಿನ ಲಾಭಕ್ಕಾಗಿ ಕ್ರಿಮಿನಲ್ ಕಾನೂನನ್ನು ದುರುಪಯೋಗಪಡಿಸಿಕೊಳ್ಳುವ ಪ್ರವೃತ್ತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಪ್ರಕರಣದ ಹಿನ್ನೆಲೆ

ಹೊಸಪೇಟೆಯ ರಾಜಕಾರಣಿ ರಾಜಾ ಹುಸೇನ್ ಮತ್ತು 30 ವರ್ಷದ ಮಹಿಳೆ 2022ರ ಜನವರಿ 13ರಂದು ವಿವಾಹವಾಗಿದ್ದರು. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ದಂಪತಿ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು.

ಇದಾದ ಬಳಿಕ ಮಹಿಳೆ, ಪತಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498ಎ ಅಡಿಯಲ್ಲಿ ವೈವಾಹಿಕ ಕ್ರೌರ್ಯ, ಸೆಕ್ಷನ್ 323ರ ಅಡಿಯಲ್ಲಿ ಹಲ್ಲೆ, ನಿಂದನೆ ಹಾಗೂ ಜೀವ ಬೆದರಿಕೆ ಆರೋಪಗಳಡಿ ಉಡುಪಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು.

ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ಹುಸೇನ್ ವಿರುದ್ಧ ಆರೋಪಪಟ್ಟಿಯನ್ನೂ ಸಲ್ಲಿಸಿದ್ದರು. ಇದನ್ನು ಪ್ರಶ್ನಿಸಿ ರಾಜಾ ಹುಸೇನ್ ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ತನಿಖಾ ದಾಖಲೆಗಳು ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ಪರಿಶೀಲಿಸಿ ಕ್ರಿಮಿನಲ್ ಪ್ರಕ್ರಿಯೆಯನ್ನು ರದ್ದುಗೊಳಿಸಿದೆ.

ಒಂಬತ್ತು ಮದುವೆಗಳ ವಿಚಾರ ವಿಚಾರಣೆ ವೇಳೆ ಪ್ರಸ್ತಾಪ

ವಿಚಾರಣೆ ಸಂದರ್ಭದಲ್ಲಿ ರಾಜಾ ಹುಸೇನ್ ಪರ ವಕೀಲರು, ಮಹಿಳೆಗೆ ಈ ಹಿಂದೆ ಒಟ್ಟು ಒಂಬತ್ತು ಮದುವೆಗಳಾಗಿವೆ ಎಂದು ಆರೋಪಿಸಿ ಸಂಬಂಧಿತ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಆದರೆ ಮಹಿಳೆ ವಿಚಾರಣೆ ವೇಳೆ ತನಗೆ ನಾಲ್ಕು ಮದುವೆಗಳಾಗಿವೆ ಎಂದು ಒಪ್ಪಿಕೊಂಡಿದ್ದರು ಎನ್ನಲಾಗಿದೆ.

ಈ ಹಿಂದಿನ ಮದುವೆಗಳು, ಪ್ರಕರಣಗಳು ಹಾಗೂ ರಾಜಿ ಒಪ್ಪಂದಗಳಿಗೆ ಸಂಬಂಧಿಸಿದ ದಾಖಲೆಗಳನ್ನೂ ನ್ಯಾಯಾಲಯದ ಗಮನಕ್ಕೆ ತರಲಾಗಿತ್ತು.

ಮಹಿಳೆ ಪ್ರತಿ ಬಾರಿ ಮದುವೆಯಾದ ಬಳಿಕ ಕೆಲವೇ ತಿಂಗಳಲ್ಲಿ ಪತಿಯ ವಿರುದ್ಧ ಕೌಟುಂಬಿಕ ಕಿರುಕುಳದ ಪ್ರಕರಣ ದಾಖಲಿಸಿ, ನಂತರ ಹಣಕಾಸಿನ ಪರಿಹಾರ ಪಡೆದು ರಾಜಿ ಮಾಡಿಕೊಳ್ಳುತ್ತಿದ್ದರು ಎಂದು ಹುಸೇನ್ ಪರ ವಕೀಲರು ವಾದಿಸಿದ್ದರು. ಮಹಿಳೆಯ ಮತ್ತೊಬ್ಬ ಪತಿಯೂ ಇದೇ ರೀತಿಯ ಬೆದರಿಕೆ ಎದುರಿಸಿದ್ದಾಗಿ ಪ್ರಮಾಣಪತ್ರ ಸಲ್ಲಿಸಿದ್ದರು ಎನ್ನಲಾಗಿದೆ.

ಕ್ರಿಮಿನಲ್ ಕಾನೂನಿನ ದುರುಪಯೋಗಕ್ಕೆ ಆಕ್ಷೇಪ

ಪ್ರಕರಣದ ವಿಚಾರಣೆ ವೇಳೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠವು ಮದುವೆ, ವೈಮನಸ್ಸು, ಕ್ರಿಮಿನಲ್ ಪ್ರಕರಣ, ಹಣಕಾಸಿನ ರಾಜಿ ಹಾಗೂ ಮತ್ತೊಂದು ಮದುವೆ ಎಂಬ ಸರಣಿ ಪುನರಾವರ್ತನೆಯಾಗಿರುವುದನ್ನು ಗಮನಿಸಿದೆ.

ಹಣಕಾಸಿನ ಲಾಭಕ್ಕಾಗಿ ಕ್ರಿಮಿನಲ್ ಕಾನೂನನ್ನು ದುರುಪಯೋಗಪಡಿಸಿಕೊಳ್ಳುವ ಮಾದರಿ ಪ್ರಕರಣದಲ್ಲಿ ಕಂಡುಬರುತ್ತಿದೆ ಎಂದು ನ್ಯಾಯಾಲಯ ಆಕ್ಷೇಪಿಸಿದೆ.

ಆದರೆ, ಮಹಿಳೆಯೊಬ್ಬರು ಈ ಹಿಂದೆ ಹಲವು ಮದುವೆಯಾಗಿದ್ದಾರೆ ಅಥವಾ ಹಿಂದಿನ ಪತಿಯರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂಬ ಕಾರಣಕ್ಕೆ ಮಾತ್ರ ಅವರ ಚಾರಿತ್ರ್ಯವನ್ನು ಪ್ರಶ್ನಿಸುವಂತಿಲ್ಲ. ಹಾಗೆಯೇ ಅವರ ಮುಂದಿನ ದೂರುಗಳನ್ನೂ ಆ ಕಾರಣದಿಂದಲೇ ತಳ್ಳಿಹಾಕಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಕ್ರಿಮಿನಲ್ ಪ್ರಕ್ರಿಯೆ ಸಂಪೂರ್ಣ ರದ್ದು

ಈ ನಿರ್ದಿಷ್ಟ ಪ್ರಕರಣದಲ್ಲಿ ಮಹಿಳೆ ಮಾಡಿರುವ ಆರೋಪಗಳಿಗೆ ತನಿಖಾ ದಾಖಲೆಗಳಲ್ಲಿ ಸಮರ್ಪಕ ಆಧಾರ ಕಂಡುಬಂದಿಲ್ಲ ಎಂದು ಅಭಿಪ್ರಾಯಪಟ್ಟ ಉಚ್ಚ ನ್ಯಾಯಾಲಯ, ರಾಜಾ ಹುಸೇನ್ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣ ಹಾಗೂ ಕೆಳ ನ್ಯಾಯಾಲಯದಲ್ಲಿ ಮುಂದುವರಿದಿದ್ದ ವಿಚಾರಣಾ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ.

ಕೌಟುಂಬಿಕ ಕ್ರೌರ್ಯದ ದೂರುಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯದ ಜತೆಗೆ, ವೈಯಕ್ತಿಕ ದ್ವೇಷ ಅಥವಾ ಹಣಕಾಸಿನ ಲಾಭಕ್ಕಾಗಿ ಕ್ರಿಮಿನಲ್ ಕಾನೂನನ್ನು ದುರುಪಯೋಗಪಡಿಸಿಕೊಳ್ಳಬಾರದು ಎಂಬ ಎಚ್ಚರಿಕೆಯನ್ನು ಈ ತೀರ್ಪು ನೀಡಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande